IPL 2024 ಆರಂಭಕ್ಕೂ ಮುನ್ನವೇ ಗುಜರಾತ್ ಟೈಟಾನ್ಸ್‌ಗೆ ಬಲವಾದ ಹೊಡೆತ..! ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದಲೇ ಔಟ್
ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಗುಜರಾತ್ ಟೈಟಾನ್ಸ್ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಪ್ರಮುಖ ಆಟಗಾರ 2024ರ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೂ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿಲ್ಲವಾದರೂ, ಮುಂಬರುವ ಮಾರ್ಚ್ 22ರಿಂದ ಟೂರ್ನಿ ಆರಂಭವಾಗುವ ಸಾಧ್ಯತೆಯಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಮೊದಲಿಗೆ ಆರಂಭಿಕ 15 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟವಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇನ್ನು 2024ರ ಐಪಿಎಲ್ ಟೂರ್ನಿಗೂ ಮುನ್ನ ಗುಜರಾತ್ ಟೈಟಾನ್ಸ್ ಪಾಲಿಗೆ ಒಂದರ ಮೇಲೊಂದು ಹೊಡೆತ ಬೀಳುತ್ತಿವೆ. ಈಗಾಗಲೇ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.
ಈ ಶಾಕ್‌ನಿಂದ ಹೊರಬರುವ ಮುನ್ನವೇ ಗುಜರಾತ್ ಟೈಟಾನ್ಸ್ ಪಾಲಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡಾ ಇದೀಗ ಗಾಯದ ಸಮಸ್ಯೆಯಿಂದಾಗಿ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಹೌದು, ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಶಮಿ ಎಡ ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ 2024ರ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡ ತೊರೆದ ಬಳಿಕ ಇದೀಗ ಮೊಹಮ್ಮದ್ ಶಮಿ ಕೂಡಾ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದು, ಶುಭ್‌ಮನ್ ಗಿಲ್ ಪಡೆಗೆ ಇದೀಗ ಗಾಯದ ಮೇಲೆ ಉಪ್ಪು ಸುರಿದಂತೆ ಆಗಿದೆ.
ಕಳೆದ ವರ್ಷದ ಕೊನೆಯಲ್ಲಿ ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಮಾರಕ ದಾಳಿ ನಡೆಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.
2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಮೊಹಮ್ಮದ್ ಶಮಿ ಫಿಟ್ನೆಸ್ ಸಮಸ್ಯೆಯಿಂದಾಗಿ ವಿಶ್ರಾಂತಿಗೆ ಜಾರಿದ್ದರು. ಶಮಿ ಐಪಿಎಲ್ ವೇಳೆಗೆ ತಂಡಕೂಡಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.
ಇದೀಗ ಮೊಹಮ್ಮದ್ ಶಮಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಶಮಿ ಲಂಡನ್‌ನಲ್ಲಿ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.
ಮೊಹಮ್ಮದ್ ಶಮಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆಗಾದರೂ ಫಿಟ್ ಆಗಿ ಟೀಂ ಇಂಡಿಯಾ ಕೂಡಿಕೊಳ್ಳಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.