T20I ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ 3 ದಾಖಲೆ ಶುಭ್‌ಮನ್ ಗಿಲ್ ಮುರಿಯಬಹುದು..!
ಬೆಂಗಳೂರು: ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ. ಕಿವೀಸ್ ಎದುರಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಗಿಲ್, ಇದೀಗ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದಾರೆ.
ಮೂರು ಮಾದರಿಯ ಕ್ರಿಕೆಟ್‌ಗೆ ಹೊಂದಿಕೆಯಾಗಬಲ್ಲ ಗಿಲ್, ಟೀಂ ಇಂಡಿಯಾದ ಭವಿಷ್ಯದ ತಾರೆ ಎಂದು ಈಗಾಗಲೇ ಹಲವು ಕ್ರಿಕೆಟ್ ಪಂಡಿತರು ಷರಾ ಬರೆದಿದ್ದಾರೆ. ಈ ಸಂದರ್ಭದಲ್ಲಿಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ ಮೂರು ದಾಖಲೆಗಳನ್ನು ಶುಭ್‌ಮನ್ ಗಿಲ್ ತಮ್ಮ ಹೆಸರಿಗೆ ಸೇರ್ಪಡೆ ಮಾಡಿಕೊಳ್ಳಬಹುದು. ಯಾವುದವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
1. ರೋಹಿತ್ ಶರ್ಮಾ ಅತಿಹೆಚ್ಚು ಶತಕಗಳ ದಾಖಲೆ ಮುರಿಯಬಹುದು
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4 ಶತಕ ಸಿಡಿಸುವ ಮೂಲಕ, ಅತಿಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಸೇರಿದಂತೆ ಕೆಲವು ಕ್ರಿಕೆಟಿಗರು 3 ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಸದ್ಯ ಶುಭ್‌ಮನ್ ಗಿಲ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದು ಶತಕ ಸಿಡಿಸಿದ್ದು, ಇನ್ನು ಕೇವಲ 3 ಶತಕ ಸಿಡಿಸಿದರೆ, ರೋಹಿತ್ ದಾಖಲೆ ಸರಿಗಟ್ಟಬಹುದಾಗಿದೆ. ದೊಡ್ಡ ಇನಿಂಗ್ಸ್ ಆಡುವ ಸಾಮರ್ಥ್ಯವಿರುವ ಗಿಲ್, ಇದೇ ಫಾರ್ಮ್ ಮುಂದುವರೆಸಿಕೊಂಡು ಹೋದರೇ, ಹಿಟ್‌ಮ್ಯಾನ್ ದಾಖಲೆ ಗಿಲ್ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ.
2. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಅರ್ಧಶತಕದ ದಾಖಲೆ:
ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 33 ಅರ್ಧಶತಕ ಬಾರಿಸುವ ಮೂಲಕ, ಗರಿಷ್ಠ ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ(38) ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಗಿಲ್, ಈ ಇಬ್ಬರು ದಿಗ್ಗಜ ಬ್ಯಾಟರ್‌ಗಳ ದಾಖಲೆ ಮುರಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಕೇವಲ 23ನೇ ವಯಸ್ಸಿನಲ್ಲಿಯೇ ಗಿಲ್, ಈಗಾಗಲೇ ಹಲವು ವಿಶ್ವದರ್ಜೆಯ ಬೌಲರ್‌ಗಳೆದುರು ದಿಟ್ಟ ಬ್ಯಾಟಿಂಗ್ ನಡೆಸಿದ್ದಾರೆ. ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿ, ಆ ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸುವ ಗಿಲ್, ಕ್ರಿಕೆಟ್‌ನಲ್ಲಿ ದೀರ್ಘ ಪಯಣ ನಡೆಸಿದರೇ, ಗರಿಷ್ಠ ಅರ್ಧಶತಕಗಳ ದಾಖಲೆ ಗಿಲ್ ಪಾಲಾಗಬಹುದು.
3. ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ದಾಖಲೆ:
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮುಂಬರುವ ಸೆಪ್ಟೆಂಬರ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 16 ವರ್ಷಗಳ ಪಯಣ ಪೂರೈಸಲಿದ್ದಾರೆ. ಸದ್ಯ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ.
ರೋಹಿತ್ ಶರ್ಮಾ, ಇದುವರೆಗೂ 148 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದಾರೆ. ಭಾರತದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ಗಿಲ್, ಈಗಾಗಲೇ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದು, ಇದೇ ರೀತಿಯ ಫಾರ್ಮ್ ಕಾಯ್ದುಕೊಂಡರೇ, ಗಿಲ್ ಚುಟುಕು ಕ್ರಿಕೆಟ್‌ನಲ್ಲಿ 150 ಟಿ20 ಪಂದ್ಯವನ್ನಾಡಿದರೆ ಅಚ್ಚರಿಯಿಲ್ಲ.