- Home
- Sports
- Cricket
- HBD Cheteshwar Pujara: ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿಗಳಿವು..!
HBD Cheteshwar Pujara: ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿಗಳಿವು..!
ಬೆಂಗಳೂರು: ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಚೇತೇಶ್ವರ್ ಪೂಜಾರ (Cheteshwar Pujara) ಮಂಗಳವಾರವಾದ ಇಂದು(ಜ.25) ತಮ್ಮ 34ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಭಾರತ (Indian Cricket Team) ಪರ 95 ಟೆಸ್ಟ್ ಪಂದ್ಯಗಳನ್ನಾಡಿ 43.87ರ ಬ್ಯಾಟಿಂಗ್ ಸರಾಸರಿಯಲ್ಲಿ ಪೂಜಾರ 6,713 ರನ್ ಬಾರಿಸಿದ್ದಾರೆ. ಇದರಲ್ಲಿ 18 ಶತಕ ಹಾಗೂ 32 ಅರ್ಧಶತಕಗಳು ಸೇರಿವೆ. ಪೂಜಾರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಆದಾಯ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆಯ ಒಂದು ಝಲಕ್ ಇಲ್ಲಿದೆ ನೋಡಿ.

ಸೌರಾಷ್ಟ್ರ ಮೂಲದ ಬ್ಯಾಟರ್ ಚೇತೇಶ್ವರ್ ಪೂಜಾರ ಅವರ ಒಟ್ಟು ಮೌಲ್ಯ ಸರಿಸುಮಾರು 15 ಕೋಟಿ ರುಪಾಯಿಗಳು. ಭಾರತ ಟೆಸ್ಟ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಪೂಜಾರ ಬಿಸಿಸಿಐನಿಂದ ವಾರ್ಷಿಕ ಒಂದು ಕೋಟಿ ರುಪಾಯಿ ವೇತನವನ್ನು ಪಡೆಯುತ್ತಾರೆ.
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಚೇತೇಶ್ವರ್ ಪೂಜಾರ, ಭಾರತ ಪರ 5 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವಿಚಾರ ಬಹುತೇಕ ಕ್ರಿಕೆಟ್ ಅಭುಮಾನಿಗಳಿಗೆ ನೆನಪಿರಲು ಸಾಧ್ಯವಿಲ್ಲ. 2014ರಲ್ಲಿ ಪೂಜಾರ ಭಾರತ ಪರ 5 ಏಕದಿನ ಪಂದ್ಯಗಳನ್ನಾಡಿ 51 ರನ್ ಗಳಿಸಿದ್ದಾರೆ.
ಚೇತೇಶ್ವರ್ ಪೂಜಾರ ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದುವರೆಗೂ ಒಟ್ಟು 30 ಐಪಿಎಲ್ ಪಂದ್ಯಗಳನ್ನಾಡಿರುವ ಪೂಜಾರ ಒಟ್ಟು 390 ರನ್ ಬಾರಿಸಿದ್ದಾರೆ.
ಚೇತೇಶ್ವರ್ ಪೂಜಾರ 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರು. ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಐಪಿಎಲ್ ಫೈನಲ್‌ನಲ್ಲಿ ಕೆಕೆಆರ್ ತಂಡವನ್ನು ಮಣಿಸಿ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಹುಮಾನ ಮೊತ್ತವಾಗಿ ದೊರೆತ 12.2 ಕೋಟಿ ರುಪಾಯಿಯಲ್ಲಿ ಪೂಜಾರಗೆ 50 ಲಕ್ಷ ರುಪಾಯಿ ದೊರಕಿತ್ತು.
ಭಾರತ ಪರ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ಚೇತೇಶ್ವರ್ ಪೂಜಾರ ಹೆಸರಿನಲ್ಲಿದೆ. 2017ರಲ್ಲಿ ಆಸ್ಟ್ರೇಲಿಯಾ ಎದುರು ಪೂಜಾರ ಬರೋಬ್ಬರಿ 525 ಎಸೆತಗಳನ್ನು ಎದುರಿಸಿದ್ದರು. ಇದಕ್ಕೂ ಮೊದಲು ರಾಹುಲ್ ದ್ರಾವಿಡ್ 2004ರಲ್ಲಿ ಪಾಕಿಸ್ತಾನ ಎದುರು 495 ಎಸೆತಗಳನ್ನು ಎದುರಿಸಿದ್ದರು.
ಚೇತೇಶ್ವರ್ ಪೂಜಾರ ಅವರ ತಂದೆಯ ಹೆಸರು ಅರವಿಂದ್ ಪೂಜಾರ ಹಾಗೂ ಸಹೋದರನ ಮಗನ ಹೆಸರು ಬಿಪಿನ್ ಪೂಜಾರ. ಈ ಇಬ್ಬರು ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದಾರೆ.
ಪೂಜಾರ 17 ವರ್ಷದವರಾಗಿದ್ದಾಗ ಅವರ ತಾಯಿಯನ್ನು ಕಳೆದುಕೊಂಡರು. ಕ್ಯಾನ್ಸರ್‌ನಿಂದಾಗಿ ಪೂಜಾರ ಅವರ ತಾಯಿ ಸಾವನ್ನಪ್ಪಿದ್ದರು. ಇನ್ನು 2013ರಲ್ಲಿ ಪೂಜಾರ ತಮ್ಮ ಗೆಳತಿ ಪೂಜಾ ಪಬಾರಿಯನ್ನು ವಿವಾಹವಾದರು. 2018ರಲ್ಲಿ ಈ ಜೋಡಿ ಅಧಿತಿ ಎನ್ನುವ ಮುದ್ದಾದ ಮಗುವನ್ನು ಸ್ವಾಗತಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.