- Home
- Sports
- Cricket
- ಭಾರತದ ಸಾರ್ವಕಾಲಿಕ ಶ್ರೇಷ್ಠ ಒನ್‌ಡೇ ಟೀಂ ಆಯ್ಕೆ ಮಾಡಿದ ಗೌತಮ್ ಗಂಭೀರ್: ಇಬ್ಬರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ!
ಭಾರತದ ಸಾರ್ವಕಾಲಿಕ ಶ್ರೇಷ್ಠ ಒನ್‌ಡೇ ಟೀಂ ಆಯ್ಕೆ ಮಾಡಿದ ಗೌತಮ್ ಗಂಭೀರ್: ಇಬ್ಬರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ!
ಟೀಂ ಇಂಡಿಯಾ ಹೆಡ್ ಕೋಚ್, ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಭಾರತ ಏಕದಿನ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ಪೂರ್ಣ ವಿವರಗಳು ಇಲ್ಲಿವೆ.

ಆರಂಭಿಕ ಜೋಡಿಯಾಗಿ ಗೌತಮ್ ಗಂಭೀರ್ ತಮ್ಮೊಂದಿಗೆ ವೀರೇಂದ್ರ ಸೆಹ್ವಾಗ್ ಅವರನ್ನು ಆಯ್ಕೆ ಮಾಡಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20ಗಳಲ್ಲಿ ಈ ಜೋಡಿ ಭಾರತಕ್ಕೆ ಸಾಕಷ್ಟು ಬಾರಿ ಭದ್ರವಾದ ಇನಿಂಗ್ಸ್ ಕಟ್ಟಿದೆ. ವೀರೇಂದ್ರ ಸೆಹ್ವಾಗ್ ಭಾರತೀಯ ಕ್ರಿಕೆಟ್‌ಗೆ ಆರಂಭಿಕನಾಗಿ ಹೊಸ ಆಯಾಮ ನೀಡಿದರು.
ಇವರ ನಂತರ ಮೂರನೇ ಸ್ಥಾನದಲ್ಲಿ ಭಾರತ ತಂಡದ ಗೋಡೆ ಎಂದೇ ಖ್ಯಾತಿ ಪಡೆದ ರಾಹುಲ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಭಾರತದ ದಿಗ್ಗಜ ಆಟಗಾರರಲ್ಲಿ ದ್ರಾವಿಡ್ ಒಬ್ಬರು. ಏಕದಿನ ಕ್ರಿಕೆಟ್‌ನಲ್ಲಿ ದ್ರಾವಿಡ್ 10 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ.
ರಾಹುಲ್ ದ್ರಾವಿಡ್ ನಿವೃತ್ತಿಯ ನಂತರ ಆ ಸ್ಥಾನದಲ್ಲಿ ಸ್ಥಿರವಾಗಿ ನೆಲೆಯೂರಿದ ರನ್‌ಮಷಿನ್, ಟೀಂ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ ಅವರಿಗೂ ಗಂಭೀರ್ ತಂಡದಲ್ಲಿ ಸ್ಥಾನ ನೀಡಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಹಲವಾರು ಕ್ರಿಕೆಟ್ ದಾಖಲೆಗಳನ್ನು ವಿರಾಟ್ ಮುರಿದಿದ್ದಾರೆ.
ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾಗಿ ಇವರಿಬ್ಬರೂ ಖ್ಯಾತಿ ಗಳಿಸಿದ್ದಾರೆ.
ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಸದಾ ಕಾಲಕ್ಕೂ ದಂತಕಥೆಯಾಗಿ ಉಳಿಯುತ್ತಾರೆ. ಸಚಿನ್ ತೆಂಡೂಲ್ಕರ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಇದಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಹಲವು ವರ್ಷಗಳೇ ಕಳೆದರೂ ಸಚಿನ್ ಖ್ಯಾತಿ ಮಾಸಿಲ್ಲ. ಟೀಂ ಇಂಡಿಯಾ ಪಂದ್ಯ ನಡೆಯುತ್ತಿದ್ದರೆ ಸಾಕು ಸಚಿನ್ ಸಚಿನ್ ಎಂದು ಕನಿಷ್ಠ ಒಮ್ಮೆಯಾದರೂ ಕ್ರೀಡಾಂಗಣ ಮೊಳಗುತ್ತದೆ.
