'ಒಂದು ವಾರ ತಡವಾಗಿದ್ದರೆ ದಿವಾಳಿಯಾಗಿರ್ತಿದ್ದೆ..' ಕೋಟಿಗಳ ಒಡೆಯ ಡಿಮಾರ್ಟ್ ಮಾಲೀಕ ರಾಧಾಕಿಶನ್ ಧಮಾನಿ ಹೀಗೆ ಹೇಳಿದ್ದೇಕೆ?
ರಾಧಾಕಿಶನ್ ಧಮಾನಿ ಅವರು ಬಾಲ್ ಬಿಯರಿಂಗ್ ಉದ್ಯಮದಿಂದ ಷೇರುಪೇಟೆಗೆ ಪಾದಾರ್ಪಣೆ ಮಾಡಿದ ಕಥೆ ರೋಚಕ. ಹರ್ಷದ್ ಮೆಹ್ತಾ ಹಗರಣದಿಂದ ಹಿಡಿದು ಡಿಮಾರ್ಟ್ ಸ್ಥಾಪನೆಯ ಹಿಂದಿನ ಕಾರಣಗಳು ಇಲ್ಲಿವೆ.
ತಲೆಗೆ ಹತ್ತದ ಓದು, ಬಾಲ್ ಬಿಯರಿಂಗ್ ಶಾಪ್ ನಡೆಸ್ತಿದ್ದ ಧಮಾನಿ
ರಾಧಾಕಿಶನ್ ಧಮಾನಿ ಹುಟ್ಟಿದ್ದು ಮಾರ್ವಾಡಿ ಕುಟುಂಬದಲ್ಲಿ. ಅಪ್ಪ ಸಣ್ಣ ಪ್ರಮಾಣದ ಸ್ಟಾಕ್ ಬ್ರೋಕಿಂಗ್ ಉದ್ಯಮದಲ್ಲಿದ್ದರೂ, ಅದರತ್ತ ಒಂಚೂರು ಆಸಕ್ತಿ ಧಮಾನಿಗೆ ಇದ್ದಿರಲಿಲ್ಲ. ಷೇರು ಮಾರ್ಕೆಟ್ ಅಂದರೆ ಅಸಡ್ಡೆ ಮಾಡಿಕೊಂಡೇ ಬಂದಿದ್ದರು. ಮೊದಲ ವರ್ಷದ ಬಿಕಾಂ ಓದುವಾಗಲೇ ವಿದ್ಯೆ ತಲೆಗೆ ಹತ್ತದ ಕಾರಣಕ್ಕೆ ಕಾಲೇಜು ಬಿಟ್ಟು ಸಣ್ಣ ಬಾಲ್ ಬಿಯರಿಂಗ್ಸ್ ಉದ್ಯಮ ಆರಂಭ ಮಾಡಿದ್ದರು. ಆದರೆ, ಧಮಾನಿಗೆ 32ನೇ ವರ್ಷವಾಗಿದ್ದಾಗ ಅಪ್ಪನ ಅಕಾಲಿಕ ಮರಣ ಅವರ ಬದುಕನ್ನೇ ಬದಲಿಸಿತು. ಅಪ್ಪ ಮಾಡಿಕೊಂಡು ಬಂದಿದ್ದ ಸ್ಟಾಕ್ ಬ್ರೋಕಿಂಗ್ ಉದ್ಯಮವನ್ನು ಮುಂದುವರಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದರು. ಆದರೆ, ಈ ಉದ್ಯಮಕ್ಕೆ ಇಳಿದಾಗ ಬರೀ ಬ್ರೋಕಿಂಗ್ ಮಾಡುತ್ತಿದ್ದರೆ ಹಣ ಮಾಡುವುದು ಕಷ್ಟ ಎನ್ನುವುದು ಅರಿವಾಯಿತು. ಬಳಿಕ ಅವರು ಟ್ರೇಡಿಂಗ್ ಮಾಡಲು ಶುರುವಿಟ್ಟುಕೊಂಡರು.
ಹರ್ಷದ್ ಮೆಹ್ತಾನಿಂದ ಮಾಡಿದ ದುಡ್ಡು..!
