'ಏನ್ ಗುರೂ, ಕನ್ನಡ ಗೊತ್ತಿಲ್ಲ...' ಎಂದ ಬೆಂಗಳೂರು ಬಾಯ್ ವಿರಾಟ್ ಕೊಹ್ಲಿ..!
ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ನಮ್ಮ ಬೆಂಗಳೂರಿನ ಜತೆಗೆ ಅವಿನಾಭಾವ ಸಂಬಂಧವಿರುವ ವಿಚಾರ ಗುಟ್ಟಾಗಿಯೇನೂ ಉಳಿದಿಲ್ಲ. ಇದೀಗ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಒಡೆತನದ ಪ್ರಖ್ಯಾತ ರೆಸ್ಟೋರೆಂಟ್ 'ಒನ್8 ಕಮ್ಯೂನ್' ಓಪನ್ ಆಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಜತೆಗಿನ ಒಡನಾಟವನ್ನು ವಿರಾಟ್ ಕೊಹ್ಲಿ ಮೆಲುಕು ಹಾಕಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಒಡೆತನದ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಅನ್ನು ಬೆಂಗಳೂರಿಗೆ ವಿಸ್ತರಿಸಿದ್ದಾರೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯೇ ಈ ರೆಸ್ಟೋರೆಂಟ್ ಓಪನ್ ಆಗಿದೆ.
ಬೆಂಗಳೂರಿನಲ್ಲಿ ಆರಂಭವಾದ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಕೊಹ್ಲಿ ಮಾಲೀಕತ್ವದ 5ನೇ ಒನ್8 ಕಮ್ಯೂನ್ ರೆಸ್ಟೋರೆಂಟ್ ಆಗಿದೆ. ಈ ಮೊದಲು ಮುಂಬೈ, ಪುಣೆ ಹಾಗೂ ಕೋಲ್ಕತಾದಲ್ಲಿ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಐಪಿಎಲ್ ಟೂರ್ನಿಯಲ್ಲಿ 2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ, ಬೆಂಗಳೂರಿನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಈಗ ಕೊಹ್ಲಿ ಬೆಂಗಳೂರಿನಲ್ಲೂ ತಮ್ಮ ರೆಸ್ಟೋರೆಂಟ್ ಆರಂಭಿಸಿದ್ದಾರೆ.
ನಾನು ಚೊಚ್ಚಲ ಐಪಿಎಲ್‌ನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವುದರಿಂದ ಹಲವರು ನನ್ನನ್ನು ಬೆಂಗಳೂರಿನ ಹುಡುಗ ಎಂದೇ ಕನ್‌ಫ್ಯೂಸ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ
ಇದೀಗ ಈ ರೆಸ್ಟೋರೆಂಟ್ ಕುರಿತಾಗಿ ಖ್ಯಾತ ಕಾಮಿಡಿಯನ್ ಹಾಗೂ ಯೂಟ್ಯೂಬರ್ ರಾಹುಲ್ ಸುಬ್ರಮಣಿಯನ್ ಜತೆಗಿನ ಮಾತುಕತೆ ವೇಳೆ ಕನ್ನಡ ಭಾಷೆಯ ಬಗ್ಗೆ ಕೂಡಾ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ರಾಹುಲ್ ಸುಬ್ರಮಣಿಯನ್, ನಿಮಗೆ ಕನ್ನಡದಲ್ಲಿ ಏನೆಲ್ಲಾ ಮಾತನಾಡಲು ಬರುತ್ತೆ ಎನ್ನುವ ಪ್ರಶ್ನೆಗೆ, 'ಕನ್ನಡ ಗೊತ್ತಿಲ್ಲ' ಇದು ನನ್ನ ಫೇವರೇಟ್ ಟ್ಯಾಗ್‌ಲೈನ್. ಇದರ ಜತೆಗೆ ಏನ್ ಗುರು, ಸಕ್ಕತ್ ಮಗಾ ಎಂದು ಮಾತನಾಡುತ್ತೇನೆ. ಇದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ಕೊಹ್ಲಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.
Virat Kohli
ಐಪಿಎಲ್ ಆಡುವ ಸಂದರ್ಭದಲ್ಲಿ ಒಮ್ಮೆ ವಿರಾಟ್ ಕೊಹ್ಲಿ, ಆರ್‌ಸಿಬಿ ಅಭಿಮಾನಿಗಳ ಫೇವರೇಟ್ ಟ್ಯಾಗ್‌ಲೈನ್ ಈ ಸಲ ಕಪ್ ನಮ್ದೇ ಎನ್ನುವ ಮೂಲಕ ಕನ್ನಡದ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.