ಹ್ಯಾಪಿ ಬರ್ತ್ ಡೇ ಮಿಸ್ಟರ್ 360: ಎಬಿಡಿ ಹೆಸರಿನಲ್ಲಿವೆ ಮುರಿಯಲಾಗದ 3 ಅಪರೂಪದ ದಾಖಲೆಗಳು..!
ಆಧುನಿಕ ಕ್ರಿಕೆಟ್ ಕಂಡ ವಿಸ್ಫೋಟಕ ಬ್ಯಾಟ್ಸ್‌ಮನ್, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ಗೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪರ ಎಬಿಡಿ ಕಣಕ್ಕಿಳಿದಾಗ ಎದುರಾಳಿ ತಂಡದ ಬೌಲರ್‌ಗಳು ನಿದ್ರೆಯಲ್ಲೂ ಬೆಚ್ಚಿಬೀಳುವಂತೆ ಮಾಡಿದ್ದರು. ಅದೇ ರೀತಿ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಕಳೆದೊಂದು ದಶಕದಿಂದ ಅಬ್ಬರಿಸುತ್ತಿದ್ದಾರೆ. ಎಬಿಡಿಗಿಂದು 37ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಎಬಿಡಿ ಹೆಸರಿನಲ್ಲಿರುವ 3 ಮುರಿಯಲಾಗದ ದಾಖಲೆಗಳ ವಿವರ ಇಲ್ಲಿದೆ ನೋಡಿ
ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಯಾರಿದ್ದಾರೆ ಅಂದರೆ ಥಟ್ಟನೆ ನೆನಪಾಗುವ ಹೆಸರೆಂದರೆ ಅದು ಅಬ್ರಹಂ ಬೆಂಜಮಿನ್ ಡಿವಿಲಿಯರ್ಸ್.
ದಕ್ಷಿಣ ಆಫ್ರಿಕಾ ಮಾಜಿ ನಾಯಕ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ದಕ್ಷಿಣ ಆಫ್ರಿಕಾ ತಂಡಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಹೀಗಿದ್ದೂ ಎಬಿ ಡಿವಿಲಿಯರ್ಸ್ ತಮ್ಮ ತಂಡಕ್ಕೆ ಐಸಿಸಿ ಟೂರ್ನಮೆಂಟ್‌ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಸಾಧ್ಯವಾಗದೇ ಉಳಿದದ್ದು ವಿಪರ್ಯಾಸ.
2018ರಲ್ಲಿ ಎಬಿಡಿ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಎಬಿಡಿ ಹೆಸರಿನಲ್ಲಿರುವ ಮುರಿಯಲಾಗದ 3 ದಾಖಲೆಗಳ ವಿವರ ಇಲ್ಲಿದೆ ನೋಡಿ
1. ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ 50,100 ಹಾಗೂ 150 ರನ್ ಬಾರಿಸಿದ ದಾಖಲೆ ಎಬಿಡಿ ಹೆಸರಿನಲ್ಲಿದೆ
ಎಬಿ ಡಿವಿಲಿಯರ್ಸ್ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ, ಶತಕ ಹಾಗೂ 150 ರನ್ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ. ಎಬಿಡಿ 16 ಎಸೆತಗಳಲ್ಲಿ 50, 31 ಎಸೆತಗಳಲ್ಲಿ ಶತಕ ಹಾಗೂ 64 ಎಸೆತಗಳಲ್ಲಿ 150 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಗಳು ಮುರಿಯುವುದು ಯಾವ ಬ್ಯಾಟ್ಸ್‌ಮನ್‌ಗೂ ಸುಲಭದ ಮಾತಲ್ಲ.
2. ಎಬಿ ಡಿವಿಲಿಯರ್ಸ್ 30ನೇ ಓವರ್ ಬಳಿಕ ಕ್ರೀಸ್‌ಗಿಳಿದು ಶತಕ ಬಾರಿಸಿದ್ದಾರೆ
ಹಲವಾರು ಬಾರಿ ಎಬಿ ಡಿವಿಲಿಯರ್ಸ್ 30ನೇ ಓವರ್ ನಂತರ ಕ್ರೀಸ್‌ಗಿಳಿದು ಶತಕಗಳನ್ನು ಚಚ್ಚಿದ್ದಾರೆ. ಈ ರೀತಿ ಆಡಬೇಕಾದರೆ ಬ್ಯಾಟ್ಸ್‌ಮನ್ ಮಾನಸಿಕ ಸ್ಥೈರ್ಯ ಕೂಡಾ ಅಷ್ಟೇ ಬಲಿಷ್ಠವಾಗಿರಬೇಕು. ಈ ರೀತಿಯ ದಾಖಲೆ ಬ್ರೇಕ್ ಆಗುವುದು ಸದ್ಯಕ್ಕಂತೂ ಅನುಮಾನ
3. ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ವರ್ಷವೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ್ದಾರೆ ಮಿಸ್ಟರ್ 360
2015ರಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದ ಎಬಿ ಡಿವಿಲಿಯರ್ಸ್ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ 58 ಸಿಕ್ಸರ್ ಚಚ್ಚಿದ್ದಾರೆ. ನಾಯಕನಾಗಿದ್ದುಕೊಂಡು ಮೈಚಳಿ ಬಿಟ್ಟು ಬ್ಯಾಟ್ ಬೀಸುವುದು ಸುಲಭದ ಮಾತಲ್ಲ.