ಐಪಿಎಲ್ ಹರಾಜು 2021: ಈ ಮೂರು ತಂಡಗಳು ಶಕೀಬ್ ಅಲ್ ಹಸನ್ ಖರೀದಿಸಬಹುದು..!
ಬೆಂಗಳೂರು: ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಬರೋಬ್ಬರಿ ಒಂದು ವರ್ಷ ನಿಷೇಧ ಶಿಕ್ಷೆಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಬಕ್ಕಿಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದರು ಎನ್ನುವ ಮಾಹಿತಿ ಮುಚ್ಚಿಟ್ಟ ಕಾರಣಕ್ಕೆ ಶಕೀಬ್ ಅವರನ್ನು ಐಸಿಸಿ ಒಂದು ವರ್ಷಗಳ ಕಾಲ ನಿಷೇಧಕ್ಕೆ ಗುರಿಪಡಿಸಿತ್ತು.
ಇತ್ತೀಚೆಗಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಶಕೀಬ್ 6 ವಿಕೆಟ್ ಹಾಗೂ 113 ರನ್ ಗಳಿಸುವ ಮೂಲಕ ತಮ್ಮ ಆಲ್ರೌಂಡ್ ಪ್ರದರ್ಶನವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ಫೆಬ್ರವರಿ 18ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ 3 ಫ್ರಾಂಚೈಸಿಗಳು ಶಕೀಬ್ ಅಲ್ ಹಸನ್ ತಮ್ಮ ತೆಕ್ಕೆಗೆ ಸೆಳೆಯಲು ಎದುರು ನೋಡುತ್ತಿದೆ
1. ಶಕೀಬ್ ಮೇಲೆ ಕಣ್ಣಿಟ್ಟಿದೆ ರಾಜಸ್ಥಾನ ರಾಯಲ್ಸ್ ತಂಡ
ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ರಾಜಸ್ಥಾನ ರಾಯಲ್ಸ್ ಈ ಬಾರಿ ಹರಾಜಿಗೂ ಮುನ್ನ ಸ್ಟೀವ್ ಸ್ಮಿತ್‌ರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.
ಈಗಾಗಲೇ ರಾಯಲ್ಸ್ ತಂಡದಲ್ಲಿ ಬೆನ್ ಸ್ಟೋಕ್ಸ್ ಇದ್ದು, ಶಕೀಬ್ ಕೂಡಾ ತಂಡ ಕೂಡಿಕೊಂಡರೆ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಯಾವುದೇ ಒತ್ತಡವಿಲ್ಲದೇ ಇನಿಂಗ್ಸ್ ಕಟ್ಟಬಹುದು. ಹೀಗಾಗಿ ರಾಜಸ್ಥಾನ ಫ್ರಾಂಚೈಸಿ ಶಕೀಬ್‌ರನ್ನು ಖರೀದಿಸುವ ಸಾಧ್ಯತೆಯಿದೆ.
2. ಕಿಂಗ್ಸ್ ಇಲೆವನ್ ಪಂಜಾಬ್ ಎದುರು ನೋಡುತ್ತಿದೆ ಸ್ಟಾರ್ ಆಲ್ರೌಂಡರ್
ಈಗಾಗಲೇ ತನ್ನ ಸ್ಟಾರ್ ಆಲ್ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೇಮ್ಸ್ ನೀಶಮ್‌ಗೆ ಗೇಟ್‌ಪಾಸ್ ನೀಡಿದ್ದು, ಅವರ ಬದಲಿಗೆ ಪಂಜಾಬ್ ಫ್ರಾಂಚೈಸಿ ಶಕೀಬ್ ಅಲ್ ಹಸನ್‌ಗೆ ಮಣೆ ಹಾಕುವ ಸಾಧ್ಯತೆಯಿದೆ.
ಮಧ್ಯಮ ಕ್ರಮಾಂದಲ್ಲಿ ಬ್ಯಾಟಿಂಗ್ ಜತೆಗೆ ಉಪಯುಕ್ತ ಸ್ಪಿನ್ನರ್ ಆಗಿಯೂ ತಂಡಕ್ಕೆ ನೆರವಾಗುವ ಕ್ಷಮತೆ ಶಕೀಬ್‌ಗೆ ಇದೆ. ಹೀಗಾಗಿ ಪ್ರೀತಿ ಪಡೆ ಶಕೀಬ್‌ಗೆ ಗಾಳ ಹಾಕಿದರೂ ಅಚ್ಚರಿಪಡುವಂತಿಲ್ಲ.
3. ಶಕೀಬ್ ಖರೀದಿಸುವ ರೇಸ್‌ನಲ್ಲಿ ಆರ್‌ಸಿಬಿ..!
ಕಳೆದ ಆವೃತ್ತಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡ 14ನೇ ಆವೃತ್ತಿಯ ಐಪಿಎಲ್‌ನಲ್ಲಾದರೂ ಚೊಚ್ಚಲ ಕಪ್ ಗೆದ್ದೇ ತೀರಬೇಕೆಂಬ ಲೆಕ್ಕಾಚಾರ ಹಾಕಿಕೊಂಡಿದೆ.
ಮಧ್ಯಮ ಕ್ರಮಾಂಕದಲ್ಲಿ ಎಬಿಡಿ ಜತೆ ಶಕೀಬ್ ಕೂಡಾ ತಂಡ ಕೂಡಿಕೊಂಡರೆ ಆರ್‌ಸಿಬಿ ಬ್ಯಾಟಿಂಗ್ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ. ಜತಗೆ ಬೌಲಿಂಗ್‌ನಲ್ಲೂ ಸುಂದರ್-ಚಹಲ್ ಜತೆಗೆ ಶಕೀಬ್ ತಂಡಕ್ಕೆ ನೆರವಾಗಬಲ್ಲರು.