ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ 5 ಎಡವಟ್ಟುಗಳಿವು..!
ಲಾಡರ್‌ಹಿಲ್(ಆ.15): ವೆಸ್ಟ್‌ಇಂಡೀಸ್ ವಿರುದ್ಧ ಟಿ20 ಸರಣಿ ಸೋಲು ಸ್ವಯಂಕೃತವೇ ಹೊರತು, ಕಠಿಣ ಪೈಪೋಟಿಯಿಂದ ಎದುರಾಗಿದ್ದಲ್ಲ ಎನ್ನುವ ಚರ್ಚೆ ಈಗಾಗಲೇ ಎಲ್ಲೆಡೆ ಶುರುವಾಗಿದೆ. ಬ್ಯಾಟಿಂಗ್ ವೈಫಲ್ಯ, ಮೊನಚಿಲ್ಲದ ಬೌಲಿಂಗ್, ಗೆಲ್ಲಬೇಕು ಎನ್ನುವ ಉದ್ದೇಶವೇ ಇಲ್ಲದ ಆಟದ ಜೊತೆ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವವೂ ಸೋಲಿಗೆ ಪ್ರಮುಖ ಕಾರಣ ಎನ್ನುವ ಬಗ್ಗೆಯೂ ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳಿಂದ ವಿಶ್ಲೇಷಣೆ ನಡೆಯುತ್ತಿದೆ.
ಹಾರ್ದಿಕ್ ಪಾಂಡ್ಯ ಮಾಡಿದ 5 ಮಹಾ ಎಡವಟ್ಟುಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
1. 4ನೇ ಪಂದ್ಯದಲ್ಲಿ ಸುಲಭವಾಗಿ ಗುರಿ ಬೆನ್ನತ್ತಿದ್ದ ಭಾರತ, ಆ ಪಂದ್ಯ ಮುಗಿದ 24 ಗಂಟೆಗಳೊಗೆ ಇನ್ನೊಂದು ಪಂದ್ಯ ಆರಂಭಗೊಂಡಾಗ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು
ಏಕೆಂದರೆ, ಲಾಡರ್‌ಹಿಲ್ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ ಚೇಸ್ ಮಾಡಿದ ತಂಡವೇ ಗೆದ್ದ ದಾಖಲೆ ಇದೆ. ಇನ್ನು ಮಳೆ ಮುನ್ಸೂಚನೆಯೂ ಇದ್ದಾಗ, ಮೊದಲು ಬ್ಯಾಟ್ ಮಾಡುವ ಅನಗತ್ಯ ಸಾಹಸಕ್ಕೆ ಪಾಂಡ್ಯ ಮುಂದಾಗಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತು.
2. ವೇಗಿ ಮುಕೇಶ್ ಕುಮಾರ್ ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಬಲ್ಲರು ಎನ್ನುವ ನಿರೀಕ್ಷೆಯಿತ್ತು. ಆದರೆ ಹಾರ್ದಿಕ್ ಪಾಂಡ್ಯ, ಮುಕೇಶ್‌ರನ್ನು ಪವರ್-ಪ್ಲೇನಲ್ಲಿ ಹೆಚ್ಚಾಗಿ ಬಳಸಲಿಲ್ಲ. ಕೇವಲ ಡೆತ್ ಓವರ್‌ನಲ್ಲಿ ಮಾತ್ರ ಬಳಸಿಕೊಂಡರು.
3. ಅಕ್ಷರ್ ಪಟೇಲ್‌ರಿಂದ ಬೌಲ್ ಮಾಡಿಸಲು ಹಲವು ಸನ್ನಿವೇಶಗಳಲ್ಲಿ ಹಾರ್ದಿಕ್ ಹಿಂಜರಿದಿದ್ದು ಸ್ಪಷ್ಟವಾಗಿ ಕಾಣಿಸುತಿತ್ತು. ಅಕ್ಷರ್ ಪಟೇಲ್, ಎಡಗೈ ಬ್ಯಾಟರ್‌ಗಳ ಎದುರು ದುಬಾರಿ ಎನಿಸಿಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತವಾಯಿತು.
4. 2ನೇ ಟಿ20ಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಯುಜುವೇಂದ್ರ ಚಹಲ್‌ರನ್ನು ನಿರ್ಣಾಯಕ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಿಂದ ದೂರವಿಟ್ಟರು. ಇದರಿಂದ ತಂಡಕ್ಕೆ ಸೋಲಾಯಿತು. ಇದು ಪಾಂಡ್ಯ ಮಾಡಿದ ಮಹಾ ಯಡವಟ್ಟುಗಳಲ್ಲಿ ಒಂದು ಎನಿಸಿತು.
5. ಉಮ್ರಾನ್ ಮಲಿಕ್, ಆವೇಶ್ ಖಾನ್‌ರನ್ನು ಒಮ್ಮೆಯೂ ಆಡಿಸುವ ನಿರ್ಧಾರವನ್ನೇ ಹಾರ್ದಿಕ್ ಪಾಂಡ್ಯ ಮಾಡಲಿಲ್ಲ. 5 ಪಂದ್ಯಗಳ ಟಿ20 ಸರಣಿಯಲ್ಲಿ ಮಾರಕ ವೇಗಿಗಳಾದ ಉಮ್ರಾನ್ ಮಲಿಕ್ ಹಾಗೂ ಆವೇಶ್ ಖಾನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದೇ ಇದ್ದದ್ದೂ ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.