ಕೋವಿಡ್‌ನಿಂದ ರದ್ದಾಗಿದ್ದ Ind vs Eng 5ನೇ ಟೆಸ್ಟ್ ವೇಳಾಪಟ್ಟಿ ಪ್ರಕಟ..!
ಲಂಡನ್: 14ನೇ ಆವೃತ್ತಿಯ ಐಪಿಎಲ್ (IPL 2021) ಭಾಗ-2 ಆರಂಭಕ್ಕೆ ಕೆಲವೇ ದಿನಗಳ ಮುನ್ನ ನಡೆಯಬೇಕಿದ್ದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ 5ನೇ ಟೆಸ್ಟ್ ಪಂದ್ಯವು ಕೋವಿಡ್ (COVID 19) ಭೀತಿಯಿಂದ ರದ್ದಾಗಿತ್ತು. ಇದೀಗ ಕೊನೆಯ ಟೆಸ್ಟ್ ಪಂದ್ಯದ ವೇಳಾಪಟ್ಟಿ ಪ್ರಕಟವಾಗಿದೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. 5ನೇ ಟೆಸ್ಟ್ ಪಂದ್ಯ ಎಲ್ಲಿ ಹಾಗೂ ಯಾವಾಗ ನಡೆಯಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಜೂನ್ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಮೊದಲಿಗೆ ನ್ಯೂಜಿಲೆಂಡ್ ವಿರುದ್ದ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿತ್ತು.
ಇದಾದ ಬಳಿಕ ಆಗಸ್ಟ್ 04ರಿಂದ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪಾಲ್ಗೊಂಡಿತ್ತು. 4 ಟೆಸ್ಟ್ ಪಂದ್ಯಗಳ ಮುಕ್ತಾಯದ ವೇಳೆಗೆ ವಿರಾಟ್ ಕೊಹ್ಲಿ ಪಡೆ 2-1ರ ಮುನ್ನಡೆ ಸಾಧಿಸಿತ್ತು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.
ಇನ್ನು ಸೆಪ್ಟೆಂಬರ್ 10ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಬೇಕಿದ್ದ, 5ನೇ ಹಾಗೂ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಭಾರತದ ಪಾಳಯದಲ್ಲಿ ಕೋವಿಡ್ ಪತ್ತೆಯಾದ ಬೆನ್ನಲ್ಲೇ ಕೊನೆಯ ಟೆಸ್ಟ್ ಪಂದ್ಯವನ್ನು ದಿಢೀರ್ ಎನ್ನುವಂತೆ ರದ್ದು ಮಾಡಲಾಯಿತು.
Ravi Shastri
5ನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಹೆಡ್ ಕೋಚ್ ರವಿಶಾಸ್ತ್ರಿ ಅವರಿಗೆ ಕೋವಿಡ್ 19 ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಐಸೋಲೇಷನ್‌ಗೆ ಒಳಗಾಗಿದ್ದರು.
ಇದಾದ ಬಳಿಕ ಸರಣಿ ಅಪೂರ್ಣವೆನಿಸಿತ್ತು. ಹೀಗಾಗಿ 5ನೇ ಟೆಸ್ಟ್ ಪಂದ್ಯ ನಡೆಯುತ್ತೋ ಅಥವಾ ಇಲ್ಲವೇ ಎನ್ನುವ ಕುರಿತಂತೆ ಸಾಕಷ್ಟು ಗೊಂದಲಗಳು ವ್ಯಕ್ತವಾಗಿದ್ದವು. ಇದಲ್ಲದೇ ರದ್ದಾದ ಕೊನೆಯ ಟೆಸ್ಟ್ ಪಂದ್ಯದ ಬದಲಿಗೆ 2022ರಲ್ಲಿ ಟೀಂ ಇಂಡಿಯಾ ಸೀಮಿತ ಓವರ್‌ಗಳ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ 2 ಹೆಚ್ಚುವರಿ ಟಿ20 ಪಂದ್ಯಗಳನ್ನಾಡಲಿದೆ ಎಂದೆಲ್ಲಾ ವರದಿಯಾಗಿತ್ತು.
ಈಗ ಆ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು, ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯವು ಜುಲೈ 2022ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ ಎಂದು ಇಸಿಬಿ ಹಾಗೂ ಬಿಸಿಸಿಐ ಒಮ್ಮತದ ತೀರ್ಮಾನ ತೆಗೆದುಕೊಂಡಿದೆ ಎಂದು ಕ್ರಿಕ್‌ಬಜ್ ವೆಬ್‌ಸೈಟ್ ವರದಿ ಮಾಡಿದೆ.
ಈ ಹೊಸ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಟೀಂ ಇಂಡಿಯಾ 2022ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಈ ಮೊದಲೇ ತೀರ್ಮಾನವಾಗಿದ್ದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯು 6 ದಿನ ತಡವಾಗಿ ಆರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.