ಹೌದು ರಾಧಾಕಿಶನ್ ಧಮಾನಿ ಮಾಡಿದ ಬಹುತೇಕ ಹಣಕ್ಕೆ ಹರ್ಷದ್ ಮೆಹ್ತಾನೇ ಕಾರಣ. ಹರ್ಷದ್ ಮೆಹ್ತಾ ಕೆಲವು ಸ್ಟಾಕ್‌ಗಳ ಬೆಲೆಯನ್ನು ಕೃತಕವಾಗಿ ಏರಿಸುವ-ಇಳಿಸುವ ಕೆಲಸಗಳನ್ನು ಮಾಡುತ್ತಿದ್ದರೆ, ರಾಧಾಕಿಶನ್ ಧಮಾನಿ ಅಂಥಾ ಷೇರಗಳನ್ನು ಶಾರ್ಟ್ ಮಾಡುತ್ತಿದ್ದರು. ಅಂದರೆ, ಪ್ರತಿದಿನದ ಏರಿಳಿತದ ಮೇಲೆ ಕಂಡುಕೊಳ್ಳುವ ಲಾಭ. ಆದರೆ, ಹರ್ಷದ ಮೆಹ್ತಾ ಹಗರಣ ಹೊರಗೆ ಬಂದ ಸಮಯದಲ್ಲಿ ರಾಧಾಕಿಶನ್ ದೊಡ್ಡ ಪ್ರಮಾಣದಲ್ಲಿ ಹಣ ಮಾಡಿ ಆಗಿದ್ದರು. ಹಿಂದೊಮ್ಮೆ ಹರ್ಷದ್ ಮೆಹ್ತಾ ಹಗರಣದ ಬಗ್ಗೆ ಮಾತನಾಡಿದ್ದ ಧಮಾನಿ, ಹಾಗೇನಾದರೂ ನಾನು ಇನ್ನೊಂದು ವಾರ ಷೇರು ಮಾರಾಟ ತಡ ಮಾಡಿದ್ದರೆ, ನಾನು ದಿವಾಳಿಯಾಗಿ ಹೋಗಿರುತ್ತಿದ್ದೆ ಎಂದಿದ್ದರು.
ಟ್ರೇಡಿಂಗ್ ಬಿಟ್ಟ ಬಳಿಕ ಕೈಹಿಡಿದ ವ್ಯಾಲ್ಯು ಇನ್ವೆಸ್ಟಿಂಗ್!
ಹರ್ಷದ್ ಮೆಹ್ತಾ ಇದ್ದ ಸಮಯದಲ್ಲಿ ಷೇರುಗಳ ಶಾರ್ಟ್ ಮಾಡೋದ್ರಲ್ಲಿ ಹೆಚ್ಚಿನ ಗಮನ ನೀಡ್ತಿದ್ದ ಧಮಾನಿಗೆ ಇದರಿಂದ ಅವರ ಪೋರ್ಟ್‌ಫೋಲಿಯೋ ಕೂಡ ಡ್ಯಾಮೇಜ್ ಆಗುತ್ತಿದೆ ಎನಿಸಿತ್ತು. ಈ ಹಂತದಲ್ಲಿ ಅವರು ಚಂದ್ರಕಾಂತ್ ಸಂಪತ್ ಅವರನ್ನು ಅನುಸರಿಸಲು ಆರಂಭ ಮಾಡಿದರು. ಸ್ಟಾಕ್ ಟ್ರೇಡಿಂಗ್ ಬದಲು ವ್ಯಾಲ್ಯು ಇನ್ವೆಸ್ಟಿಂಗ್‌ನತ್ತ ಗಮನ ಹರಿಸಿದರು. ಈಗಲೂ ಕೂಡ ರಾಧಾಕಿಶನ್ ಧಮಾನಿ, ಯಾವುದೇ ಸ್ಟಾಕ್‌ಗಳನ್ನು ಕೊಳ್ಳುವಾಗ ಅದು ಕನಿಷ್ಠ 5 ರಿಂದ 10 ವರ್ಷಗಳ ಕಾಲ ತಮ್ಮ ಬಳಿ ಇರಬೇಕು ಎಂದು ಬಯಸುತ್ತಾರೆ. ವಾರನ್ ಬಫೆಟ್ ಕೂಡ ಈ ವ್ಯಾಲ್ಯು ಇನ್ವೆಸ್ಟಿಂಗ್‌ಅನ್ನು ನಂಬುತ್ತಾರೆ.
