14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಆಸ್ಟ್ರೇಲಿಯಾ ಆಟಗಾರರಲ್ಲಿ ಆತಂಕ...! ಏನಾಯ್ತು..?
ಬೆಂಗಳೂರು: ಮಿಲಿಯನ್ ಡಾಲರ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲು ಜಗತ್ತಿನ ನಾನಾ ಮೂಲೆಯ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದಕ್ಕೆ ಆಸ್ಟ್ರೇಲಿಯಾದ ಆಟಗಾರರು ಹೊರತಾಗಿಲ್ಲ.
ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರು ತಮ್ಮದೇ ಆದ ಬೇಡಿಕೆಗಳನ್ನು ಸೃಷ್ಠಿಸಿಕೊಂಡಿದ್ದಾರೆ. ಮಾರ್ಕಸ್ ಸ್ಟೋನಿಸ್, ಪ್ಯಾಟ್ ಕಮಿನ್ಸ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಅವರಂತಹ ಆಟಗಾರರಿಗೆ ಐಪಿಎಲ್‌ನಲ್ಲಿ ಸಾಕಷ್ಟು ಬೇಡಿಕೆಯಿದೆ. ಹೀಗಿರುವಾಗಲೇ ಆಸ್ಟ್ರೇಲಿಯಾ ಪಾಳಯದಿಂದ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಬಿಸಿಸಿಐ ಭರದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಇದರ ಭಾಗವಾಗಿ 14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಫೆಬ್ರವರಿ 18ರಂದು ಆಟಗಾರರ ಮಿನಿ ಹರಾಜು ಚೆನ್ನೈ ಆಯೋಜಿಸಲಾಗಿದೆ.
ಈ ಬಾರಿ ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸಲು ಐಪಿಎಲ್ ಫ್ರಾಂಚೈಸಿಗಳು ಎದುರು ನೋಡುತ್ತಿವೆ.
ಇನ್ನು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸುವ ವಿಶ್ವಾಸವನ್ನು ಬಿಸಿಸಿಐ ವ್ಯಕ್ತಪಡಿಸಿದ್ದು, ಇದು ಕ್ರಿಕೆಟ್ ಆಸ್ಟ್ರೇಲಿಯಾಗೆ ಹುಬ್ಬೇರಿಸುವಂತೆ ಮಾಡಿದೆ.
ಹೀಗಾಗಿ ಆಸೀಸ್ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಬೇಕಿದ್ದರೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ NOC(ನಿರಪೇಕ್ಷಣಾ ಪತ್ರ) ಪಡೆಯಬೇಕು ಎಂದು ಸೂಚಿಸಿದೆ. ನಿರಪೇಕ್ಷಣಾ ಪತ್ರ ಪಡೆದ ಬಳಿಕವಷ್ಟೇ ಅಸೀಸ್ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಬಹುದಾಗಿದೆ
ಒಂದು ವೇಳೆ ಆರೋಗ್ಯದ ಕಾಳಜಿಯನ್ನು ಗಮನದಲ್ಲಿಟ್ಟು ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರಿಗೆ ನಿರಪೇಕ್ಷಣಾ ಪತ್ರ ನೀಡದೇ ಇರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಇದು ಆಸೀಸ್ ಆಟಗಾರರಲ್ಲಿ ಆತಂಕ ಹುಟ್ಟುವಂತೆ ಮಾಡಿದೆ.
ಐಪಿಎಲ್ ಆಯೋಜನೆಯ ಎಲ್ಲಾ ವ್ಯವಸ್ಥೆಗಳನ್ನು ಕೂಲಂಕುಶವಾಗಿ ಗಮನಿಸಿ ಒಬ್ಬೊಬ್ಬರಂತೆ ಆಟಗಾರರಿಗೆ ನಿರಪೇಕ್ಷಣಾ ಪತ್ರ ನೀಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ನಿಕ್ ಹಾಕ್ಲೆ ತಿಳಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ಈ ನಡೆ ಫ್ರಾಂಚೈಸಿ ಹಾಗೂ ಆಟಗಾರರಲ್ಲಿ ಆತಂಕ ಹುಟ್ಟುಹಾಕುವಂತೆ ಮಾಡಿದ್ದು, ಆಸೀಸ್ ಆಟಗಾರರನ್ನು ಖರೀದಿಸಬೇಕೋ, ಬೇಡವೋ ಎನ್ನುವ ಗೊಂದಲಕ್ಕೆ ಫ್ರಾಂಚೈಸಿಗಳು ಸಿಲುಕುವ ಸಾಧ್ಯತೆಯಿದೆ.
ಫೆಬ್ರವರಿ 02ರಂದ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯು ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದು ಮಾಡಿತ್ತು. ದಕ್ಷಿಣ ಆಫ್ರಿಕಾದಲ್ಲಿ ಎರಡನೇ ಹಂತದ ಕೊರೋನಾ ಅಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಪಡಿಸಿತ್ತು.