ಕೈಗೆಟುಕುವ ದರದಲ್ಲಿ ಭಾರತದಲ್ಲಿ ಲಭ್ಯವಿದೆ 5 ಸ್ಟಾರ್ ಸೇಫ್ಟಿ ಕಾರು, ಇಲ್ಲಿದೆ ಟಾಪ್ 10 ಗರಿಷ್ಠ ಸುರಕ್ಷತೆ ಲಿಸ್ಟ್ !
ಭಾರತದಲ್ಲಿ ಅತೀ ಕಡಿಮೆ ಬೆಲೆಯಿಂದ ಹಿಡಿದು,ವಿಶ್ವದ ಅತ್ಯಂತ ದುಬಾರಿ ಕಾರುಗಳು ಲಭ್ಯವಿದೆ. ಈ ಪೈಕಿ ಗರಿಷ್ಠ ಸುರಕ್ಷತೆಯ ಕಾರುಗಳಿಗೆ ಭಾರಿ ಬೇಡಿಕೆ. ಭಾರತದಲ್ಲಿ ಲಭ್ಯವಿರುವ 5 ಸ್ಟಾರ್ ಸೇಫ್ಟಿ ಕಾರುಗಳ ವಿವರ ಇಲ್ಲಿದೆ.
ಭಾರತದಲ್ಲಿ ಡ್ರೈವಿಂಗ್ ಇತರ ದೇಶಗಳಂತೆ ಸುಲಭವಲ್ಲ. ರಸ್ತೆ ಒನ್ ವೇ ಆಗಿದ್ದರೂ ಎರಡೂ ಎಲ್ಲಾ ಕಡೆ ಕಣ್ಣಿರಬೇಕು. ಹೀಗಾಗಿ ಈ ರಸ್ತೆಗಳಲ್ಲಿ ಸುರಕ್ಷತೆ ವಾಹನಗಳು ಅತೀ ಅವಶ್ಯಕ. 2022ರ ವರದಿ ಪ್ರಕಾರ 1 ಲಕ್ಷ ಮಂದಿಯಲ್ಲಿ 10 ಮಂದಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಜಾಗರೂಕ ವಾಹನ ಚಾಲನೆ ಜೊತೆಗೆ ಗರಿಷ್ಠ ಸುರಕ್ಷತೆ ಕಾರುಗಳು ಅಷ್ಟೇ ಮುಖ್ಯ.
ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ಮೂಲಕ ಪರೀಕ್ಷಿಸಲ್ಪಟ್ಟ ಕಾರುಗಳ ಪೈಕಿ ಗರಿಷ್ಠ ಸುರಕ್ಷತೆ ಕಾರುಗಳು ಅನ್ನೋ ಹೆಗ್ಗಳಿಕೆಗೆ ಕೆಲ ವಾಹನಗಳು ಪಾತ್ರವಾಗಿದೆ. ಮಕ್ಕಳು ಹಾಗೂ ವಯಸ್ಕರ ಪ್ರಯಾಣ ಸುರಕ್ಷತೆಯಲ್ಲಿ ಗರಿಷ್ಠ ಸುರಕ್ಷತೆ ನೀಡಬಲ್ಲ ಕಾರುಗಳ ಪೈಕಿ ಟಾಟಾ ಹ್ಯಾರಿಯರ್ ಮೊದಲ ಸ್ಥಾನದಲ್ಲಿದೆ. ವಯಸ್ಕರ ಪ್ರಯಾಣ ಸುರಕ್ಷತೆ ಪರೀಕ್ಷೆಯಲ್ಲಿ 34 ಅಂಕಗಳ ಪೈಕಿ 33.05 ಹಾಗೂ ಮಕ್ಕಳ ಸುರಕ್ಷತೆಯ 49 ಅಂಕಗಳ ಪೈಕಿ 45 ಅಂಕಗಳಿಸುವ ಮೂಲಕ ಎರಡು ವಿಭಾಗದಲ್ಲಿ 5 ಸ್ಟಾರ್ ಸುರಕ್ಷತೆ ಪಡೆದುಕೊಂಡಿದೆ.