ರಿಟೇಲ್ ದೈತ್ಯ ಡಿಮಾರ್ಟ್ ಸ್ಥಾಪನೆ
ಹಲವು ವರ್ಷಗಳ ಕಾಲ ಸ್ಟಾಕ್ ಟ್ರೇಡರ್ ಆಗಿ ಕೆಲಸ ಮಾಡಿದ ಧಮಾನಿ ತಮ್ಮದೇ ಒಂದು ಕಂಪನಿ ಸ್ಥಾಪನೆ ಮಾಡಬೇಕು ಎಂದು ಅನಿಸಿತು. ಅದಕ್ಕಾಗಿ ಮಾರ್ಕೆಟ್‌ನಿಂದ 6-7 ವರ್ಷಗಳ ದೂರವೇ ಉಳಿದುಕೊಂಡರು. ಮಾರ್ಕೆಟ್‌ನಿಂದ ತೆಗೆದ ಹಣವನ್ನೇ ಬಳಸಿಕೊಂಡು ನವೀ ಮುಂಬೈನ ಪೋವೈಅಲ್ಲಿ ಕಡಿಮೆ ಬೆಲೆಬಾಳುವ ಭೂಮಿಯನ್ನು ಖರೀದಿ ಮಾಡಿದರು. ಇಂದು ರಿಟೇಲ್ ದೈತ್ಯವಾಗಿ ದೇಶದ 11 ರಾಜ್ಯಗಳಲ್ಲಿ 300ಕ್ಕೂ ಅಧಿಕ ಮಾರ್ಟ್‌ಗಳನ್ನು ಹೊಂದಿರುವ ಡಿಮಾರ್ಟ್‌ನ ಮೂಲ ನೆಲ ಇದಾಗಿತ್ತು. 2000 ದಶಕದ ಆರಂಭದಲ್ಲಿ ಅಪ್ನಾ ಬಜಾರ್ ಫ್ರಾಂಚೈಸಿಯನ್ನು ಖರೀದಿ ಮಾಡಿದ, ಧಮಾನಿ ರಿಟೇಲ್ ಸ್ಟೋರ್‌ಅನ್ನು ಆಪರೇಟ್ ಮಾಡುವ ತಂತ್ರಗಳನ್ನು ಸಂಪಾದಿಸಿದರು. ವೆಂಡರ್‌ಗಳ ಜೊತೆ ಸಂಬಂಧ ಬೆಳೆಸಿಕೊಂಡ ಅವರು, 2 ವರ್ಷದ ಬಳಿಕ ಅವೆನ್ಯೂ ಸೂಪರ್‌ಮಾರ್ಡ್ಸ್ ಅಡಿಯಲ್ಲಿ ಮುಂಬೈನಲ್ಲಿ ಮೊದಲ ಡಿ-ಮಾರ್ಟ್ ಸ್ಟೋರ್‌ಅನ್ನು ಆರಂಭ ಮಾಡಿದರು.
ಮಲ್ಟಿಬ್ಯಾಗರ್ ಸ್ಟಾಕ್‌ಗಳಿಂದ ದುಡ್ಡು!
ಫೋರ್ಬ್ಸ್ ಮಾಹಿತಿಯ ಪ್ರಕಾರ, ಧಮಾನಿ ಸಾಕಷ್ಟು ಕಂಪನಿಗಳ ಸ್ಟಾಕ್‌ಗಳನ್ನು ಹೊಂದಿದ್ದಾರೆ. ಅದರೊಂದಿಗೆ ಅಲಿಬಾಗ್‌ನಲ್ಲಿ 156 ರೂಪ್‌ಗಳ ರಾಡಿಸನ್ ಬ್ಲ್ಯೂ ರೆಸಾರ್ಟ್‌ಅನ್ನೂ ಹೊಂದಿದ್ದಾರೆ. ಟೊಬಾಕೋ ಕಂಪನಿ ವಿಎಸ್‌ಟಿ ಇಂಡಸ್ಟ್ರೀಸ್, ಬಿಯರ್ ಕಂಪನಿ ಯುನೈಟೆಡ್ ಬ್ರೇವರಿಸ್, ಇಂಡಿಯಾ ಸಿಮೆಂಟ್ಸ್, ಸುಂದರಂ ಫೈನಾನ್ಸ್, ಬ್ಲ್ಯೂಡಾರ್ಟ್, ಫುಡ್ & ಇನ್ಸ್ ಲಿಮಿಟೆಡ್, ಮಂಗಲಂ ಆರ್ಗಾನಿಕ್ಸ್, ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಸ್ಪೆನ್ನರ್ಸ್ ರಿಟೇಲ್ ಸ್ಟಾಕ್‌ಗಳನ್ನು ಹೊಂದಿದ್ದಾರೆ. ಅಂದಾಜು 85 ರೂಪಾಯಿಗೆ ವಿಎಸ್‌ಟಿ ಇಂಡಸ್ಟ್ರೀಸ್ ಸ್ಟಾಕ್ ಅನ್ನು ಧಮಾನಿ ಖರೀದಿ ಮಾಡಿದ್ದರು. ಇಂದು ಆ ಕಂಪನಿಯ ಷೇರಿನ ಬೆಲೆ 3152 ರೂಪಾಯಿ.
ರಾಕೇಶ್ ಜುಂಜುನ್‌ವಾಲಾಗೆ ಮೆಂಟರ್!
