ಅಪರೂಪದಲ್ಲೇ ಅಪರೂಪ: ಸಚಿನ್ ತೆಂಡುಲ್ಕರ್ ಸಾಧಿಸಿದ ಅಪರೂಪದ 'ಮೊದಲುಗಳಿವು'..!
ಬೆಂಗಳೂರು: 'ಕ್ರಿಕೆಟ್ ದೇವರು' ಎಂದೇ ಹೆಸರಾದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಇಂದು(ಏಪ್ರಿಲ್ 24, 2023) ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರೆನಿಸಿಕೊಂಡಿರುವ ಸಚಿನ್ ತೆಂಡುಲ್ಕರ್ ಎರಡೂವರೆ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಹಲವಾರು ದಾಖಲೆಯ ಒಡೆಯರಾಗಿರುವ ಸಚಿನ್ ತೆಂಡುಲ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಸಾಧಿಸಿದ ಅಪರೂಪದಲ್ಲೇ ಅಪರೂಪದ ಮೊದಲ ಮೈಲಿಗಲ್ಲುಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

1. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿದ ಜಗತ್ತಿನ ಮೊದಲ ಕ್ರಿಕೆಟಿಗ:
ಸಚಿನ್ ತೆಂಡುಲ್ಕರ್ ಮಾರ್ಚ್ 16, 2012ರಂದು ಬಾಂಗ್ಲಾದೇಶ ಎದುರಿನ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ 49 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕ ಸಿಡಿಸಿದ್ದಾರೆ.
2. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ
ಈಗಾಗಲೇ 8 ಕ್ರಿಕೆಟಿಗರು ಏಕದಿನ ಕ್ರಿಕೆಟ್‌ನಲ್ಲಿ 8 ದ್ವಿಶತಕ ಬಾರಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಫೆಬ್ರವರಿ 24, 2010ರಲ್ಲಿ ದಕ್ಷಿಣ ಆಫ್ರಿಕಾ ಎದುರು ಗ್ವಾಲಿಯರ್‌ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್, ಈ ದಾಖಲೆ ನಿರ್ಮಿಸಿದ್ದರು.
3. 200 ಟೆಸ್ಟ್ ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ:
ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 200 ಟೆಸ್ಟ್ ಪಂದ್ಯವನ್ನಾಡಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಎದುರು ತೆಂಡುಲ್ಕರ್ 2013ರಲ್ಲಿ ಈ ಸಾಧನೆ ಮಾಡಿದ್ದರು. ಅಂದಹಾಗೆ ಇದು ಸಚಿನ್ ಆಡಿದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎನಿಸಿಕೊಂಡಿತ್ತು.
4. 15,000 ಟೆಸ್ಟ್ ರನ್ ಬಾರಿಸಿದ ಮೊದಲ ಕ್ರಿಕೆಟಿಗ:
ಮುಂಬೈಕರ್ ಖ್ಯಾತಿಯ ಸಚಿನ್ ತೆಂಡುಲ್ಕರ್, ಟೆಸ್ಟ್ ಕ್ರಿಕೆಟ್‌ನಲ್ಲಿ 15,000 ರನ್ ಬಾರಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2013ರಲ್ಲಿ ವೆಸ್ಟ್ ಇಂಡೀಸ್ ಎದುರು ಡೆಲ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಈ ಮೈಲಿಗಲ್ಲು ನೆಟ್ಟಿದ್ದರು.
5. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 18,000 ರನ್ ಬಾರಿಸಿದ ಮೊದಲಿಗ
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 18 ಸಾವಿರ ರನ್ ಬಾರಿಸಿದ ಜಗತ್ತಿನ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ತೆಂಡುಲ್ಕರ್ ಅವರದ್ದು. ಸಚಿನ್ ಮಾರ್ಚ್ 24, 2011ರಲ್ಲಿ ನಡೆದ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.
6. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30,000 ರನ್ ಬಾರಿಸಿದ ಮೊದಲ ಕ್ರಿಕೆಟಿಗ:
ರನ್ ಮಷೀನ್ ಸಚಿನ್ ತೆಂಡುಲ್ಕರ್, ನವೆಂಬರ್ 20, 2009ರಲ್ಲಿ ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯದ ವೇಳೆ 30 ಸಾವಿರ ರನ್ ಬಾರಿಸಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಸಚಿನ್ ಮೂರು ಮಾದರಿಯ ಕ್ರಿಕೆಟ್‌ನಿಂದ ಒಟ್ಟು 34,357 ರನ್ ಬಾರಿಸಿದ್ದಾರೆ.
7. ಥರ್ಡ್ ಅಂಪೈರ್‌ಗೆ ಬಲಿಯಾದ ಮೊದಲ ಕ್ರಿಕೆಟಿಗ ತೆಂಡುಲ್ಕರ್:
ಈ ಒಂದು ದಾಖಲೆಯ ಬಗ್ಗೆ ತೆಂಡುಲ್ಕರ್ ಅವರು ಹೆಮ್ಮೆ ಪಡದೇ ಇರಬಹುದು. ಆದರೆ ಕ್ರಿಕೆಟ್ ಇತಿಹಾಸದಲ್ಲಿ ಇದೂ ಒಂದು ಮೈಲಿಗಲ್ಲು. ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ ಅವರು ರನೌಟ್ ಆಗಿದ್ದು, ಮೂರನೇ ಅಂಪೈರ್ ಮೂಲಕ ತೀರ್ಮಾನ ಪ್ರಕಟಿಸಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.