ಐಪಿಎಲ್ ಟೂರ್ನಿಯಲ್ಲಿ ನಡೆದ ಈ ಕಾಂಟ್ರೊವರ್ಸಿಗಳು ನಿಮಗೆ ನೆನಪಿವೆಯಾ..?
ಬೆಂಗಳೂರು(ಮಾ.23): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಈ ಐಪಿಎಲ್ ಕೂಡಾ ವಿವಾದಗಳಿಂದ ಹೊರತಾಗಿಲ್ಲ. ಐಪಿಎಲ್‌ನಲ್ಲಿ ಸದ್ದು ಮಾಡಿದ ಕಾಂಟ್ರೋವರ್ಸಿಗಳ ಪಕ್ಷಿನೋಟ ಇಲ್ಲಿದೆ ನೋಡಿ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿ ಇಲ್ಲಿಯವರೆಗೆ 15 ಆವೃತ್ತಿಗಳು ಕಳೆದಿವೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಕೂಡಾ ವಿವಾದಗಳಿಂದ ಹೊರತಾಗಿಲ್ಲ.
* ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದ ಹರ್ಭಜನ್ ಸಿಂಗ್
2008ರ ಐಪಿಎಲ್ ಟೂರ್ನಿಯಲ್ಲಿಯೇ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹರ್ಭಜನ್ ಸಿಂಗ್, ವೇಗಿ ಎಸ್. ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿತ್ತು.
ಇದಾದ ಬಳಿಕ ಹರ್ಭಜನ್ ಸಿಂಗ್ ಅವರನ್ನು ಮುಂದಿನ 4 ಪಂದ್ಯಗಳ ಮಟ್ಟಿಗೆ ಬ್ಯಾನ್ ಮಾಡಲಾಗಿತ್ತು. ಆ ನಂತರ ನಡೆದ 11 ಪಂದ್ಯಗಳಿಂದ ಹರ್ಭಜನ್ ಸಿಂಗ್ ಹೊರಗುಳಿದಿದ್ದರು.
* ಪೊಲ್ಲಾರ್ಡ್-ಸ್ಟಾರ್ಕ್ ಆನ್‌ಫೀಲ್ಡ್ ಚಕಮಕಿ:
2014ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಮಿಚೆಲ್ ಸ್ಟಾರ್ಕ್ ಹಾಗೂ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಕೀರನ್ ಪೊಲ್ಲಾರ್ಡ್ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು.
ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಪೊಲ್ಲಾರ್ಡ್ ಬ್ಯಾಟಿಂಗ್‌ಗೆ ಸಿದ್ದರಾಗುವ ಮುನ್ನವೇ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮಾಡಿದ್ದರು. ಆಗ ಸಿಟ್ಟಿಗೆದ್ದ ಪೊಲ್ಲಾರ್ಡ್ ತಮ್ಮ ಕೈಯಲ್ಲಿದ್ದ ಬ್ಯಾಟ್ ಅನ್ನು ಮಿಚೆಲ್ ಸ್ಟಾರ್ಕ್ ಅವರತ್ತ ಎಸೆದಿದ್ದರು.
* ಐಪಿಎಲ್‌ನ ದೊಡ್ಡ ಕಳಂಕ 2013ರ ಸ್ಪಾಟ್ ಫಿಕ್ಸಿಂಗ್:
2013ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಭೂತ ಕ್ರಿಕೆಟ್ ಜಗತ್ತನ್ನೇ ತಬ್ಬಿಬ್ಬಾಗುವಂತೆ ಮಾಡಿತ್ತು. ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡ ಬಿಸಿಸಿಐ ಕೂಡಾ ಈ ಘಟನೆಯಿಂದ ಜಗತ್ತಿನ ಮುಂದೆ ತಲೆತಗ್ಗಿಸುವಂತೆ ಮಾಡಿತ್ತು.
ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಅಂಕಿತ್ ಚೌಹಾಣ್, ಅಜಿತ್ ಚಂಡೀಲಾ ಹಾಗೂ ಎಸ್ ಶ್ರೀಶಾಂತ್, 2013ರ ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಇದಾದ ಬಳಿಕ ಈ ಮೂವರು ಕ್ರಿಕೆಟಿಗರನ್ನು ಐಪಿಎಲ್‌ನಿಂದ ಬ್ಯಾನ್ ಮಾಡಲಾಯಿತು.
* ಅಶ್ವಿನ್ ಮಂಕಡ್ ರನೌಟ್
2019ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್, ನಾನ್‌ಸ್ಟ್ರೈಕರ್‌ನಲ್ಲಿದ್ದ ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿ, ವಿವಾದ ಹುಟ್ಟುಹಾಕಿದ್ದರು.
ರವಿಚಂದ್ರನ್ ಅಶ್ವಿನ್ ಮಾಡಿದ್ದ ಈ ರನೌಟ್ ಬಗ್ಗೆ ಹಲವು ಕ್ರಿಕೆಟ್ ಪಂಡಿತರು ಸಾಕಷ್ಟು ಪರ ಹಾಗೂ ವಿರೋಧ ಚರ್ಚೆ ಮಾಡಿದ್ದರು. ಇದೀಗ ಐಸಿಸಿ, ಮಂಕಡ್ ರನೌಟ್ ಅನ್ನು ನಿಯಮಬದ್ದ ಎಂದು ಘೋಷಿಸಿದೆ.
* ರಾಜಸ್ಥಾನ ರಾಯಲ್ಸ್-ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷ ಬ್ಯಾನ್
ತಂಡದಲ್ಲಿ ಭ್ರಷ್ಟಾಚಾರ ಹಾಗೂ ಸ್ಪಾಟ್ ಫಿಕ್ಸಿಂಗ್‌ನಂತಹ ಪ್ರಕರಣ ನಡೆದ ಹಿನ್ನೆಲೆಯಲ್ಲಿ 2016 ಹಾಗೂ 2017ರ ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಬ್ಯಾನ್ ಮಾಡಲಾಗಿತ್ತು.
* ಧೋನಿಯನ್ನು ಬಿಟ್ಟಿಲ್ಲ ವಿವಾದ
2019ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಅಂಪೈರ್ ನೋಬಾಲ್ ನೀಡಲಿಲ್ಲ ಎಂದು ಅಸಮಾಧಾನಗೊಂಡ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಮೈದಾನ ಪ್ರವೇಶಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.
* ಧೋನಿಯಂತೆಯೇ ವರ್ತಿಸಿದ್ದ ರಿಷಭ್ ಪಂತ್:
ಇನ್ನು 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಅಂಪೈರ್ ನೋಬಾಲ್ ನೀಡಲಿಲ್ಲ ಎಂದು ಸಿಟ್ಟಿಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮೈದಾನ ಪ್ರವೇಶಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.