ಸ್ಪಷ್ಟ ಬಹುಮತ ಬಾರದಿದ್ದರೂ ಮೋದಿಯದ್ದೇ ಸರ್ಕಾರ: ಕಡಿಮೆ ಸ್ಕೋರ್ ಇದ್ರೂ ಪಾಕ್ ಬಗ್ಗು ಬಡಿದ ಭಾರತ
ಬೆಂಗಳೂರು: ಸೂಪರ್ ಸಂಡೆ ಭಾರತದ ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಒಂದು ಕಡೆ ಸ್ಪಷ್ಟ ಬಹುಮತವಿಲ್ಲದಿದ್ದರೂ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾದರೆ, ಮತ್ತೊಂದು ಕಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕಡಿಮೆ ಸ್ಕೋರ್ ದಾಖಲಿಸಿಯೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಜವಹರ್‌ಲಾಲ್ ನೆಹರು ಬಳಿಕ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾದ ಮೊದಲ ನಾಯಕ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 272+ ಸೀಟುಗಳನ್ನು ಗಳಿಸಬೇಕು. ಕಳೆದ ಬಾರಿ ಬಿಜೆಪಿ ಪಕ್ಷವೊಂದೇ 303 ಸೀಟುಗಳನ್ನು ಗೆಲ್ಲುವ ಮೂಲಕ ಸುಭದ್ರ ಸರ್ಕಾರವನ್ನು ರಚಿಸಿತ್ತು.
ಆದರೆ ಈ ಬಾರಿ ಬಿಜೆಪಿ ಪಕ್ಷವು 240 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಷ್ಟೇ ಶಕ್ತವಾಯಿತು. ಬಿಜೆಪಿ ಸಂಪೂರ್ಣ ಬಹುಮತ ಪಡೆಯದಿದ್ದರೂ, ಎನ್‌ಡಿಎ ಮಿತ್ರಪಕ್ಷಗಳಾದ ತೆಲುಗು ದೇಶಂ ಪಾರ್ಟಿ, ಜೆಡಿಯು, ಜೆಡಿಎಸ್ ಇನ್ನಿತ್ತರ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು.
ಇನ್ನು ಇದೇ ವೇಳೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬದ್ದ ಎದುರಾಳಿ ಪಾಕಿಸ್ತಾನ ಎದುರು ಕನಿಷ್ಠ ಮೊತ್ತ ದಾಖಲಿಸಿಯೂ ಗೆಲುವು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 19 ಓವರ್‌ನಲ್ಲಿ 119 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಎದುರು ಭಾರತ ಮೊದಲ ಬಾರಿಗೆ ಆಲೌಟ್ ಆಯಿತು.
ಇನ್ನು ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 113 ರನ್ ಗಳಿಸುವ ಮೂಲಕ 6 ರನ್‌ಗಳ ವಿರೋಚಿತ ಸೋಲು ಅನುಭವಿಸಿತು.
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹಲವು ಮೀಮ್ಸ್‌ಗಳು ವೈರಲ್ ಆಗುತ್ತಿದ್ದು, ಸ್ಕೋರ್ ಕಮ್ಮಿಯಾದರೇನಂತೆ? ನಾವು ಗೆದ್ವಿ ಅಷ್ಟೇ ಎನ್ನುವ ಪೋಸ್ಟರ್ ವೈರಲ್ ಆಗುತ್ತಿದೆ.