MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಉದ್ಯಮದಲ್ಲಷ್ಟೇ ನಂ.1 ಅಲ್ಲ ದಾನದಲ್ಲೂ ನಂ.1 ಹೀರೋ ರತನ್‌ ಟಾಟಾ: ಹಲವಾರು ಕ್ಷೇತ್ರಕ್ಕೆ ಸಾವಿರಾರು ಕೋಟಿ ದೇಣಿಗೆ

ಉದ್ಯಮದಲ್ಲಷ್ಟೇ ನಂ.1 ಅಲ್ಲ ದಾನದಲ್ಲೂ ನಂ.1 ಹೀರೋ ರತನ್‌ ಟಾಟಾ: ಹಲವಾರು ಕ್ಷೇತ್ರಕ್ಕೆ ಸಾವಿರಾರು ಕೋಟಿ ದೇಣಿಗೆ

ಲಾಭಗಳಿಸುವ ಉದ್ದೇಶದೊಂದಿಗೆ ಉದ್ಯಮಗಳು ಆರಂಭವಾಗುತ್ತವಾದರೂ, ಅವು ಒಂದು ಹಂತ ತಲುಪಿದ ಬಳಿಕ ಉದ್ಯಮಿಗಳು ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡುತ್ತಾರೆ. ಇಂತಹವರಲ್ಲಿ ರತನ್‌ ಟಾಟಾ ಪ್ರಮುಖ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಾರೆ.

4 Min read
Govindaraj S
Published : Oct 10 2024, 09:03 AM IST
Share this Photo Gallery
  • FB
  • TW
  • Linkdin
  • Whatsapp
110

ಟಾಟಾ ಸನ್ಸ್‌ ಮೂಲಕ ಬಡವರ ಪಾಲಿನ ಆಶಾಕಿರಣವಾದ ರತನ್‌: ಲಾಭಗಳಿಸುವ ಉದ್ದೇಶದೊಂದಿಗೆ ಉದ್ಯಮಗಳು ಆರಂಭವಾಗುತ್ತವಾದರೂ, ಅವು ಒಂದು ಹಂತ ತಲುಪಿದ ಬಳಿಕ ಉದ್ಯಮಿಗಳು ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡುತ್ತಾರೆ. ಇಂತಹವರಲ್ಲಿ ರತನ್‌ ಟಾಟಾ ಪ್ರಮುಖ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ರತನ್‌ ಟಾಟಾ, ಟಾಟಾ ಸನ್ಸ್‌ ಮೂಲಕ ಶಿಕ್ಷಣ, ಔಷಧ, ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಕಳೆದ ಕೆಲ ದಶಕಗಳಿಂದ ಸಾವಿರಾರು ಕೋಟಿ ರು ದೇಣಿಗೆ ನೀಡಿದ್ದಾರೆ.

210

ಕ್ಯಾಲಿಫೋರ್ನಿಯಾ ವಿವಿಯಲ್ಲಿ ಟಾಟಾ ಹಾಲ್‌: ರತನ್‌ ಟಾಟಾ ಅವರು ಸ್ಯಾನ್ ಡಿಯಾಗೋದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ (ಟಿಐಜಿಎಸ್‌) ನಿರ್ಮಾಣಕ್ಕಾಗಿ 2016ರಲ್ಲಿ 70 ಮಿಲಿಯನ್‌ ಡಾಲರ್‌ ದೇಣಿಗೆ ನೀಡಿದ್ದರು. ಜೈವಿಕ ಮತ್ತು ಭೌತಿಕ ವಿಜ್ಞಾನಗಳ ಸಂಶೋಧನೆಗಾಗಿ ಮೀಸಲಿಡಲಾಗಿರುವ ಇದು 128,000 ಚದರ ಅಡಿ ವಿಸ್ತೀರ್ಣದ 4 ಅಂತಸ್ತಿನ ಕಟ್ಟಡವಾಗಿದೆ. ಪರಿಸರ ಸ್ನೇಹಿ ಹಾಗೂ ಶಕ್ತಿ ಸ್ನೇಹಿಯಾಗಿರುವ ಈ ಕಟ್ಟಡವು ಅತ್ಯಾಧುನಿಕ ಪ್ರಯೋಗಾಲಯಗಳು, ಕಚೇರಿಗಳು ಮತ್ತು ಸಭಾಂಗಣಗಳನ್ನು ಹೊಂದಿದೆ. ಇಲ್ಲಿ ಜೆನೆಟಿಕ್ಸ್ ಮತ್ತು ರೋಗ ನಿಯಂತ್ರಣದ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಅಂತೆಯೇ, ಜಗತ್ತನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗಗಳು ಮತ್ತು ಸುಸ್ಥಿರ ಆಹಾರ ಮೂಲಗಳ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
 