ಎರಡನೇ ಸ್ಥಾನದಲ್ಲಿರುವ ಟಾಟಾ ಸಫಾರಿ ವಯಸ್ಕರ ಪ್ರಯಾಣ ಸುರಕ್ಷತೆ ಪರೀಕ್ಷೆಯಲ್ಲಿ 34 ಅಂಕಗಳ ಪೈಕಿ 33.05 ಹಾಗೂ ಮಕ್ಕಳ ಸುರಕ್ಷತೆ 49 ಅಂಕಗಳ ಪೈಕಿ 45 ಅಂಕಗಳಿಸಿದೆ. ವಯಸ್ಕರ ಹಾಗೂ ಮಕ್ಕಳ ಎರಡೂ ವಿಭಾಗದಲ್ಲಿ 5 ಸ್ಟಾರ್ ಸೇಫ್ಟಿ ಕಾರು ಅನ್ನೋ ಹಿರಿಮೆಗೆ ಪಾತ್ರವಾಗಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಫೋಕ್ಸ್‌ವ್ಯಾಗನ್ ವಿರ್ಟಸ್ ಸೆಡಾನ್ ಕಾರು ವಯಸ್ಕರು ಹಾಗೂ ಮಕ್ಕಳ ಸುರಕ್ಷತೆಯಲ್ಲಿ 29.71 ಪಾಯಿಂಟ್ಸ್ ಹಾಗೂ 42 ಪಾಯಿಂಟ್ಸ್ ಪಡೆದುಕೊಳ್ಳುವ ಮೂಲಕ 5 ಸ್ಟಾರ್ ಪಡೆದುಕೊಂಡಿದೆ. ಭಾರತದ ಕಾರು ಸುರಕ್ಷತಾ ರೇಟಿಂಗ್‌ನಲ್ಲಿ 3ನೇ ಸ್ಥಾನದಲ್ಲಿದೆ.
ಸ್ಕೋಡಾ ಸ್ಲಾವಿಯಾ ಸೆಡಾನ್ ಕಾರು ವಯಸ್ಕರ ಪ್ರಯಾಣದಲ್ಲಿನ ಪರೀಕ್ಷೆಯಲ್ಲಿ 29.64 ಪಾಯಿಂಟ್ಸ್ ಹಾಗೂ ಮಕ್ಕಳ ಸುರಕ್ಷತೆ ಪರೀಕ್ಷೆಯಲ್ಲಿ 42 ಪಾಯಿಂಟ್ಸ್ ಪಡೆದುಕೊಳ್ಳುವ ಮೂಲಕ 5 ಸ್ಟಾರ್ ಸೇಫ್ಟಿ ರ್ಯಾಂಕ್ ಪಡೆದುಕೊಂಡಿದೆ.
ಸ್ಕೋಡಾ ಕುಶಾಕ್ ಎಸ್‌ಯುವಿ ಕಾರು ವಯಸ್ಕರ ಪ್ರಯಾಣ ಸುರಕ್ಷತಾ ಪರೀಕ್ಷೆಯಲ್ಲಿ 29.64 ಅಂಕ ಹಾಗೂ ಮಕ್ಕಳ ವಿಭಾಗದಲ್ಲಿ 42 ಅಂಕ ಸಂಪಾದಿಸಿ 5 ಸ್ಟಾರ್ ಪಡೆದುಕೊಂಡಿದೆ. ಈ ಮೂಲಕ 5ನೇ ಸ್ಥಾನದಲ್ಲಿದೆ.
ಕ್ರಾಶ್ ಟೆಸ್ಟ್‌ನಲ್ಲಿ ಫೋಕ್ಸ್‌ವ್ಯಾಗನ್ ಟೈಗನ್ 6ನೇ ಸ್ಥಾನ ಪಡೆದುಕೊಂಡಿದೆ. 29.64 ಹಾಗೂ 42 ಪಾಯಿಂಟ್ಸ್ ಪಡೆದುಕೊಳ್ಳು ಮೂಲಕ ಮಕ್ಕಳ ಹಾಗೂ ವಯಸ್ಕರ ವಿಭಾಗದಲ್ಲಿ ಈ ಕಾರು 5 ಸ್ಟಾರ್ ಪಡೆದುಕೊಂಡಿದೆ.
7ನೇ ಸ್ಥಾನದಲ್ಲಿರುವ ಮಹೀಂದ್ರ ಸ್ಕಾರ್ಪಿಯೋ ಎನ್ ವೇರಿಯಂಟ್ ಕೂಡ 5 ಸ್ಟಾರ್ ಪಡೆದುಕೊಂಡಿದೆ. ಇನ್ನು ಹ್ಯುಂಡೈ ವೆನ್ಯೂ, ಟಾಟಾ ಪಂಚ್ , ಮಹೀಂದ್ರ ಎಕ್ಸ್‌ಯುವಿ 300 ಕಾರು 5 ಸ್ಟಾರ್ ಸೇಫ್ಟಿ ಪಡೆದು ನಂತರದ ಸ್ಥಾನದಲ್ಲಿದೆ.