- Home
- Sports
- Cricket
- ಮಹಿಳಾ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರು ಸೋಲುತ್ತಿದ್ದಂತೆಯೇ ತಲೆಕೆಳಗಾದ ಭಾರತದ ಸೆಮೀಸ್ ಲೆಕ್ಕಾಚಾರ..! ಮುಂದಿನ ಹಾದಿ ಏನು?
ಮಹಿಳಾ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರು ಸೋಲುತ್ತಿದ್ದಂತೆಯೇ ತಲೆಕೆಳಗಾದ ಭಾರತದ ಸೆಮೀಸ್ ಲೆಕ್ಕಾಚಾರ..! ಮುಂದಿನ ಹಾದಿ ಏನು?
ಮ್ಯಾಂಚೆಸ್ಟರ್: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು, ದಕ್ಷಿಣ ಆಫ್ರಿಕಾ ಎದುರು ಸೋಲುಂಡಿದೆ. ಇದರ ಬೆನಲ್ಲೇ ಸೆಮೀಸ್ ಲೆಕ್ಕಾಚಾರ ತಲೆ ಕಳೆಗಾಗಿದೆ. ಭಾರತಕ್ಕೆ ಇನ್ನೂ ಸೆಮೀಸ್‌ಗೇರುವ ಅವಕಾಶ ಇದೆಯಾ? ನೋಡೋಣ ಬನ್ನಿ.

ದಕ್ಷಿಣ ಆಫ್ರಿಕಾ ಎದುರು ಹೀನಾಯ ಸೋಲು ಕಂಡ ಭಾರತ ಮಹಿಳಾ ಕ್ರಿಕೆಟ್ ತಂಡ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ದಕ್ಷಿಣ ಎದುರಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಆರು ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಹರ್ಮನ್‌ಪ್ರೀತ್ ಕೌರ್ ಪಡೆಗೆ ಈ ಸೋಲು, ಸೆಮೀಸ್ ಲೆಕ್ಕಾಚಾರವನ್ನೇ ತಲೆಕೆಳಗಾಗುವಂತೆ ಮಾಡಿದೆ.
ಭಾರತ ಎದುರು ಗೆದ್ದು ಸೆಮೀಸ್ ಕನಸು ಜೀವಂತವಾಗಿರಿಸಿಕೊಂಡ ಹರಿಣಗಳು
ಇನ್ನೊಂದೆಡೆ ಭಾರತ ತಂಡದ ಎದುರಿನ ಗೆಲುವು ಹರಿಣಗಳ ಪಡೆಯ ಸೆಮೀಸ್ ಕನಸಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಯಾಕೆಂದರೆ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ಎದುರು ಹೀನಾಯ ಸೋಲು ಅನುಭವಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಇದೀಗ, ಭಾರತ ಎದುರಿನ ಗೆಲುವು ತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ತಂದು ಕೊಟ್ಟಿದೆ.
ಭಾರತದ ಸೆಮೀಸ್ ಲೆಕ್ಕಾಚಾರ ಹೇಗಿದೆ?
ಸದ್ಯ ಭಾರತ ತಂಡವು ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ಎದುರು ಭಾರೀ ಅಂತರದ ಗೆಲುವು ಸಾಧಿಸಿರುವುದರಿಂದ, ದಕ್ಷಿಣ ಆಫ್ರಿಕಾ ಎದುರು ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಆದರೆ ಭಾರತ ತಂಡವು ಈಗ ಸೆಮೀಸ್ ಪ್ರವೇಶಿಸಬೇಕಿದ್ದರೇ ಏನು ಮಾಡಬೇಕು ಎನ್ನುವುದನ್ನು ಎಳೆ ಎಳೆಯಾಗಿ ನೋಡೋಣ ಬನ್ನಿ.
ಎರಡೂ ಮ್ಯಾಚ್ ಗೆದ್ದರೇ ಭಾರತ ಸೆಮೀಸ್‌ಗೆ ಲಗ್ಗೆ
'ಎ' ಗುಂಪಿನಲ್ಲಿ ಭಾರತ ತಂಡವು ಇನ್ನೂ ಎರಡು ಪಂದ್ಯಗಳನ್ನಾಡುವುದು ಬಾಕಿ ಉಳಿದಿದೆ. ಇನ್ನುಳಿದ ಎರಡೂ ಪಂದ್ಯಗಳನ್ನು ಗೆದ್ದರೇ ಭಾರತ ತಂಡವು ಅನಾಯಾಸವಾಗಿ ಸೆಮಿಫೈನಲ್‌ಗೆ ಎಂಟ್ರಿಕೊಡಲಿದೆ. ಭಾರತ ಗ್ರೂಪ್ ಹಂತದಲ್ಲಿ ಬಾಂಗ್ಲಾದೇಶ ಹಾಗೂ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಭಾರತ ಸಿಲುಕಿದೆ.
ಒಂದು ಪಂದ್ಯ ಸೋತರೂ ಸೆಮೀಸ್ ಹಾದಿ ಮತ್ತಷ್ಟು ಕಠಿಣ
ಒಂದು ವೇಳೆ ಭಾರತ ತಂಡವು ಎರಡು ಪಂದ್ಯಗಳ ಪೈಕಿ ಇನ್ನೊಂದು ಪಂದ್ಯ ಸೋತರೇ, ಸೆಮೀಸ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಯಾಕೆಂದರೆ ದಕ್ಷಿಣ ಆಫ್ರಿಕಾ ತಂಡವು ತನ್ನ ಪಾಲಿನ ಇನ್ನುಳಿದ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯವನ್ನಾದರೂ ಸೋಲಲೇಬೇಕು. ಆಗ ನೆಟ್ ರನ್‌ರೇಟ್ ಉತ್ತಮವಾಗಿ ಭಾರತ ಸೆಮೀಸ್‌ಗೇರಲು ಸಾಧ್ಯವಾಗಲಿದೆ.
ಇನ್ನುಳಿದ ಎರಡೂ ಮ್ಯಾಚ್ ಸೋತರೇ ಸೆಮೀಸ್ ರೇಸ್‌ನಿಂದ ಭಾರತ ಔಟ್
ಒಂದು ವೇಳೆ ಭಾರತ ತಂಡವು ಗ್ರೂಪ್ ಹಂತದಲ್ಲಿ ಇನ್ನುಳಿದ ಎರಡೂ ಪಂದ್ಯಗಳನ್ನು ಸೋತರೇ ಅಧಿಕೃತವಾಗಿ ಸೆಮೀಸ್ ರೇಸ್‌ನಿಂದ ಹೊರಬೀಳಲಿದೆ. ಆಗ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಬಹುತೇಕ 'ಎ' ಗುಂಪಿನಿಂದ ಸೆಮೀಸ್‌ಗೆ ಎಂಟ್ರಿಕೊಡಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

