ಆಸೀಸ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿತ್ತು ದೊಡ್ಡ ಹೊಡೆತ..! ರೋಹಿತ್ ಪಡೆಯಲ್ಲಿ ಢವ ಢವ
ಚೆನ್ನೈ: 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್ ತಂಡವು ಶುಭಾರಂಭ ಮಾಡಿದೆ. ಇನ್ನು ಆತಿಥೇಯ ಟೀಂ ಇಂಡಿಯಾ, ಮೊದಲ ವಿಶ್ವಕಪ್ ಪಂದ್ಯವನ್ನಾಡಲು ಸಜ್ಜಾಗಿದೆ. ಹೀಗಿರುವಾಗಲೇ ರೋಹಿತ್ ಶರ್ಮಾ ಪಾಳಯದಲ್ಲಿ ನಡುಕ ಆರಂಭವಾಗಿದೆ. ಏನದು ಆತಂಕ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಆತಿಥೇಯ ಟೀಂ ಇಂಡಿಯಾ, ಅಕ್ಟೋಬರ್ 08ರಂದು ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಿದೆ.
ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿರುವ ಟೀಂ ಇಂಡಿಯಾ, ಇದೀಗ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲುವ ಕನಸು ಕಾಣುತ್ತಿದೆ.
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡಲಿರುವ ಮೊದಲ ಪಂದ್ಯದಲ್ಲೇ ಅಗ್ನಿ ಪರೀಕ್ಷೆ ಎದುರಾಗಲಿದ್ದು, 5 ಬಾರಿಯ ವಿಶ್ವಕಪ್ ಚಾಂಪಿಯನ್ ಬಲಾಢ್ಯ ಕಾಂಗರೂ ಪಡೆಯ ಸವಾಲು ಮೆಟ್ಟಿನಿಲ್ಲಬೇಕಾದ ಒತ್ತಡ ರೋಹಿತ್ ಶರ್ಮಾ ಪಡೆಯ ಮೇಲಿದೆ.
ಹೀಗಿರುವಾಗಲೇ ಟೀಂ ಇಂಡಿಯಾಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದ್ದು, ಭಾರತ ತಂಡದ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ಗೆ ಡೆಂಗ್ಯೂ ತಗುಲಿರುವುದು ಪರೀಕ್ಷೆಯ ಬಳಿಕ ದೃಢಪಟ್ಟಿದೆ. ಹೀಗಾಗಿ ಭಾರತ ಆಡಲಿರುವ ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯಕ್ಕೆ ಗಿಲ್ ಅಲಭ್ಯರಾಗುವ ಸಾಧ್ಯತೆಯಿದೆ.
ಶುಭ್‌ಮನ್ ಗಿಲ್ ಈ ವರ್ಷದಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಈ ವರ್ಷ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 72.35ರ ಬ್ಯಾಟಿಂಗ್ ಸರಾಸರಿಯಲ್ಲಿ 1230 ರನ್ ಬಾರಿಸುವ ಮೂಲಕ ಭಾರತ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
Shubmnan Gill Century
ಅದರಲ್ಲೂ ಶುಭ್‌ಮನ್ ಗಿಲ್, ತಾವಾಡಿದ ಕೊನೆಯ 4 ಏಕದಿನ ಪಂದ್ಯಗಳ ಪೈಕಿ 2 ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ಆಸ್ಟ್ರೇಲಿಯಾ ಎದುರು ಗಿಲ್ ಮಿಂಚುವ ನಿರೀಕ್ಷೆಯಿತ್ತು.
ಆದರೆ ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್ ಸಂಪೂರ್ಣ ಫಿಟ್ ಆಗದೇ ಹೋದರೆ, ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಬಹುದು. ಹೀಗಾಗಿ ಗಿಲ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್, ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಇನ್ನು ಕಿಶನ್ ಈ ವರ್ಷ ಆಡಿದ 5 ಏಕದಿನ ಪಂದ್ಯಗಳ ಪೈಕಿ 3 ಅರ್ಧಶತಕ ಸಿಡಿಸಿದ್ದಾರೆ. ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ಕಿಶನ್ ಮಧ್ಯಮ ಕ್ರಮಾಂಕದಲ್ಲಿ 82 ರನ್ ಬಾರಿಸಿದ್ದರು.