ಇಂದಿಗೂ ದೇಶದ ದೊಡ್ಡದೊಡ್ಡ ರಿಟೇಲ್ ಇನ್ವೆಸ್ಟರ್‌ಗಳು ದಿವಂಗತ ರಾಕೇಶ್ ಜುಂಜುನ್‌ವಾಲಾ ಹೇಳಿದ ಇನ್ವೆಸ್ಟ್‌ಮೆಂಟ್ ಟಿಪ್ಸ್‌ಗಳನ್ನು ಫಾಲೋ ಮಾಡುತ್ತಾರೆ. ಆದರೆ, ತಮಗೆ ಧಮಾನಿ ಗುರು ಆಗಿದ್ದರು ಅನ್ನೋದನ್ನು ಸ್ವತಃ ರಾಕೇಶ್ ಜುಂಜುನ್‌ವಾಲಾ ಹೇಳಿದ್ದರು. ಅವರೇ ತಮ್ಮ ಮೆಂಟರ್, ಅವರಿಂದಲೇ ನಾನು ಟ್ರೇಡಿಂಗ್ ಕಲಿತೆ ಎಂದಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ಜುಂಜುನ್ವಾಲಾ ದಮಾನಿಯಿಂದ ಷೇರು ಮಾರುಕಟ್ಟೆಯ ಬದಲಾವಣೆಗಳನ್ನು ಹೇಗೆ ಎದುರಿಸಬೇಕೆಂದು ಕಲಿತಿದ್ದರು.
ಇದನ್ನೂ ಓದಿ: 72,814 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಈಕೆ, ಭಾರತದ 2ನೇ ಶ್ರೀಮಂತ ಮಹಿಳೆ!
ಉದ್ಯಮಿ ವ್ಯಕ್ತಿತ್ವ, ಡಿಮಾರ್ಟ್‌ನ ಲಾಭಕ್ಕೆ ಇದೇ ಕಾರಣ
ಧಮಾನಿ ಸ್ಟಾಕ್‌ಗಳನ್ನು ಮಾತ್ರವೇ ಶಾರ್ಟ್ ಮಾಡುತ್ತಿದ್ದರು, ಆದರೆ, ಉದ್ಯಮದಲ್ಲಿ ಅವರು ಲಾಂಗ್ ಟರ್ಮ್ ದೃಷ್ಟಿಯಲ್ಲೇ ಯೋಚನೆ ಮಾಡುತ್ತಿದ್ದರು. ಡಿಮಾರ್ಟ್ ವಿಚಾರದಲ್ಲೇ ಹೇಳುವುದಾದರೆ, ಡಿಮಾರ್ಟ್‌ನ ಲಾಭಕ್ಕೆ ದೊಡ್ಡ ಕಾರಣ ಏನೆಂದರೆ, ಅವರು ತಮ್ಮ ಸ್ಟೋರ್‌ಗಳ ಜಾಗವನ್ನು ಭೋಗ್ಯಕ್ಕೆ ಪಡೆಯೋದಿಲ್ಲ. ಖರೀದಿ ಮಾಡೋದರಲ್ಲಿ ಆಸಕ್ತಿ ತೋರುತ್ತಾರೆ. ಇದರಿಂದ ದೊಡ್ಡ ಪ್ರಮಾಣದ ಬಾಡಿಗೆ ಹಣ ಉಳಿತಾಯವಾಗುತ್ತದೆ. ಸಾಲವನ್ನು ಅವರು ಎಂದಿಗೂ ಇರಿಸಿಕೊಳ್ಳೋದಿಲ್ಲ. ತಮಗೆ ಗೂಡ್ಸ್ ಸಪ್ಲೈ ಮಾಡೋ ವೆಂಟರ್‌ಗಳಿಗೆ 11ನೇ ದಿನಕ್ಕೆ ಹಣ ಪಾವತಿ ಮಾಡುತ್ತಾರೆ. ಎಫ್‌ಎಂಸಿಜಿ ಸೆಕ್ಟರ್‌ಗಳ ಪೇಮೆಂಟ್ ಮಾಡುವ ದಿನ 12-21 ದಿನಗಳವರೆಗೆ ಇರುತ್ತದೆ. ಇದು DMart ಮಾರಾಟಗಾರರೊಂದಿಗೆ ಉತ್ತಮ, ದೀರ್ಘಾವಧಿಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ಸ್ಟಾಕ್ ಕೊರತೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: 40 ರೂಪಾಯಿ ಸ್ಟಾಕ್‌ನಿಂದ ಬದಲಾಗಿತ್ತು Rakesh Jhunjhunwala ಇಡೀ ಬದುಕು!