Ashes 2021: ಬಾಕ್ಸಿಂಗ್ ಡೇ ಟೆಸ್ಟ್‌ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ, 4 ಮಹತ್ವದ ಬದಲಾವಣೆ..!
ಲಂಡನ್: 2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯಲ್ಲಿ (Ashes Test Series) ಜೋ ರೂಟ್ (Joe Root) ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು (England Cricket Team) ಆಸ್ಟ್ರೇಲಿಯಾ ವಿರುದ್ದ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದೆ. ಮೆಲ್ಬೊರ್ನ್‌ನಲ್ಲಿ ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯಕ್ಕೂ ಮುನ್ನ 11 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಾಣುವ ಮೂಲಕ ಇಂಗ್ಲೆಂಡ್ ತಂಡವು ಮುಖಭಂಗ ಅನುಭವಿಸಿದೆ. ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ತಿರುಗೇಟು ನೀಡಲು ಜೋ ರೂಟ್ ಪಡೆ ರೆಡಿಯಾಗಿದೆ.
ಇದೀಗ ಡಿಸೆಂಬರ್ 26ರಿಂದ ಆರಂಭವಾಗಲಿರುವ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಸವಾಲನ್ನು ಸ್ವೀಕರಿಸಲು ಸಜ್ಜಾಗಿದ್ದು, ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ರೆಡಿಯಾಗಿದೆ.
ಇದೀಗ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ECB) ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ 11 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಗೊಳಿಸಿದ್ದು, ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿದೆ. ಆರಂಭಿಕ ಬ್ಯಾಟರ್ ರೋರಿ ಬರ್ನ್ಸ್ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೇರ್‌ಸ್ಟೋವ್‌ಗೆ ಮಣೆ ಹಾಕಲಾಗಿದೆ.
ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದ ಬಳಲುತ್ತಿದ್ದ ಓಲಿ ಪೋಪ್‌ಗೆ ಗೇಟ್ ಪಾಸ್ ನೀಡಲಾಗಿದ್ದು, ಅವರ ಬದಲಿಗೆ ಜಾಕ್ ಕ್ರಾವ್ಲಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಅಲ್ರೌಂಡರ್ ಕ್ರಿಸ್ ವೋಕ್ಸ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ವೋಕ್ಸ್ ಹಾಗೂ ಬ್ರಾಡ್ ಬದಲಿಗೆ ಎಡಗೈ ಸ್ಪಿನ್ನರ್ ಜಾಲ್ ಲೀಚ್ ಹಾಗೂ ವೇಗಿ ಮಾರ್ಕ್ ವುಡ್‌ಗೆ ಮಣೆ ಹಾಕಲಾಗಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನ ಸಾಮಾನ್ಯವಾಗಿ ವೇಗಿಗಳಿಗೆ ನೆರವು ನೀಡುವುತ್ತದೆ. ಆದರೆ ಈ ಬಾರಿ ಸ್ಪಿನ್ನರ್‌ಗಳು ಮಿಂಚಬಹುದು ಎಂದು ಪಿಚ್ ಕ್ಯೂರೇಟರ್ ತಿಳಿಸಿದ್ದಾರೆ.
ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಗೆದ್ದು, 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಆಸ್ಟ್ರೇಲಿಯಾ ತಂಡದ ಆಡುವ ಹನ್ನೊಂದರ ಬಳಗ ಪ್ರಕಟಗೊಂಡಿದ್ದು, ಯುವ ವೇಗಿ ಸ್ಕಾಟ್ ಬೊಲ್ಯಾಂಡ್‌ಗೆ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಗಿದೆ.
ಗಾಯಾಳು ಜೇ ರಿಚರ್ಡ್‌ಸನ್ ಬದಲಿಗೆ ಸ್ಕಾಟ್ ಬೊಲ್ಯಾಂಡ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇನ್ನು ಜೋಶ್ ಹೇಜಲ್‌ವುಡ್ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ತಂಡ ಕೂಡಿಕೊಂಡಿದ್ದು, ಮಿಚೆಲ್ ಸ್ಟಾರ್ಕ್ ಸ್ಥಾನ ಉಳಿಸಿಕೊಂಡಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್‌ಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಹೀಗಿದೆ ನೋಡಿ: ಹಸೀಬ್ ಹಮೀದ್, ಜಾಕ್ ಕ್ರಾವ್ಲಿ, ಡೇವಿಡ್ ಮಲಾನ್, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೇರ್‌ಸ್ಟೋವ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಮಾರ್ಕ್ ವುಡ್, ಓಲಿ ರಾಬಿನ್‌ಸನ್, ಜಾಕ್ ಲೀಚ್ ಹಾಗೂ ಜೇಮ್ಸ್ ಆ್ಯಂಡರ್‌ಸನ್
ಬಾಕ್ಸಿಂಗ್ ಡೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹೀಗಿದೆ ನೋಡಿ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಸ್ಕಾಟ್ ಬೊಲ್ಯಾಂಡ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.