ಐಪಿಎಲ್ 2025 ಆಡ್ತಾರಾ ಧೋನಿ? ನಿರ್ಧಾರ ತಿಳಿಸಿದ ಸಿಎಸ್‌ಕೆ ಥಲಾ!
ಐಪಿಎಲ್‌ನಲ್ಲಿ ಕಳೆದ ಕೆಲವು ಸೀಸನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ಧೋನಿ ಮುಂದಿನ ಐಪಿಎಲ್ ಆಡುವ ಕುರಿತು ಮಹತ್ವದ ಸುಳಿವು ನೀಡಿದ್ದಾರೆ.
ಐಪಿಎಲ್ 2025ರಲ್ಲಿ ಧೋನಿ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಐಪಿಎಲ್ ಹರಾಜು ಸಮೀಪಿಸುತ್ತಿದ್ದಂತೆ ಧೋನಿ ಐಪಿಎಲ್ ಭವಿಷ್ಯ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಒಂದು ಸಾಫ್ಟ್‌ವೇರ್ ಬ್ರ್ಯಾಂಡ್‌ನ ಪ್ರಚಾರ ಕಾರ್ಯಕ್ರಮದಲ್ಲಿ ಧೋನಿ, ಐಪಿಎಲ್ ಆಡುವ ಸುಳಿವು ನೀಡಿದ್ದಾರೆ. 'ನನ್ನ ವೃತ್ತಿಜೀವನದ ಕೊನೆಯ ಕೆಲವು ವರ್ಷಗಳಲ್ಲಿ ನಾನು ಕ್ರಿಕೆಟ್ ಆಡುತ್ತೇನೆ, ಆ ಸಮಯದಲ್ಲಿ ಕೇವಲ ಆಟವನ್ನು ಆನಂದಿಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ.
ಐಪಿಎಲ್‌ನಲ್ಲಿ ಆಟ ಆನಂದಿಸುವುದು ಕಷ್ಟ
ಯಾರಾದರೂ ಕ್ರಿಕೆಟ್‌ನಂತಹ ವೃತ್ತಿಪರ ಆಟವನ್ನು ಆಡುವಾಗ, ಕೇವಲ ಆಟವಾಗಿ ಆನಂದಿಸುವುದು ಕಷ್ಟ. ನಾನು ಅದನ್ನೇ ಮಾಡಲು ಬಯಸುತ್ತೇನೆ. ಅದು ಸುಲಭವಲ್ಲ ಎಂದು ಧೋನಿ ಹೇಳಿದ್ದಾರೆ. ಭಾವನಾತ್ಮಕವಾಗಿ ಮಾತ್ರವಲ್ಲ, ಜವಾಬ್ದಾರಿಯೂ ಇರುತ್ತದೆ. ಮುಂದಿನ ಕೆಲವು ವರ್ಷಗಳ ಕಾಲ ಆಟವನ್ನು ಆನಂದಿಸಲು ಬಯಸುತ್ತೇನೆ' ಎಂದಿದ್ದಾರೆ.
ಐಪಿಎಲ್‌ಗೆ ಸಮಯ ಕೊಡುವುದು ಕಷ್ಟವಲ್ಲ: ಧೋನಿ
ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ಕೇವಲ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ ಮಹೇಂದ್ರ ಸಿಂಗ್ ಧೋನಿ. ಈ ಬಗ್ಗೆ ಅವರು, 'ನಾನು ಎರಡೂವರೆ ತಿಂಗಳ ಕಾಲ ಐಪಿಎಲ್‌ನಲ್ಲಿ ಆಡಲು 9 ತಿಂಗಳು ಫಿಟ್ ಆಗಿರಬೇಕು. ಸೂಕ್ತ ಯೋಜನೆ ರೂಪಿಸಬೇಕು. ಅದೇ ಸಮಯದಲ್ಲಿ ಆರಾಮವಾಗಿಯೂ ಇರಬಹುದು' ಎಂದಿದ್ದಾರೆ.
