KL ರಾಹುಲ್ ಎದುರೇ ಅಬ್ಬರಿಸಿ ಕೊನೆಗೆ ಪಂಜಾಬ್ ನಾಯಕನ ಕ್ಷಮೆ ಕೇಳಿದ ಮ್ಯಾಕ್ಸ್‌ವೆಲ್..!
ಸಿಡ್ನಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಮಂಕಾಗಿದ್ದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಎದುರೇ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಸಿಕ್ಸರ್ ಸಿಡಿಸಿ ಮಿಂಚಿದರು. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ವಿಫಲವಾಗಿದ್ದ ಮ್ಯಾಕ್ಸಿ, ಟೀಂ ಇಂಡಿಯಾ ವಿರುದ್ಧ ಮೈ ಚಳಿ ಬಿಟ್ಟು ಬ್ಯಾಟಿಂಗ್ ನಡೆಸಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಮ್ಯಾಕ್ಸ್‌ವೆಲ್ ಪಂಜಾಬ್ ನಾಯಕ ರಾಹುಲ್ ಕ್ಷಮೆಯನ್ನು ಕೇಳಿದ್ದಾರೆ. ಇದೇ ವೇಳೆ ನ್ಯೂಜಿಲೆಂಡ್ ಆಲ್ರೌಂಡರ್ ಜೇಮ್ಸ್ ನೀಶಮ್ ಕೂಡಾ ಮ್ಯಾಕ್ಸಿಗೆ ಸಾಥ್ ನೀಡಿದ್ದಾರೆ.

ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಫಿಂಚ್ ನೇತೃತ್ವದ ಆಸೀಸ್ ತಂಡ 66 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಆಸೀಸ್ ನಾಯಕ ಆ್ಯರೋನ್ ಫಿಂಚ್(114) ಹಾಗೂ ಸ್ಟೀವ್ ಸ್ಮಿತ್(105) ಆಕರ್ಷಕ ಶತಕ ಬಾರಿಸಿದರೆ, ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(45) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 374 ರನ್ ಬಾರಿಸಿತ್ತು.
ಅದರಲ್ಲೂ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರನ್ ಗಳಿಸಲು ಪರದಾಡಿದ್ದ ಮ್ಯಾಕ್ಸ್‌ವೆಲ್, ಟೀಂ ಇಂಡಿಯಾ ವಿರುದ್ಧ ಕೇವಲ 19 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 45 ಬಾರಿಸಿದ್ದರು.
ಇತ್ತೀಚೆಗಷ್ಟೇ ಮುಕ್ತಾಯವಾದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಮ್ಯಾಕ್ಸ್‌ವೆಲ್ 13 ಪಂದ್ಯಗಳನ್ನಾಡಿ ಕೇವಲ 108 ರನ್ ಮಾತ್ರ ಗಳಿಸಿದ್ದರು.
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ ಕಿಂಗ್ಸ್ ಇಲೆವನ್ ಫ್ರಾಂಚೈಸಿ ಬರೋಬ್ಬರಿ 10.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
ಆದರೆ ಯುಎಇನಲ್ಲಿ ಬ್ಯಾಟಿಂಗ್‌ನಲ್ಲಿ ಮ್ಯಾಕ್ಸಿ ಸಂಪೂರ್ಣ ವಿಫಲವಾಗಿದ್ದರು. ವಿಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಮ್ಯಾಕ್ಸ್‌ವೆಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿರಲಿಲ್ಲ.
ಆದರೆ ಆಸ್ಟ್ರೇಲಿಯಾ ಜೆರ್ಸಿ ತೊಡುತ್ತಿದ್ದಂತೆ ಮ್ಯಾಕ್ಸ್‌ವೆಲ್ ಖದರ್ ಬದಲಾಗಿದ್ದು, ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಎದುರೇ ಮ್ಯಾಕ್ಸಿ ಮಿಂಚಿನ ಪ್ರದರ್ಶನ ತೋರಿದ್ದಾರೆ.
ಟ್ವಿಟರ್‌ನಲ್ಲಿ ವರುಣ್ ಎಂಬಾತ ಹಾಕಿದ ಫೋಸ್ಟ್ ನೋಡಿ ಮ್ಯಾಕ್ಸ್‌ವೆಲ್, ನಾನು ಬ್ಯಾಟಿಂಗ್ ಮಾಡುತ್ತಿದ್ದಾಗಲೇ ರಾಹುಲ್ ಬಳಿ ಕ್ಷಮೆ ಕೋರಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಮತ್ತೊಂದೆಡೆ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಕಿವೀಸ್ ಆಲ್ರೌಂಡರ್ ಜೇಮ್ಸ್ ನೀಶಮ್ ತಮ್ಮ ತಂಡಕ್ಕೆ ರೋಚಕ ಗೆಲುವು ದಕ್ಕಿಸಿಕೊಟ್ಟಿದ್ದಾರೆ.
ವಿಂಡೀಸ್ ಎದುರು ನೀಶಮ್ ಕೇವಲ 24 ಎಸೆತಗಳಲ್ಲಿ 5 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ ಅಜೇಯ 48 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ರೋಚಕ ಗೆಲುವು ದಕ್ಕಿಸಿಕೊಟ್ಟಿದ್ದರು.
ಮ್ಯಾಕ್ಸ್‌ವೆಲ್ ಹಾಗೂ ನೀಶಮ್ ತಮ್ಮ ತಮ್ಮ ದೇಶಗಳ ಪರ ಆಡುವುದನ್ನು ನೋಡಿದಾಗ ರಾಹುಲ್ ಪ್ರತಿಕ್ರಿಯೆ ಹೀಗಿತ್ತು ಎಂದು ವರಣ್ ಎಂಬಾತ ಟ್ವೀಟ್ ಮಾಡಿದ್ದರು.
ಇದಕ್ಕೆ ನೀಶಮ್ ಇದು ತುಂಬಾ ಚೆನ್ನಾಗಿದೆಯಲ್ವಾ ಮ್ಯಾಕ್ಸ್‌ವೆಲ್ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.