ಟೀಂ ಇಂಡಿಯಾ ನಾಯಕತ್ವ ಬದಲಾವಣೆ: ಕೊಹ್ಲಿ ಬಗ್ಗೆ ಕೊನೆಗೂ ತುಟಿಬಿಚ್ಚಿದ ಬಿಸಿಸಿಐ..!
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲ್ಲಿದ್ದಾರೆ. ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಕೊಹ್ಲಿ ಸ್ವತಃ ಈ ವಿಷಯವನ್ನು ಘೋಷಿಸಲಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಎಲ್ಲಾ ವಿಚಾರಗಳ ಕುರಿತಂತೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಈ ಸುದ್ದಿಯು ವಿರಾಟ್ ಕೊಹ್ಲಿ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯಾಗಿದೆ

ಯುಎಇನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಟೀಂ ಇಂಡಿಯಾ ಸೀಮಿತ ಓವರ್‌ಗಳ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜಿನಾಮೆ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ಇದೇ ವರದಿಯಲ್ಲಿ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ ಹಾಗೂ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳ ತಂಡದ ನಾಯಕತ್ವಕ್ಕೆ ವಿದಾಯ ಘೋಷಿಸಲು ತೀರ್ಮಾನಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ಇದೀಗ ಈ ಎಲ್ಲಾ ಗಾಳಿ ಸುದ್ದಿಗಳಿಗೆ ಬಿಸಿಸಿಐ ತೆರೆ ಎಳೆದಿದೆ. ಈ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯು ಸತ್ಯಕ್ಕೆ ದೂರವಾದವು ಎಂದು ಬಿಸಿಸಿಐ ಖಚಾಂಚಿ ಅರುಣ್ ಧುಮಾಲ್ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಬಂದಂತಹ ನಾಯಕತ್ವ ಬದಲಾವಣೆ ಸುದ್ದಿಯು ಆಧಾರರಹಿತವಾದದ್ದು. ಇಂತಹ ಯಾವುದೇ ಚರ್ಚೆ ಬಿಸಿಸಿಐ ನಡೆಸಿಲ್ಲ. ಮೂರು ಮಾದರಿ ಕ್ರಿಕೆಟ್‌ಗೂ ವಿರಾಟ್ ಕೊಹ್ಲಿಯೇ ನಾಯಕರಾಗಿ ಮುಂದುವರೆಯಲಿದ್ದಾರೆ ಎಂದು ಐಎಎನ್‌ಎಸ್ ಸುದ್ದಿಸಂಸ್ಥೆಗೆ ಧುಮಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಯಾವುದೇ ಮಹತ್ವದ ಐಸಿಸಿ ಟ್ರೋಫಿ ಜಯಿಸಿಲ್ಲ. ಇನ್ನು ನ್ಯೂಜಿಲೆಂಡ್ ವಿರುದ್ದದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೊಹ್ಲಿ ಸರಿಯಾದ ತಂಡವನ್ನು ಆಯ್ಕೆ ಮಾಡಿರಲಿಲ್ಲ. ಈ ಕುರಿತಂತೆ ಬಿಸಿಸಿಐ ಕೊಹ್ಲಿ ಮೇಲೆ ಬೇಸರ ಮಾಡಿಕೊಂಡಿದೆ ಎಂದೆಲ್ಲ ವರದಿಯಾಗಿತ್ತು.
ಈ ವಿಚಾರಕ್ಕೂ ಸ್ಪಷ್ಟನೆ ನೀಡಿರುವ ಅರುಣ್, ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ವಿರಾಟ್ ಕೊಹ್ಲಿ ನಾಯಕತ್ವ ಬದಲಾವಣೆ ವಿಚಾರ ನಮ್ಮ ಮುಂದೆ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.