T20 World Cup Final: ಹೀಗಿತ್ತು ನೋಡಿ ನ್ಯೂಜಿಲೆಂಡ್ ತಂಡದ ಫೈನಲ್‌ವರೆಗಿನ ಪಯಣ
ದುಬೈ: 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ (ICC T20 World Cup Final) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ (Aus vs NZ) ತಂಡಗಳು ಕಾದಾಡಲಿವೆ. ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು (New Zealand Cricket Team) ಬಲಾಢ್ಯ ತಂಡಗಳನ್ನು ಬಗ್ಗುಬಡಿಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿರುವ ನ್ಯೂಜಿಲೆಂಡ್ ತಂಡದ ಪ್ರಶಸ್ತಿವರೆಗಿನ ಹಾದಿ ಹೇಗಿತ್ತು ಎನ್ನುವುದನ್ನು ನೋಡೋಣ ಬನ್ನಿ..
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ವಿರುದ್ದ ಸೆಣಸಾಟ ನಡೆಸಲಿದೆ.
ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದ್ದು, ಇಂದು(ನ.14) ಸಂಜೆ 7.30ರಿಂದ ಫೈನಲ್ ಪಂದ್ಯ ಆರಂಭವಾಗಲಿದೆ. ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಲು ಉಭಯ ತಂಡಗಳು ತುದಿಗಾಲಿನಲ್ಲಿವೆ.
ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 12 ಹಂತದಿಂದ ಫೈನಲ್‌ವರೆಗೆ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡದ ಜರ್ನಿ ಹೇಗಿತ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
ಮೊದಲ ಪಂದ್ಯ: ಪಾಕಿಸ್ತಾನ ವಿರುದ್ದ ರೋಚಕ ಸೋಲು
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ವಿರುದ್ದ 5 ವಿಕೆಟ್‌ಗಳ ಅಂತರದ ರೋಚಕ ಸೋಲು ಕಂಡಿತ್ತು.
ಪಾಕಿಸ್ತಾನ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡವು 8 ವಿಕೆಟ್ ಕಳೆದುಕೊಂಡು 134 ರನ್ ಬಾರಿಸಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಕೇವಲ 5 ವಿಕೆಟ್ ಕಳೆದುಕೊಂಡು ಇನ್ನು 10 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು.
ಎರಡನೇ ಪಂದ್ಯ: ಟೀಂ ಇಂಡಿಯಾ ಎದುರು ಭರ್ಜರಿ ಜಯ
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಕಿವೀಸ್ ತಂಡವು ಟೀಂ ಇಂಡಿಯಾವನ್ನು 110/7 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿನಿಂದ ಎಚ್ಚೆತ್ತುಕೊಂಡ ಕಿವೀಸ್, ಆ ಬಳಿಕ ಬ್ಯಾಟಿಂಗ್‌ನಲ್ಲೂ ಪ್ರಾಬಲ್ಯ ಮೆರೆಯಿತು. ಪರಿಣಾಮ ಭಾರತ ಎದುರು 33 ಎಸೆತಗಳು ಬಾಕಿ ಇರುವಂತೆಯೇ ನ್ಯೂಜಿಲೆಂಡ್ ತಂಡವು 8 ವಿಕೆಟ್‌ಗಳ ಜಯ ಸಾಧಿಸಿ ಗೆಲುವಿನ ಖಾತೆ ತೆರೆಯಿತು.
ಮೂರನೇ ಪಂದ್ಯ: ಸ್ಕಾಟ್ಲೆಂಡ್ ಎದುರು ರೋಚಕ ಜಯ
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಕಿವೀಸ್ ಪಾಲಿನ ಮೂರನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ಎದುರು 16 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ್ದ ಕಿವೀಸ್ 5 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 156 ರನ್ ಗಳಿಸುವ ಮೂಲಕ ರೋಚಕ ಸೋಲು ಕಂಡಿತು.
ನಾಲ್ಕನೇ ಪಂದ್ಯ: ನಮೀಬಿಯಾ ಎದುರು ಭರ್ಜರಿ ಜಯ
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಕಿವೀಸ್ ಪಾಲಿನ ನಾಲ್ಕನೇ ಪಂದ್ಯದಲ್ಲಿ ನಮೀಬಿಯಾ ಎದುರು ನ್ಯೂಜಿಲೆಂಡ್ ತಂಡವು 52 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 4 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ನಮೀಬಿಯಾ ತಂಡವು 7 ವಿಕೆಟ್ ಕಳೆದುಕೊಂಡು 111 ರನ್ ಗಳಿಸಲಷ್ಟೇ ಶಕ್ತವಾಯಿತು.
ಐದನೇ ಪಂದ್ಯ: ಆಫ್ಘಾನಿಸ್ತಾನ ವಿರುದ್ದವೂ ಭರ್ಜರಿ ಜಯ
ಅಬುಧಾಬಿಯಲ್ಲಿ ನಡೆದ 5ನೇ ಪಂದ್ಯವು ಕಿವೀಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ಈ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಲಿಯಮ್ಸನ್ ಪಡೆ ಯಶಸ್ವಿಯಾಯಿತು.
ಸೆಮೀಸ್‌ನಲ್ಲಿ ಇಂಗ್ಲೆಂಡ್ ಎದುರು ಭರ್ಜರಿ ಜಯ
ಅಬುಧಾಬಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್ ತಂಡವು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 166 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ಒಂದು ಓವರ್ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.