ಧೋನಿ ಮುಂದಿನ ಐಪಿಎಲ್ ಟೂರ್ನಿ ಆಡುವ ಸೂಚನೆಯನ್ನು ನೀಡಿದ್ದಾರೆ. ಇದಕ್ಕಾಗಿ ಫಿಟ್ನೆಸ್ ಕೂಡ ಕಾಪಾಡಿಕೊಂಡಿದ್ದಾರೆ. ಐಪಿಎಲ್‌ನ ಹೊಸ ನಿಯಮದ ಪ್ರಕಾರ, 5 ವರ್ಷಗಳ ಕಾಲ ರಾಷ್ಟ್ರೀಯ ತಂಡಕ್ಕೆ ಆಡದ ಮಹೇಂದ್ರ ಸಿಂಗ್ ಧೋನಿಯನ್ನು 4 ಕೋಟಿ ರೂಪಾಯಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ರಿಟೈನ್ ಮಾಡಿಕೊಳ್ಳಬುಹುದು ಅನ್ನೋ ಮಾತುಗಳು ಕೇಳಿಬರುತ್ತಿದೆ.
ಧೋನಿ ಆಡುವ ಇಂಗಿತಕ್ಕೆ ಸಿಎಸ್‌ಕೆ ಅಭಿಮಾನಿಗಳು ಖುಷ್
ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಧೋನಿ ಇನ್ನೂ ಕೆಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಬೇಕೆಂದು ಬಯಸುತ್ತಾರೆ. ಇದೀಗ ಧೋನಿ ಮುಂದಿನ ಐಪಿೆಲ್ ಆಡುವ ಸುಳಿವು ನೀಡುತ್ತಿದ್ದಂತೆ ಅಭಿಮಾನಿಗಳು ಫುಲ್ ಖಷಿಯಾಗಿದ್ದಾರೆ. ಈಗಲೇ ಧೋನಿ ಆಟ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿ ಧೋನಿಯ ಆಟ ಕಣ್ತುಂಬಿಕೊಳ್ಳಲು ಎಲ್ಲಾ ಮೈದಾನಗಳಲ್ಲಿ ಧೋನಿ ಅಭಿಮಾನಿಗಳೇ ತುಂಬಿದ್ದರು.
ಐಪಿಎಲ್ ಆಡಳಿತ ಮಂಡಳಿ, ಅಕ್ಟೋಬರ್ 31 ರೊಳಗೆ 10 ಫ್ರಾಂಚೈಸಿಗಳು ಒಪ್ಪಂದ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ತಿಳಿಸಬೇಕು ಎಂದು ಹೇಳಿದೆ. ನಂತರ ನವೆಂಬರ್‌ನ ನಾಲ್ಕನೇ ವಾರದಲ್ಲಿ ಹರಾಜು ನಡೆಯಲಿದೆ. ಹೀಗಾಗಿ ಈ ತಿಂಗಳ ಅಂತ್ಯದಲ್ಲಿ ಧೋನಿ ಐಪಿಎಲ್ ಆಡುವ ನಿರ್ಧಾರ ಖಚಿತವಾಗಲಿದೆ. ಈ ಕುರಿತು ಸಿಎಸ್‌ಕೆ ಅಧಿಕತ ಹೇಳಿಕೆ ನೀಡಿಲ್ಲ.
ಕಳೆದ ಐಪಿಎಲ್ ಆವೃತ್ತಿಯಿಂದ ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದು ಸಾಮಾನ್ಯ ಆಟಗಾರರಂತೆ ಆಡಿದ್ದಾರೆ. ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಬಾರಿಯೂ ಇದೇ ರೀತಿಯ ಅದ್ಭುತ ಪ್ರದರ್ಶನ ನೀಡಿ ಸಿಎಸ್‌ಕೆಗೆ ಮತ್ತೊಂದು ಚಾಂಪಿಯನ್ ಪಟ್ಟ ಮುಡಿಸಲು ಧೋನಿ ಸಜ್ಜಾಗಿದ್ದಾರೆ.