AB De Villiers: ಎಬಿಡಿ ಕ್ರಿಕೆಟ್ ಜಗತ್ತಿನ ಸೂಪರ್‌ಮ್ಯಾನ್ ಎನ್ನಲು ಈ 4 ದಾಖಲೆಗಳೇ ಸಾಕು..!
ಬೆಂಗಳೂರು: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದರೂ, ಅಭಿಮಾನಿಗಳು ಎಬಿಡಿ ಸೊಗಸಾದ ಬ್ಯಾಟಿಂಗ್ ಮರೆತಿಲ್ಲ. ನಾವಿಂದು ಯಾಕಾಗಿ ಎಬಿ ಡಿವಿಲಿಯರ್ಸ್ ಅವರನ್ನು ಕ್ರಿಕೆಟ್ ಜಗತ್ತಿನ ಸೂಪರ್‌ಮ್ಯಾನ್ ಎಂದು ಕರೆಯುತ್ತೇವೆ ಎನ್ನುವುದನ್ನು ನೋಡೋಣ ಬನ್ನಿ.
ಎಬಿಡಿ ಕ್ರಿಕೆಟ್‌ನ ಸೂಪರ್‌ಮ್ಯಾನ್
ಹರಿಣಗಳ ತಂಡದ ಮಾಜಿ ನಾಯಕ ಹಾಗೂ ಆರ್‌ಸಿಬಿ ತಂಡದ ಆಪತ್ಭಾಂಧವ ಎನಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ 'ಸೂಪರ್‌ಮ್ಯಾನ್' ಎನಿಸಿಕೊಂಡಿದ್ದಾರೆ.
ಹಲವು ವಿಶ್ವದಾಖಲೆಗಳ ಒಡೆಯ
ಅಬ್ರಹಂ ಬೆಂಜಮಿನ್ ಡಿವಿಲಿಯರ್ಸ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕವೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಅಪರೂಪದ ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ಎಬಿ ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್, ಏಕದಿನ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್ ಹೀಗೆ ಮೂರು ಮಾದರಿಯಲ್ಲೂ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿ ತಂಡದ ಬೌಲರ್‌ಗಳ ಎದೆಯಲ್ಲಿ ನಡುಕು ಹುಟ್ಟಿಸಿದ್ದರು.
1. ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ:
2015ರಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಏಕದಿನ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಅತಿವೇಗವಾಗಿ ಫಿಫ್ಟಿ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ.
2. ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ:
ಇನ್ನು ವೆಸ್ಟ್ ಇಂಡೀಸ್ ಎದುರು ಅದೇ ಪಂದ್ಯದಲ್ಲೇ ಎಬಿ ಡಿವಿಲಿಯರ್ಸ್ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಬ್ಯಾಟರ್ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ 150 ರನ್
2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಎಬಿ ಡಿವಿಲಿಯರ್ಸ್ ಕೇವಲ 64 ಎಸೆತಗಳಲ್ಲಿ 150 ರನ್ ಸಿಡಿಸುವ ಮೂಲಕ ಅತಿವೇಗವಾಗಿ 150 ರನ್ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಟೆಸ್ಟ್ ದಾಖಲೆ:
ಎಬಿ ಡಿವಿಲಿಯರ್ಸ್ 78 ಟೆಸ್ಟ್ ಇನಿಂಗ್ಸ್‌ಗಳನ್ನಾಡಿದ ಬಳಿಕ ಮೊದಲ ಬಾರಿಗೆ ಶೂನ್ಯ ಸುತ್ತಿದ್ದರು. ಅಷ್ಟು ಟೆಸ್ಟ್ ಪಂದ್ಯವನ್ನಾಡಿದ ಬಳಿಕ ಶೂನ್ಯ ಸುತ್ತಿದ ಮೊದಲ ಬ್ಯಾಟರ್ ಎನ್ನುವ ಹೆಗ್ಗಳಿಕೆ ಎಬಿಡಿಯದ್ದು.