310

ಭಾರತೀಯ ವಿದ್ಯಾರ್ಥಿಗಳಿಗೆ ನೆರವು: ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ಟಾಟಾ ಸಮೂಹದ ಅಂಗಸಂಸ್ಥೆಯಾಗಿರುವ ಟಾಟಾ ಎಜುಕೇಶನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ 28 ಮಿಲಿಯನ್‌ ಡಾಲರ್‌ ಸ್ಕಾಲರ್‌ಶಿಪ್ ನಿಧಿಯನ್ನು ನೀಡಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟದ ಹೊರತಾಗಿಯೂ ಭಾರತೀಯ ವಿದ್ಯಾರ್ಥಿಗಳು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡುವ ಕನಸು ಕಾಣಲು ಸಾಧ್ಯವಾಗಿದೆ. ಪ್ರತಿ ವರ್ಷ ನೀಡಲಾಗುವ ಈ ದತ್ತಿನಿಧಿಯನ್ನು ವಿದ್ಯಾರ್ಥಿಗಳ ವ್ಯಾಸಂಗ ಮುಗಿಯುವ ತನಕ ಮುಂದುವರೆಸಲಾಗುವುದು. ಕಾರ್ನೆಲ್ ಟೆಕ್‌ನಲ್ಲಿರುವ ಟಾಟಾ ಇನ್ನೋವೇಶನ್ ಸಂಸ್ಥೆಗೂ ಉದ್ಯಮಿ ರತನ್ ಟಾಟಾ ಅವರ ಹೆಸರಿಡಲಾಗಿದೆ. ಇದನ್ನು ಪ್ರಮುಖವಾಗಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗೆ ಮೀಸಲಿಡಲಾಗಿದೆ.

410

ಹಾರ್ವರ್ಡ್‌ ಕೇಂದ್ರ ನಿರ್ಮಾಣ: ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ 100 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ನಿರ್ಮಾಣವಾದ ಕಾರ್ಯನಿರ್ವಾಹಕ ಕೇಂದ್ರಕ್ಕೆ ರತನ್‌ ಟಾಟಾ 50 ಮಿಲಿಯನ್‌ ಡಾಲರ್‌ ಕೊಡುಗೆ ನೀಡಿದ್ದರು. ಇದರ ಸ್ಮರಣಾರ್ಥ 155,000 ಒಟ್ಟು ಚದರ ಅಡಿ ವಿಸ್ತೀರ್ಣದ 7 ಅಂತಸ್ತಿನ ಕಟ್ಟಡಕ್ಕೆ ಟಾಟಾರ ಹೆಸರನ್ನೇ ಇಡಲಾಗಿದೆ. ಸೀಮಿತ ಸಂಪನ್ಮೂಲಗಳೊಂದಿಗೆ ಜನರು ಅಗತ್ಯತೆಗಳಿಗೆ ಪೂರಕವಾದ ವಿನ್ಯಾಸ ಮತ್ತು ಎಂಜಿನಿಯರಿಂಗ್ ತತ್ವಗಳನ್ನು ಅಭಿವೃದ್ಧಿಪಡಿಸಲು 2014ರಲ್ಲಿ ಟಾಟಾ ಸೆಂಟರ್ ಫಾರ್ ಟೆಕ್ನಾಲಜಿ ಅಂಡ್ ಡಿಸೈನ್ (ಟಿಸಿಟಿಡಿ) ಸ್ಥಾಪಿಸಲಾಯಿತು. ಇದಕ್ಕೆ ನೀಡಿದ 950 ಮಿಲಿಯನ್‌ ರು. ದಾನ ಐತಿಹಾಸಿಕ.

510

ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ: ಆಲ್‌ಝೈಮರ್‌ನ ಕಾಯಿಲೆಗೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಲು ಮತ್ತು ಅದನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡುವ ವಿಧಾನಗಳನ್ನು ಅಭಿವೃದ್ಧಿಪಡಿಸಲು ಸೆಂಟರ್ ಫಾರ್ ನ್ಯೂರೋಸೈನ್ಸ್‌ಗೆ ಟಾಟಾ 750 ಮಿಲಿಯನ್‌ ರು. ದಾನ ನೀಡಿದರು.
 

