IPL 2024 ಟೂರ್ನಿಗೆ ವೇಳಾಪಟ್ಟಿ ಫಿಕ್ಸ್..! ಗುಡ್ ನ್ಯೂಸ್ ಕೊಟ್ಟ BCCI
ಬೆಂಗಳೂರು: 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯ ಆರಂಭ ಯಾವಾಗ ಎಂದು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಸಿಸಿಐ ಗುಡ್ ನ್ಯೂಸ್ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕಳೆದ ತಿಂಗಳು ಅಂದರೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.
ಇನ್ನು ಈ ವರ್ಷದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇದರ ಹೊರತಾಗಿಯೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭಾರತದಲ್ಲಿಯೇ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ.
ಇದೀಗ ಐಪಿಎಲ್ ಟೂರ್ನಿ ಯಾವಾಗಿನಿಂದ ಆರಂಭವಾಗಲಿದೆ ಎನ್ನುವ ಕುತೂಹಲಕ್ಕೆ ಬಿಸಿಸಿಐ ತೆರೆ ಎಳೆದಿದ್ದು, ಮುಂಬರುವ ಮಾರ್ಚ್ 22ರಿಂದ ಟೂರ್ನಿಗೆ ಚಾಲನೆ ಸಿಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಲೋಕಸಭಾ ಚುನಾವಣೆ ಕೂಡಾ ಅದೇ ಸಮಯದಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. ಇದರ ಹೊರತಾಗಿಯೂ ಭಾರತದಲ್ಲಿಯೇ ಐಪಿಎಲ್ ಆಯೋಜಿಸುವುದಾಗಿ ಬಿಸಿಸಿಐ ಮೂಲಗಳು ಈಗಾಗಲೇ ಸ್ಪಷ್ಟಪಡಿಸಿವೆ.
ಭಾರತದಿಂದಾಚೆಗೆ ಐಪಿಎಲ್ ಟೂರ್ನಿಯನ್ನು ಆಯೋಜಿಸುವ ಯಾವ ಪ್ರಸ್ತಾಪವೂ ಬಿಸಿಸಿಐ ಮುಂದಿಲ್ಲ. ಒಂದು ವೇಳೆ ಯಾವ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆಯೋ ಆ ಸಂದರ್ಭದಲ್ಲಿನ ಕೆಲವು ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಎಎನ್‌ಐ ಸುದ್ದಿಸಂಸ್ಥೆಗೆ ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಕಳೆದ ಬಾರಿ ನಡೆದ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಧೋನಿ ಪಡೆ ತಮ್ಮ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಜ್ಜಾಗಿದೆ.
ಇನ್ನುಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿದೆ.