ನನಗೆ ದೇಶ ಮೊದಲು, ಐಪಿಎಲ್‌ಗೆ ಕೈ ಕೊಡಲು ಮುಂದಾದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!
ಢಾಕಾ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ದತೆಗಳು ಆರಂಭವಾಗಿವೆ. ಇದರ ಭಾಗವಾಗಿ ಫೆಬ್ರಬರಿ 18ರಂದು ಚೆನ್ನೈನಲ್ಲಿ ಆಟಗಾರರ ಹರಾಜು ಸಹಾ ನಡೆದಿತ್ತು. ಎಲ್ಲಾ 8 ಫ್ರಾಂಚೈಸಿಗಳು ತಮ್ಮ ಇತಿಮಿತಿಯೊಳಗೆ ತಮಗೆ ಬೇಕಾದ ಆಟಗಾರರನ್ನು ಖರೀದಿಸಿದ್ದವು.
ಹೀಗಿರುವಾಗಲೇ ಕೆಲವು ಕ್ರಿಕೆಟಿಗರು ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರೆ, ಮತ್ತೆ ಕೆಲವು ಆಟಗಾರರು ದೇಶ ಮೊದಲು ಐಪಿಎಲ್ ಆಮೇಲೆ ಎನ್ನುವಂತಹ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್ ಎರಡನೇ ವಾರದಲ್ಲಿ ಆರಂಭವಾಗುವ ಸಾಧ್ಯತೆಯಿದ್ದು, ಕ್ರಿಕೆಟ್ ಅಭಿಮಾನಿಗಳು ಹೈವೋಲ್ಟೇಜ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಶಕೀಬ್ ಅಲ್ ಹಸನ್ ಸೇರಿದಂತೆ ಕೆಲವು ಆಟಗಾರರು ಐಪಿಎಲ್ ವೇಳೆ ರಾಷ್ಟ್ರೀಯ ತಂಡದಲ್ಲಿ ಆಡುವ ಬದಲು ಐಪಿಎಲ್ ಆಡಲು ತಮ್ಮ ಕ್ರಿಕೆಟ್ ಮಂಡಳಿಗಳಿಂದ ನಿರಪೇಕ್ಷಣ ಪತ್ರ ಪಡೆದಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದ ಡೆಡ್ಲಿ ವೇಗಿ ಕಗಿಸೋ ರಬಾಡ, ನನ್ನ ಮೊದಲ ಆಯ್ಕೆ ರಾಷ್ಟ್ರವನ್ನು ಪ್ರತಿನಿಧಿಸುವುದು, ಆ ಬಳಿಕ ಎರಡನೇ ಆಯ್ಕೆ ಐಪಿಎಲ್ ಎಂದು ಖಡಾಖಂಡಿತವಾಗಿ ಹೇಳಿದ್ದರು.
ಇದೀಗ ಬಾಂಗ್ಲಾದೇಶದ ಯಾರ್ಕರ್ ಸ್ಪೆಷಲಿಸ್ಟ್ ಮುಷ್ತಾಫಿಜುರ್ ರೆಹಮಾನ್ ಸಹ ದೇಶಕ್ಕಾಗಿ ಐಪಿಎಲ್ ತ್ಯಾಗ ಮಾಡಲು ಸಿದ್ದ ಎಂದಿದ್ದಾರೆ.
ಇತ್ತೀಚೆಗೆ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 25 ವರ್ಷದ ಮುಷ್ತಾಫಿಜುರ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 1 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
ಬಾಂಗ್ಲಾದೇಶ ತಂಡವು ಏಪ್ರಿಲ್ ತಿಂಗಳಿನಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯಾಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಐಪಿಎಲ್ ವೇಳಾಪಟ್ಟಿ ಇನ್ನೂ ಪ್ರಕಟಗೊಳ್ಳದೇ ಇದ್ದರೂ ಐಪಿಎಲ್ ಹಾಗೂ ಈ ಟೆಸ್ಟ್ ಸರಣಿ ಒಟ್ಟೊಟ್ಟಿಗೆ ನಡೆಯುವ ಸಾಧ್ಯತೆಯಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನನಗೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದರೆ, ಲಂಕಾ ವಿರುದ್ದ ಟೆಸ್ಟ್ ಸರಣಿ ಆಡಲಿದ್ದೇನೆ. ಒಂದು ವೇಳೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡದಿದ್ದರೆ ಆ ಬಳಿಕ ನಾನೇನು ಮಾಡಬೇಕು ಎನ್ನುವುದನ್ನು ತೀರ್ಮಾನಿಸುತ್ತೇನೆ ಎಂದು ಮುಷ್ತಾಫಿಜುರ್ ಹೇಳಿದ್ದಾರೆ.
ನನಗೆ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ಸಿಕ್ಕರೆ ಖಂಡಿತ ಐಪಿಎಲ್ ಆಡುತ್ತೇನೆ. ದೇಶಪ್ರೇಮ ಮೊದಲು, ಐಪಿಎಲ್ ಆಮೇಲೆ ಎಂದು ಬಾಂಗ್ಲಾದೇಶ ಎಡಗೈ ವೇಗಿ ತಮ್ಮ ಬದ್ಧತೆಯನ್ನು ಮೆರೆದಿದ್ದಾರೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮುಷ್ತಾಫಿಜುರ್ ಬಾಂಗ್ಲಾದೇಶ ಪರ ಕೇವಲ 14 ಟೆಸ್ಟ್ ಪಂದ್ಯಗಳನ್ನಾಡಿ 30 ವಿಕೆಟ್ ಕಬಳಿಸಿದ್ದಾರೆ.
ಇನ್ನು ಮುಷ್ತಾಫಿಜುರ್ ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ 61 ಏಕದಿನ ಪಂದ್ಯಗಳನ್ನಾಡಿ 115 ವಿಕೆಟ್ ಕಬಳಿಸಿದ್ದಾರೆ, ಚುಟುಕು ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಪರ 41 ಪಂದ್ಯಗಳನ್ನಾಡಿ 7.93ರ ಎಕನಮಿಯಲ್ಲಿ 58 ವಿಕೆಟ್ ಕಬಳಿಸಿ ಮಿಂಚಿದ್ದಾರೆ.