610

ಸಮಾಜದ ಬಗ್ಗೆ ಕಳಕಳಿ: ಸಂಪನ್ಮೂಲ ನಿರ್ಬಂಧಿತ ಸಮುದಾಯಗಳು ಎದುರಿಸುವ ಸವಾಲುಗಳಿಗೆ ಸಮಾಧಾನ ಹುಡುಕುವ ಸಲುವಾಗಿ ಎಂಐಟಿ ಟಾಟಾ ಸೆಂಟರ್ ಆಫ್ ಟೆಕ್ನಾಲಜಿ ಅಂಡ್ ಡಿಸೈನನ್ನು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ಥಾಪಿಸಲಾಯಿತು. ಟಾಟಾಸ್ಟೀಲ್ ಕಂಪನಿ ಕಾರ್ಮಿಕರ ಜತೆಗೂಡಿ ಕೆಲಸ ಅದಿರು ಸಂಗ್ರಹ, ಸಾಗಣೆ, ಕುಲುಮೆ ಬಳಿ ಕೆಲಸ ಗಣಿಗಾರಿಕೆ ನಡೆಸುವ ಪ್ರದೇಶಗಳಲ್ಲಿ ಭೂಮಿ ತೋಡುವ ಕಾರ್ಮಿಕರನ್ನು ನೀವು ನೋಡಿರಬಹುದು. ನೀಲಿ ಬಟ್ಟೆಗಳನ್ನು ಧರಿಸಿ ತಲೆ ಮೇಲೆ ಹೆಲ್ಮೆಟ್ ಹಾಕಿಕೊಂಡು ಸದಾ ತಮ್ಮ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರಿವರು.

710

ರತನ್ ಟಾಟಾ ತಮ್ಮ ವೃತ್ತಿ ಬದುಕು ಆರಂಭಿಸಿದ್ದು, ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪೆನಿಯ ಐಷಾರಾಮಿ ಕೊಠಡಿಯೊಂದರಲ್ಲಿ ಕುಳಿತು ಫೈಲ್‌ಗಳನ್ನು ನೋಡಿ ಆರ್ಡರ್‌ಗಳನ್ನು ಪಾಸ್ ಮಾಡುವ ಕೆಲಸದಿಂದಲ್ಲ. ಬದಲಾಗಿ ಬೆವರಿನಲ್ಲಿ ನಿತ್ಯ ಸ್ನಾನ ಮಾಡಿ ಕೆಲಸ ಮಾಡುವ ಇಂಥ ಕಾರ್ಮಿಕರೊಂದಿಗೆ ತಮ್ಮ ವೃತ್ತಿ ಆರಂಭಿಸಿದ್ದರು ರತನ್. ಅಂದರೆ ಕಚ್ಚಾ ಉಕ್ಕು ಹಾಗೂ ಕಬ್ಬಿಣದ ಅದಿರುಗಳನ್ನು ತೋಡುವುದು. ಗುಡ್ಡೆ ಮಾಡಿದ ಅದಿರನ್ನು ಹೊತ್ತುಕೊಂಡು ಬೇರೆಡೆ ಸಾಗಿಸುವುದು. ಅಷ್ಟೇ ಅಲ್ಲ ಸುಡುವ ಕುಲುಮೆಗಳ ಬಳಿ ನಿಂತು ಕಾರ್ಮಿಕರಂತೆಯೇ ಮತ್ತೊಬ್ಬ ಕಾರ್ಮಿಕನ ರೀತಿ ಅದಿರು ಸಂಸ್ಕರಣೆ ಕೆಲಸ ಮಾಡಿದ್ದರು ರತನ್ ಟಾಟಾ. ಕೋಟಿಕೋಟಿ ಲೆಕ್ಕದಲ್ಲಿ ಬಂಡವಾಳ ಹೂಡಿ ಉದ್ದಿಮೆ ನಡೆಸುತ್ತಿರುವ ಮಾಲೀಕರ ಮಗ ತಮ್ಮದೇ ಕಂಪೆನಿಯಲ್ಲಿ ಮೊದಲಿಗೆ ಕಾರ್ಮಿಕರಂತೆ ದುಡಿದಿದ್ದರು ಎಂದರೆ ಅಂದರೆ ಎಂಥವರಿಗೂ ನಂಬುವುದಕ್ಕೆ ಕಷ್ಟ. ಆದರೆ ಇದು ನಿಜ.

810

ಟಾಟಾ ಇಂಡಿಕಾ: ಭಾರತದ ಮೊದಲ ದೇಶೀ ನಿರ್ಮಿತ ಕಾರು ಇಂದು ಭಾರತದ ಅತಿದೊಡ್ಡ ಆಟೊಮೊಬೈಲ್ ಕಂಪೆನಿಯಾಗಿ ಹೆಸರು ಮಾಡಿರುವ ಟಾಟಾ ಮೋಟಾರ್ಸ್‌, ಟಾಟಾ ಸಮೂಹ ಸಂಸ್ಥೆಯ ಒಂದು ಅಂಗ ಸಂಸ್ಥೆ. 1945ರಲ್ಲಿ ಇದನ್ನು ಹುಟ್ಟು ಹಾಕಲಾಯಿತು. ರತನ್‌ರವರು ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಮೇಲೆ ಅವರ ಸಲಹೆ ಮೇರೆಗೆ ಟಾಟಾ ಮೋಟಾರ್ಸ್‌ ಕಂಪನಿ ಭಾರತದ ಷೇರು ಮಾರುಕಟ್ಟೆ ಪ್ರವೇಶಿಸಿತು. 1998ರ ಡಿಸೆಂಬರ್ 30ರಂದು ಟಾಟಾ ಮೋಟಾರ್ಸ್‌ನ ಕನಸಿನ ಕೂಸಾದ ‘ಟಾಟಾ ಇಂಡಿಕಾ’ ಕಾರನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಇದರ ಪ್ರಚಾರ ಭರಾಟೆ ಎಷ್ಟಿತ್ತೆಂದರೆ, ಸಾರ್ವಜನಿಕವಾಗಿ ಅನಾವರಣವಾದ ಕೇವಲ ಒಂದು ವಾರದಲ್ಲೇ ಸುಮಾರು 1 ಲಕ್ಷದ 15 ಸಾವಿರ ಮಂದಿ ಇಂಡಿಕಾ ಕಾರನ್ನು ಬುಕ್ ಮಾಡಿದ್ದರು. ಮುಂದಿನ ಎರಡು ವರುಷಗಳೊಳಗೆ ಭಾರತದ ನಂಬರ್ 1 ಕಾರು ಎಂಬ ಪಟ್ಟ ಇಂಡಿಕಾದ್ದಾಯಿತು. ಟಾಟಾ ಸಂಸ್ಥೆ ನಿರ್ಮಿತ ಈ ಕಾರು ಭಾರತದ ಮೊದಲ ದೇಶೀ ನಿರ್ಮಿತ ಕಾರೆಂದು ಪರಿಗಣಿಸಲ್ಪಟ್ಟಿದೆ.

910

ಸಂಕೋಚ ಸ್ವಭಾವ, ನಾಯಿಗಳೆಂದರೆ ಅಚ್ಚುಮೆಚ್ಚು ಸಿ.ಡಿ., ಪುಸ್ತಕ, ನಾಯಿ, ವಿಮಾನ ಸಂಚಾರವೇ ಹವ್ಯಾಸ: ಬೆಂಗಳೂರಲ್ಲಿ ಎಫ್‌ 16, ಎಫ್‌ 18 ಓಡಿಸಿದ್ದ ಪೈಲಟ್‌ 2 ದಶಕಗಳ ಕಾಲ ಟಾಟಾ ಸಮೂಹವನ್ನು ಆಳಿದ, ದೇಶದ ಅಗ್ರಗಣ್ಯ ಉದ್ಯಮಿಯಾಗಿ ಹೆಸರು ಮಾಡಿದ್ದ ರತನ್‌ ಟಾಟಾ ಅವರದ್ದು ಅತ್ಯಂತ ಸಂಕೋಚದ ಸ್ವಭಾವ. ಮನೆ, ಕಂಪನಿ ಹೊರತುಪಡಿಸಿದರೆ ಉಳಿದ ಕಡೆ ಅವರು ಕಾಣಿಸಿಕೊಂಡಿದ್ದು ಬಹು ಕಡಿಮೆ. ರತನ್‌ ಟಾಟಾ ಮುಂಬೈನ ತಮ್ಮ ಫ್ಲ್ಯಾಟಿನಲ್ಲಿ ಹಲವು ಪುಸ್ತಕಗಳನ್ನು ಓದುವುದರಲ್ಲಿಯೇ ಬಹಳಷ್ಟು ಕಾಲ ಕಳೆಯುತ್ತಿದ್ದರು. ರತನ್‌ ಅವರಿಗೆ ನಾಯಿಗಳೆಂದರೆ ಅಚ್ಚುಮೆಚ್ಚು. ನಾಯಿಗಳೊಂದಿಗೆ ಸುತ್ತಾಡುವುದೆಂದರೆ ಇನ್ನೂ ಪ್ರೀತಿ. ಹಲವು ಬಾರಿ ತಮ್ಮ ಬಳಿಯಿರುವ 3-4 ನಾಯಿಗಳೊಂದಿಗೆ ಪ್ರವಾಸ ಹೊರಡುತ್ತಿದ್ದರು. ಇವರ ಸಂಗಾತಿಗಳೆಂದರೆ, ಸಿಡಿಗಳು, ಪುಸ್ತಕಗಳು ಮತ್ತು ನಾಯಿಗಳು. ರತನ್‌ರ ಇನ್ನೊಂದು ಪ್ರೀತಿಯ ಹವ್ಯಾಸ ತಮ್ಮ ಬಳಿಯಿರುವ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುವುದು. ವಾರಾಂತ್ಯದಲ್ಲಿ ತಮ್ಮ ಜೆಟ್ ಮೂಲಕ ಆಕಾಶದಲ್ಲಿ ಹಕ್ಕಿಯಾಗುವುದು ಇವರ ನೆಚ್ಚಿನ ಹವ್ಯಾಸವಾಗಿತ್ತು. ತಮ್ಮ ಜೆಟ್‌ನನ್ನು ಪೈಲಟ್‌ನ ನೆರವಿಲ್ಲದೇ ಕೆಲವೊಮ್ಮೆ ತಾವೇ ಓಡಿಸುತ್ತಿದ್ದರು. ಇನ್ನು ಕಾರನ್ನು ವೇಗವಾಗಿ ಓಡಿಸುವುದು ಹಾಗೂ ಮುಂಬೈ ಸಮುದ್ರ ಕಿನಾರೆಯಲ್ಲಿ ತಮ್ಮ ಸ್ಪೀಡ್ ಬೋಟ್‌ನನ್ನು ಮನಸೋ ಇಚ್ಛೆ ಚಾಲಿಸುವುದು ರತನ್ ಇಷ್ಟಪಡುತ್ತಿದ್ದ ಚಟುವಟಿಕೆಗಳು. ಸಿಗರೇಟು, ಕುಡಿತದಿಂದ ದೂರವಿದ್ದರು. 2007ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ರತನ್ ಎಫ್‌-16 ಮತ್ತು ಬೋಯಿಂಗ್ ಎಫ್‌-18 ವಿಮಾನಗಳನ್ನು ಸ್ವತಃ ಚಾಲಿಸಿ ಸಾಹಸ ಮೆರೆದಿದ್ದರು. ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿದ್ದರು. 

