- Home
- Sports
- Cricket
- Happy Birthday Suresh Raina: ನಿಮಗೆ ಗೊತ್ತಿರದ ರೈನಾ ಕುರಿತಾದ 5 ಇಂಟ್ರೆಸ್ಟಿಂಗ್ ಸಂಗತಿಗಳಿವು..!
Happy Birthday Suresh Raina: ನಿಮಗೆ ಗೊತ್ತಿರದ ರೈನಾ ಕುರಿತಾದ 5 ಇಂಟ್ರೆಸ್ಟಿಂಗ್ ಸಂಗತಿಗಳಿವು..!
ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಪ್ರತಿಭಾನ್ವಿತ ಕ್ರಿಕೆಟಿಗ, ಮ್ಯಾಚ್ ಫಿನಿಶರ್ ಸುರೇಶ್ ರೈನಾ (Suresh Raina) ಶನಿವಾರ(ನ.27) ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುರೇಶ್ ರೈನಾ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ರೈನಾ ಹುಟ್ಟುಹಬ್ಬದ ಸಂದರ್ಭದಲ್ಲಿ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗನ ಕುರಿತಂತೆ ನಿಮಗೆ ಗೊತ್ತಿರದ ಐದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

सुरेश रैना
ಮಿಸ್ಟರ್ ಐಪಿಎಲ್ ಎಂದೇ ಗುರುತಿಸಿಕೊಂಡಿರುವ ಸುರೇಶ್ ರೈನಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನ ಹಿಂದೆ ಬಹುದೊಡ್ಡ ಕೈವಾಡವಿದೆ. ಆದರೆ ರೈನಾ 2021ನೇ ಸಾಲಿನ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಮುಂಬರುವ ಐಪಿಎಲ್‌ಗೆ ಸಜ್ಜಾಗುತ್ತಿರುವ ರೈನಾ ಕುರಿತಂತೆ 5 ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ.
(Photo Source- Google)
ಬಾಲ್ಯದಲ್ಲಿ ಸಾಕಷ್ಟು ಭಯಪಡುತ್ತಿದ್ದರು ರೈನಾ:
ಸುರೇಶ್ ರೈನಾ ಕ್ರಿಕೆಟ್ ಅಂಗಳದಲ್ಲಿ ಹೋರಾಡಿದಂತೆ ಬಾಲ್ಯದ ದಿನಗಳಲ್ಲಿ ಭಯದ ವಿರುದ್ದವೂ ಹೋರಾಟ ನಡೆಸಿರುವುದು ಬಹುತೇಕರಿಗೆ ತಿಳಿದಿಲ್ಲ. ರೈನಾ ರೈಲಿನಲ್ಲಿ ಓಡಾಟ ನಡೆಸುತ್ತಿದ್ದಾಗ ಹಾಗೂ ಹಾಸ್ಟೆಲ್‌ನಲ್ಲಿದ್ದಾಗ ಸಾಕಷ್ಟು ಭಯದ ವಾತಾವರಣದಲ್ಲೇ ಕಾಲ ಕಳೆದಿದ್ದರು. ಒಮ್ಮೆ ಹಾಕಿ ಸ್ಟಿಕ್‌ನಲ್ಲಿ ರೈನಾ ಹೊಡೆತವನ್ನು ತಿಂದಿದ್ದರು. ಆದರೆ ಇವೆಲ್ಲವನ್ನೂ ಮೀರಿ ಸ್ಟಾರ್ ಕ್ರಿಕೆಟಿಗನಾಗಿ ರೈನಾ ಬೆಳೆದು ನಿಂತರು.
ಬಾಲಿವುಡ್‌ನಲ್ಲಿ ಹಾಡಿದ್ದಾರೆ ಸುರೇಶ್ ರೈನಾ:
ಹೌದು, ಇದು ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಬಹುತೇಕ ಮಂದಿಗೆ ಗೊತ್ತಿಲ್ಲ ಅವರೊಬ್ಬ ಉತ್ತಮ ಗಾಯಕ ಎಂದು. 2015ರಲ್ಲಿ ತೆರೆಕಂಡ ಮೀರುಥಿಯಾ ಗ್ಯಾಂಗ್‌ಸ್ಟರ್ ಸಿನೆಮಾದಲ್ಲಿ ರೈನಾ ತು ಮಿಲಿ ಸಬ್ ಮಿಲಾ ಎನ್ನುವ ಹಾಡೊಂದನ್ನು ಹಾಡಿದ್ದಾರೆ.
ಅವಕಾಶವಿದ್ದಾಗಲೆಲ್ಲಾ ಅಡುಗೆ ಮಾಡುತ್ತಾರೆ ಮಿಸ್ಟರ್ ಐಪಿಎಲ್:
ಸುರೇಶ್ ರೈನಾಗೆ ಮೈದಾನದಲ್ಲಿ ಸರಾಗವಾಗಿ ಬ್ಯಾಟ್ ಬೀಸಿದಂತೆ, ಅಡುಗೆ ಮನೆಯಲ್ಲಿ ಚೆನ್ನಾಗಿ ವಿಶೇಷ ಖಾದ್ಯಗಳನ್ನು ತಯಾರು ಮಾಡುವ ಕಲೆಯೂ ಕರಗತವಾಗಿದೆ. ಲಖನೌದಲ್ಲಿನ ಕ್ರೀಡಾ ಹಾಸ್ಟೆಲ್‌ನಲ್ಲಿದ್ದಾಗ ಅಡುಗೆ ಮಾಡುವುದನ್ನು ರೈನಾ ಕಲಿತುಕೊಂಡಿದ್ದರು. ಮನೆಯಲ್ಲಿ ರೈನಾ ತಮಗಾಗಿಯೇ ಒಂದು ಪ್ರತ್ಯೇಕ ಅಡುಗೆ ಮನೆ ಹೊಂದಿದ್ದಾರೆ. ಇನ್ನು ಚೆನ್ನೈ ತಂಡದಲ್ಲಿ ಅಂಬಟಿ ರಾಯುಡು ಜತೆಗೂಡಿ ರೈನಾ ಆಗಾಗ ಬರ್ಜರಿ ಬಿರ್ಯಾನಿ ಕೂಡಾ ಮಾಡಿ ಆಟಗಾರರಿಗೆ ಉಣಬಡಿಸಿದ್ದಾರಂತೆ.
ಧೋನಿಯ ಅತ್ಯಾಪ್ತ ಗೆಳೆಯ:
ಸುರೇಶ್ ರೈನಾ ತನ್ನ ನಾಯಕ ಧೋನಿಯ ಅತ್ಯಾಪ್ತ ಗೆಳೆಯ ಎನ್ನುವುದು ಹೊಸ ವಿಚಾರವೇನಲ್ಲ. ಆದರೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೆಲವೇ ಕ್ಷಣಗಳಲ್ಲಿ ರೈನಾ ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದಾಗಲೇ ಇವರಿಬ್ಬರ ಸ್ನೇಹ ಇಷ್ಟೊಂದು ಗಾಢವಾಗಿದೆ ಎಂದು ಇಡೀ ಜಗತ್ತಿಗೆ ಅರ್ಥವಾಗಿದ್ದು. ಇನ್ನು ಐಪಿಎಲ್‌ನಲ್ಲೂ ಈ ಇಬ್ಬರು ಒಟ್ಟಿಗೆ ವಿದಾಯ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.
ಪಾದಾರ್ಪಣೆ ಪಂದ್ಯದಲ್ಲಿ ರೈನಾರದ್ದು ಮಿಶ್ರ ಫಲಿತಾಂಶ
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲಿ ರೈನಾ ಮಿಶ್ರ ಫಲಿತಾಂಶ ಎದುರಿಸಿದ್ದಾರೆ. ಏಕದಿನ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲಿ ರೈನಾ ಶೂನ್ಯ ಸುತ್ತಿದ್ದರು. ಆದರೆ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲಿ ಅಜೇಯ 3 ರನ್ ಬಾರಿಸಿದ್ದರು. ಇದಾದ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ದಾಖಲೆಯನ್ನು ರೈನಾ ನಿರ್ಮಿಸಿದ್ದರು.