ಬ್ಯಾಟಿಂಗ್ ಆಲ್‌ರೌಂಡರ್ ಆಗಿ ಯುವರಾಜ್ ಸಿಂಗ್ ಆರನೇ ಸ್ಥಾನದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಯುವಿ ಒಬ್ಬರು. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.
2007ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ಹೊಸ ದಾಖಲೆ ಬರೆದರು. ಇಂಗ್ಲೆಂಡ್‌ನ ಸ್ಟಾರ್ ಬೌಲರ್ ಸ್ಟುವರ್ಟ್ ಬ್ರಾಡ್ ಎಸೆದ 19ನೇ ಓವರ್‌ನಲ್ಲಿ ಯುವಿ ಸತತವಾಗಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು.
ಇನ್ನು ಅವಕಾಶ ಸಿಕ್ಕಾಗಲೆಲ್ಲಾ ಧೋನಿ ಮೇಲೆ ಕಿಡಿಕಾರುತ್ತಲೇ ಬಂದಿರುವ ಗೌತಮ್ ಗಂಭೀರ್, ಇದೀಗ ತಮ್ಮ ಕನಸಿಕ ಏಕದಿನ ತಂಡದಲ್ಲಿ ಧೋನಿಗೆ ಸ್ಥಾನ ನೀಡಿದ್ದೂ ಮಾತ್ರವಲ್ಲದೇ ನಾಯಕ ಪಟ್ಟವನ್ನು ನೀಡಿದ್ದಾರೆ.
ಅದರ ನಂತರ ಗಂಭೀರ್ ತಮ್ಮ ತಂಡದಲ್ಲಿ ಇರ್ಫಾನ್ ಪಠಾಣ್ ಮತ್ತು ಜಹೀರ್ ಖಾನ್ ಅವರನ್ನು ವೇಗದ ಬೌಲರ್‌ಗಳಾಗಿ ಆಯ್ಕೆ ಮಾಡಿದ್ದಾರೆ. ಈ ಇಬ್ಬರು ಎಡಗೈ ವೇಗದ ಬೌಲರ್‌ಗಳು ಟೆಸ್ಟ್, ಏಕದಿನ ಮತ್ತು ಟಿ20ಗಳಲ್ಲಿ ತಂಡಕ್ಕೆ ಪ್ರಮುಖ ಸೇವೆ ಸಲ್ಲಿಸಿದ್ದಾರೆ.
ಸ್ಪಿನ್ನರ್‌ಗಳಾಗಿ ಅನಿಲ್ ಕುಂಬ್ಳೆ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್‌ಗಳನ್ನು ಪಡೆದು ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಕುಂಬ್ಳೆ ಒಬ್ಬರು. ಏಕದಿನ ಕ್ರಿಕೆಟ್‌ನಲ್ಲೂ ಕುಂಬ್ಳೆ ಟೀಂ ಇಂಡಿಯಾ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ರವಿಚಂದ್ರನ್ ಅಶ್ವಿನ್. ಟೆಸ್ಟ್‌ಗಳಲ್ಲಿ ಮಾತ್ರವಲ್ಲದೆ ಎಲ್ಲಾ ಮಾದರಿಗಳಲ್ಲಿಯೂ ಸಾಧನೆ ಮಾಡಿದ್ದಾರೆ. 2011ರ ವಿಶ್ವಕಪ್ ಗೆದ್ದ ತಂಡದಲ್ಲಿಯೂ ಅಶ್ವಿನ್ ಸದಸ್ಯರಾಗಿದ್ದರು.
ಇನ್ನು ತೀರಾ ಅಚ್ಚರಿಯೆನ್ನುವಂತೆ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿರುವ ರೋಹಿತ್ ಶರ್ಮಾ ಹಾಗೂ ಮಾರಕ ದಾಳಿ ಮೂಲಕ ಎದುರಾಳಿ ಎದೆಯಲ್ಲಿ ನಡುಕ ಹುಟ್ಟಿಸುತ್ತಾ ಬಂದಿರುವ ಜಸ್ಪ್ರೀತ್ ಬುಮ್ರಾಗೆ ಸ್ಥಾನ ನೀಡದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಗೌತಮ್ ಗಂಭೀರ್ ಆಲ್‌ಟೈಮ್ ಪ್ಲೇಯಿಂಗ್ 11: ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ಟೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ (ವಿಕೆಟ್ ಕೀಪರ್, ನಾಯಕ), ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಇರ್ಫಾನ್ ಪಠಾಣ್, ಜಹೀರ್ ಖಾನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.