T20 World Cup: ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ ಪ್ರಕಟ
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India) ತನ್ನ ಪಾಲಿನ ಎರಡನೇ ಪಂದ್ಯವನ್ನಾಡಲು ಸಜ್ಜಾಗಿದ್ದು, ದುಬೈನಲ್ಲಿಂದು ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು (New Zealand Cricket Team) ಎದುರಿಸಲಿದೆ. ಟೀಂ ಇಂಡಿಯಾ ಪಾಲಿಗೆ ಸೆಮೀಸ್ ಪ್ರವೇಶಿಸುವ ದೃಷ್ಠಿಯಿಂದ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಕಿವೀಸ್ ಎದುರಿನ ಪಂದ್ಯಕ್ಕೆ ಸಂಭಾವ್ಯ ತಂಡ ಹೀಗಿದೆ ನೋಡಿ
1. ಕೆ.ಎಲ್.ರಾಹುಲ್:
ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್. ಐಪಿಎಲ್‌ನಲ್ಲಿ ಮಿಂಚಿದ್ದ ರಾಹುಲ್, ಪಾಕ್ ವಿರುದ್ದದ ಪಂದ್ಯದಲ್ಲಿ ಬ್ಯಾಟಿಂಗ್ ಅನುಭವಿಸಿದ್ದರು. ಇದೀಗ ಕಿವೀಸ್ ಎದುರು ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ
2.ರೋಹಿತ್ ಶರ್ಮಾ:
ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಪಾಕ್ ಎದುರು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದರು. ಬಲಾಢ್ಯ ಕಿವೀಸ್ ಪಡೆಗೆ ಶಾಕ್ ನೀಡಲು ಹಿಟ್‌ಮ್ಯಾನ್ ತಯಾರಿ ನಡೆಸಿದ್ದಾರೆ
3. ವಿರಾಟ್ ಕೊಹ್ಲಿ:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ದ ಟಿ20 ವಿಶ್ವಕಪ್ ಸಮಯೋಚಿತ ಅರ್ಧಶತಕ ಚಚ್ಚಿದ್ದರು. ಇದೀಗ ಕಿವೀಸ್ ಎದುರು ಕೂಡಾ ಅಂತಹದ್ದೇ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ
4.ಸೂರ್ಯಕುಮಾರ್ ಯಾದವ್:
ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಪಾಕ್ ಎದುರು ಸೂರ್ಯ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇಶಾನ್ ಕಿಶನ್ ಹಾಗೂ ಸೂರ್ಯ ನಡುವೆ ಪೈಪೋಟಿಯಿದೆಯಾದರೂ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯನಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.
5.ರಿಷಭ್ ಪಂತ್:
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್. ಮಧ್ಯಮ ಕ್ರಮಾಂಕದಲ್ಲಿ ನಿರ್ಭಯವಾಗಿ ಬ್ಯಾಟ್ ಬೀಸುವ ಕ್ಷಮತೆ ಪಂತ್‌ಗಿದೆ. ಪಂತ್ ಅಬ್ಬರಿಸಿದರೆ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕುವುದರಲ್ಲಿ ಅಚ್ಚರಿಯಿಲ್ಲ.
6. ಹಾರ್ದಿಕ್ ಪಾಂಡ್ಯ:
ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಫಿನಿಶರ್ ಪಾತ್ರ ನಿಭಾಯಿಸಲಿದ್ದಾರೆ. ಕಿವೀಸ್ ಎದುರಿನ ಪಂದ್ಯಕ್ಕೂ ಮುನ್ನ ಪಾಂಡ್ಯ ಬೌಲಿಂಗ್ ಅಭ್ಯಾಸ ನಡೆಸಿದ್ದು, ಪಾಂಡ್ಯಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಹೆಚ್ಚು.
7. ರವೀಂದ್ರ ಜಡೇಜಾ:
ಟೀಂ ಇಂಡಿಯಾ ತಾರಾ ಆಲ್ರೌಂಡರ್. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ಜಡೇಜಾ, ಮಹತ್ವದ ಪಂದ್ಯದಲ್ಲಿ ಗೇಮ್ ಚೇಂಜರ್ ಆಗುವ ಸಾಧ್ಯತೆಯಿದೆ.
8. ಶಾರ್ದೂಲ್ ಠಾಕೂರ್:
ಪಾಕ್ ಎದುರಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಕೊಂಚ ದುಬಾರಿಯಾಗಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಭುವಿಗೆ ವಿಶ್ರಾಂತಿ ನೀಡಿ ಶಾರ್ದೂಲ್ ಠಾಕೂರ್‌ಗೆ ಮಣೆಹಾಕುವ ಸಾಧ್ಯತೆ ಹೆಚ್ಚಿದೆ.
9. ರವಿಚಂದ್ರನ್ ಅಶ್ವಿನ್: ಪಾಕ್ ಎದುರಿನ ಪಂದ್ಯದಲ್ಲಿ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ವಿಕೆಟ್ ಕಬಳಿಸಲು ವಿಫಲರಾಗಿದ್ದರು. ಇನ್ನು ಅಭ್ಯಾಸ ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಅಶ್ವಿನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು.
10. ಮೊಹಮದ್ ಶಮಿ:
ವೇಗಿ ಮೊಹಮ್ಮದ್ ಶಮಿ ಪಾಕ್ ಎದುರು ಕೊಂಚ ದುಬಾರಿಯಾಗಿದ್ದರು. ಆದರೆ ವೇಗದ ದಾಳಿಯ ವಿಭಾಗದಲ್ಲಿ ಮುಂಚೂಣಿ ವಹಿಸುವ ಶಮಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು
11. ಜಸ್‌ಪ್ರೀತ್ ಬುಮ್ರಾ:
ಟೀಂ ಇಂಡಿಯಾ ಯಾರ್ಕರ್ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಆಗಿರುವ ಬುಮ್ರಾ ವಿಶ್ವದ ಯಾವುದೇ ಪಿಚ್‌ನಲ್ಲಿ ಬೇಕಿದ್ದರೂ ಅಪಾಯಕಾರಿಯಾಗಬಲ್ಲ ಬೌಲರ್. ಪಾಕ್ ವಿರುದ್ದ ವಿಕೆಟ್ ಕಬಳಿಸಲು ವಿಫಲವಾಗಿದ್ದ ಬುಮ್ರಾ, ಇದೀಗ ಕಿವೀಸ್ ತಂಡವನ್ನು ಕಾಡಲು ರೆಡಿಯಾಗಿದ್ದಾರೆ