4 ಎಸೆತದಲ್ಲಿ 4 ವಿಕೆಟ್: ಮಾಜಿ ಕರ್ನಾಟಕ ಆಟಗಾರ್ತಿ ಅನುರಾಧ ಜರ್ಮನಿ ನಾಯಕಿಯಾಗಿ ವಿಶ್ವದಾಖಲೆ..!
ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಅನುರಾಧ ದೊಡ್ಡಬಳ್ಳಾಪುರ ಜರ್ಮನಿ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶುಕ್ರವಾರ(ಆ.14) ನಡೆದ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಆಸ್ಟ್ರೀಯ ವಿರುದ್ಧ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
33 ವರ್ಷದ ಅನುರಾಧ ಬೆಂಗಳೂರಿನ ಮೂಲದವರಾಗಿದ್ದಾರೆ. ಅನುರಾಧ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎನ್ನುವ ವಿಶ್ವದಾಖಲೆ ಬರೆದಿದ್ದಾರೆ.
ಮೂರು ಓವರ್ ಬೌಲಿಂಗ್ ಮಾಡಿದ ಅನುರಾಧ ಎರಡು ಮೇಡನ್ ಸಹಿತ ಕೇವಲ 1 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಲೋವರ್ ಆಸ್ಟ್ರೀಯಾದ ಸೀಬ್ರನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡವು ಆಸ್ಟ್ರೀಯಾವನ್ನು 137 ರನ್‌ಗಳಿಂದ ಬಗ್ಗುಬಡಿದಿದೆ.
5 ಪಂದ್ಯಗಳ ಟಿ20 ಸರಣಿಯಲ್ಲಿ ಜರ್ಮನಿ ತಂಡವು 4-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ(ವಿಶ್ವಕಪ್ 2007) ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ್ದಾರೆ.
ಇನ್ನು ಆಫ್ಘಾನಿಸ್ತಾನದ ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ ಐರ್ಲೆಂಡ್ ವಿರುದ್ಧ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಜರ್ಮನಿ ನಿಗಧಿತ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 198 ರನ್ ಗಳಿಸಿತ್ತು. ಕ್ರಿಸ್ಟಿಯಾನಾ ಗಾಫ್ 70 ಎಸೆತಗಳಲ್ಲಿ 101 ರನ್ ಗಳಿಸಿದರೆ, ಜೇನತ್ ರೊನಾಲ್ಡ್ಸ್ 60 ಎಸೆತಗಳಲ್ಲಿ 68 ರನ್ ಗಳಿಸಿದ್ದಾರೆ. ಮಜಾ ಅಂದರೆ ಈ ಇನಿಂಗ್ಸ್ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ.
ಇದಕ್ಕುತ್ತರವಾಗಿ ಆಸ್ಟ್ರೀಯಾ 61 ರನ್ ಗಳಿಸಲಷ್ಟೇ ಶಕ್ತವಾಯಿತು. 15 ಓವರ್‌ನಲ್ಲಿ ಮಿಂಚಿನ ದಾಳಿ ನಡೆಸಿದ ಮಧ್ಯಮ ವೇಗಿ ಅನುರಾಧ ಕೊನೆಯ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ವಿಶ್ವದಾಖಲೆ ಬರೆದರು.
14 ಓವರ್ ಅಂತ್ಯಕ್ಕೆ ಆಸ್ಟ್ರೀಯ 3 ವಿಕೆಟ್ ಕಳೆದುಕೊಂಡು 40 ರನ್ ಬಾರಿಸಿತ್ತು. 15ನೇ ಓವರ್‌ನಲ್ಲಿ ಅನುರಾಧ ಮೇಡನ್ ಸಹಿತ 4 ವಿಕೆಟ್ ಕಬಳಿಸಿ ಮಿಂಚಿದರು. 19ನೇ ಓವರ್‌ನಲ್ಲಿ ಅನುರಾಧ ಮತ್ತೊಂದು ವಿಕೆಟ್ ಪಡೆದರು.
ಇದೊಂದು ಅದ್ಭುತ ಸಾಧನೆ ಎಂದು ಅನುರಾಧ ಮಾಜಿ ಕೋಚ್ ಇರ್ಫಾನ್ ಸೇಠ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ ಏಷ್ಯಾನೆಟ್ ನ್ಯೂಸೇಬಲ್‌ಗೆ ಪ್ರತಿಕ್ರಿಯೆ ನೀಡುವಾಗ ಕೊಂಡಾಡಿದ್ದಾರೆ.
ಅನುರಾಧ ಅವರ ಬೆಂಗಳೂರು ದಿನಗಳನ್ನು ಮೆಲುಕು ಹಾಕಿದ ಇರ್ಫಾನ್ ಸೇಠ್, ಆಕೆ 11-13 ವರ್ಷದವಳಿದ್ದಾಗಲೇ ನಮ್ಮ ಅಕಾಡಮಿ(KIOC) ಸೇರಿದರು. ಕರ್ನಾಟಕ ಅಂಡರ್ 16, ಅಂಡರ್ 19 ಹಾಗೂ ಸೀನಿಯರ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸಾಕಷ್ಟು ಪರಿಶ್ರಮದಿಂದ ಜರ್ಮನ್‌ನಲ್ಲಿ ಯಶಸ್ಸು ಗಳಿಸಿದ್ದಾರೆ ಎಂದು ಹೇಳಿದ್ದಾರೆ.
ಅನುರಾಧ ಹೆಚ್ಚಿನ ವಿಧ್ಯಾಬ್ಯಾಸಕ್ಕಾಗಿ ಇಂಗ್ಲೆಂಡ್ ತೆರಳಿದ್ದರು. ಇದಾದ ಬಳಿಕ ಇಂಗ್ಲೆಂಡ್‌ನ ನಾರ್ಥ್‌ಅಂಬರ್‌ಲ್ಯಾಂಡ್ ಕೌಂಟಿ ಕ್ರಿಕೆಟ್ ಆಡಲಾರಂಭಿಸಿದರು. ಜರ್ಮನಿಯಲ್ಲಿ Phdಯನ್ನು ಅನುರಾಧ ಪೂರೈಸಿದ್ದು, ಲೆವೆಲ್ 2 ಹಂತದ ಕೋಚಿಂಗ್ ಅನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಈ ವಿಶ್ವದಾಖಲೆಯ ಹೊರತಾಗಿಯೂ ಅನುರಾಧಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿಲ್ಲ. ಅಜೇಯ ಶತಕ ಬಾರಿಸಿದ ಕ್ರಿಸ್ಟಿಯಾನ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜರ್ಮನಿಯ ಫ್ರಾಂಕ್‌ಫರ್ಟ್ ನಲ್ಲಿ ವುಮೆನ್ಸ್ ಕ್ರಿಕೆಟ್ ಕ್ಲಬ್ ಆರಂಭಕ್ಕೂ ಅನುರಾಧ ಕಾರಣಕರ್ತರಾಗಿದ್ದಾರೆ.