1010

ಕಾರುಗಳೆಂದರೆ ಪಂಚಪ್ರಾಣ: ಇದಿಷ್ಟು ಒಂದಾದರೆ ಕಾರುಗಳೆಂದರೆ ರತನ್‌ ಟಾಟಾ ಅವರಿಗೆ ಪಂಚ ಪ್ರಾಣ. ಇವರು ತಮ್ಮ ಬಳಿಕ ಐಷಾರಾಮಿ ಕಾರುಗಳ ದಾಸ್ತಾನೇ ಇರಿಸಿಕೊಂಡಿದ್ದರು. ಫೆರಾರಿ ಕ್ಯಾಲಿಫೋರ್ನಿಯಾ, ಕ್ಯಾಡಿಲ್ಯಾಕ್‌ ಎಕ್ಸ್‌ಎಲ್‌ಆರ್‌, ಲ್ಯಾಂಡ್‌ ರೋವರ್‌ ಫ್ರೀಲ್ಯಾಂಡರ್‌, ಕ್ರಿಸ್ಲರ್‌ ಸೆಬ್ರಿಂಗ್‌, ಹೋಂಡಾ ಸಿವಿಕ್‌, ಮರ್ಸಿಡಿಸ್‌ ಬೆಂಜ್‌ ಎಸ್‌- ಕ್ಲಾಸ್‌, ಮಸ್ಸೆರಾಟಿ ಕ್ವಾಟ್ರೋಪೋರ್ಟ್‌, ಮರ್ಸಿಡಿಸ್‌ ಬೆಂಜ್‌ 500 ಎಸ್‌ಎಲ್‌, ಜಾಗ್ವಾರ್‌ ಎಫ್‌-ಟೈಪ್‌, ಜಾಗ್ವಾರ್‌ ಎಸ್‌ಎಫ್‌-ಆರ್‌ ಮತ್ತು ಇನ್ನು ಹತ್ತು ಹಲವು ಐಷಾರಾಮಿ ಕಾರುಗಳನ್ನು ರತನ್‌ ಟಾಟಾ ಇರಿಸಿಕೊಂಡಿದ್ದರು. ಅದಷ್ಟೇ ಅಲ್ಲದೇ ಅವುಗಳ ನಿರ್ವಹಣೆಯನ್ನು ಸಹ ನೋಡಿಕೊಳ್ಳುತ್ತಿದ್ದರು.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಭಾರತ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved