T20 ಸರಣಿ ಗೆದ್ದ ಟೀಂ ಇಂಡಿಯಾಗೆ ಐಸಿಸಿ ಬರೆ; ತಪ್ಪು ಒಪ್ಪಿಕೊಂಡ ಕೊಹ್ಲಿ!
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಇದೀಗ 3 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಸಂಭ್ರಮದಲ್ಲಿ ಐಸಿಸಿ ಕೊಹ್ಲಿ ಸೈನ್ಯಕ್ಕೆ ಶಾಕ್ ನೀಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯ ಅಭಿಮಾನಿಗಳಿಗೆ ಹೆಚ್ಚು ಖುಷಿ ನೀಡಿದ ಪಂದ್ಯ. ಕಾರಣ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಬ್ಯಾಟ್ಸ್‌ಮನ್ ಅಬ್ಬರಿಸಿದ ಪಂದ್ಯವಾಗಿದೆ.
ಇದೇ ಕಾರಣದಿಂದ ಭಾರತ ಪಂದ್ಯ ಗೆದ್ದು ಸರಣಿ ಕೈವಶ ಮಾಡಿದೆ. ಆದರೆ ಅಂತಿಮ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರ್ ಮಾಡಿದ ಕಾರಣಕ್ಕೆ ಟೀಂ ಇಂಡಿಯಾಗೆ ದಂಡ ವಿಧಿಸಲಾಗಿದೆ.
5ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ ಸಮಯಕ್ಕೆ ಇನ್ನೂ 2 ಓವರ್ ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಪಂದ್ಯದ ಶೇಕಡಾ 40 ರಷ್ಟು ಸಂಭಾವನೆಯನ್ನು ದಂಡವಾಗಿ ಕಟ್ಟಲು ಐಸಿಸಿ ಸೂಚಿಸಿದೆ.
ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ಐಸಿಸಿ ಎಲೈಟ್ ಪ್ಯಾನೆಲ್ ಟೀಂ ಇಂಡಿಯಾಗೆ ದಂಡ ವಿಧಿಸಿದೆ. ಸ್ಲೋ ಓವರ್ ರೇಟ್‌ನ್ನು ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ.
ಐಸಿಸಿ ಕೋಡ್ ಉಲ್ಲಂಘಿಸಿರುವುದನ್ನು ಟೀಂ ಇಂಡಿಯಾ ನಾಯಕ ಒಪ್ಪಿಕೊಂಡಿರುವ ಕಾರಣ ಯಾವುದೇ ವಿಚಾರಣೆ ಇರುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಸೈನ್ಯಕ್ಕೆ ಇದೀಗ 2ನೇ ಬಾರಿಗೆ ನಿಧಾನಗತಿ ಓವರ್ ರೇಟ್‌ನಲ್ಲಿ ದಂಡ ವಿಧಿಸಲಾಗಿದೆ. ಇದಕ್ಕೂ ಮುನ್ನ 2ನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿತ್ತು.
ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಿಗಿದಿತ ಸಮಯಕ್ಕೆ ಇನ್ನೂ 1 ಓವರ್ ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಪಂದ್ಯದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿತ್ತು.