ಮುಕೇಶ್ ಅಂಬಾನಿಗೆ ಭರ್ಜರಿ ಆದಾಯ, ಜಿಯೋ ತ್ರೈಮಾಸಿಕ ನಿವ್ವಳ ಲಾಭ 7 ಸಾವಿರ ಕೋಟಿ
ಜಿಯೋ ಹಲವು ಆಫರ್, ಹಲವು ಸೇವೆಗಳ ಮೂಲಕ ಗ್ರಾಹಕರ ಸಂಖ್ಯೆ, ವಹಿವಾಟು ವಿಸ್ತರಿಸುತ್ತಿದೆ. ಇದೀಗ ಜೂನ್ ತಿಂಗಳಿಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮುಕೇಶ್ ಅಂಬಾನಿ ಜಿಯೋ ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದೆ.

ಮುಕೇಶ್ ಅಂಬಾನಿ ಬ್ಯೂಸಿನೆಸ್ ಪ್ಲಾನ್ ಪಕ್ಕಾ. ಏರಿಳಿತಗಳಿರಬಹುದು. ಆದರೆ ಲಾಭ ತಂದೇ ಕೊಡುತ್ತೆ. ಇದೀಗ ಅಂಬಾನಿ ಕೋಟಿ ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ. ಮುಕೇಶ್ ಅಂಬಾನಿ ಜಿಯೋ ಹಲವು ರೂಪದಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಜಿಯೋ ನೆಟ್‌ವರ್ಕ್, ಜಿಯೋ ಫೈಬರ್ ಸೇರಿದಂತೆ ಹಲವು ಸೇವೆಗಳು ಲಭ್ಯವಿದೆ. ಇದೀಗ ಮುಕೇಶ್ ಅಂಬಾನಿ ಜಿಯೋದಿಂದ ಭರ್ಜರಿ ಲಾಭಗಳಿಸಿದ್ದಾರೆ. ಕೇವಲ ತ್ರೈಮಾಸಿಕದಲ್ಲಿ ಜಿಯೋ ಬರೋಬ್ಬರಿ 7,110 ಕೋಟಿ ರೂಪಾಯಿ ನಿವ್ವಳ ಲಾಭ (ನೆಟ್ ಪ್ರಾಫಿಟ್) ಪಡೆದುಕೊಂಡಿದೆ.
ಜೂನ್ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ₹7,110 ಕೋಟಿ ನಿವ್ವಳ ಲಾಭ ಗಳಿಸಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ 25 ರಷ್ಟು ಹೆಚ್ಚಳವಾಗಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ವರಮಾನ ಶೇ 19 ರಷ್ಟು ಏರಿಕೆ ಕಂಡಿದ್ದು ₹41,054 ಕೋಟಿಗೆ ಏರಿಕೆಯಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ. ಈ ಮೂಲಕ ಆದಾಯ ಹಾಗೂ ಲಾಭದಲ್ಲಿ ಮುಕೇಶ್ ಅಂಬಾನಿ ಜಿಯೋ ಹಲವು ದಿಗ್ಗಜ ಕಂಪನಿಗಳಿಗನ್ನೇ ಹಿಂದಿಕ್ಕಿದೆ.
200 ಮಿಲಿಯನ್ 5ಜಿ ಗ್ರಾಹಕರು ಮತ್ತು 20 ಮಿಲಿಯನ್ ಹೋಮ್ ಕನೆಕ್ಷನ್ ಸೇರಿದಂತೆ ಇನ್ನೂ ಹಲವು ವಿಷಯಗಳಲ್ಲಿ ಜಿಯೋ ಕಂಪನಿಯು ಹೊಸ ಎತ್ತರಕ್ಕೆ ಬೆಳೆದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ಫೈಬರ್ 7.4 ಮಿಲಿಯನ್ ಚಂದಾದಾರರನ್ನು ಹೊಂದುವ ಮೂಲಕ ಇದೀಗ ವಿಶ್ವದ ಅತಿದೊಡ್ಡ ಫಿಕ್ಸೆಡ್ ವಯರ್‌ಲೆಸ್ ಅಕ್ಸೆಸ್ ಸೇವಾ ಪೂರೈಕೆದಾರ ಆಗಿದೆ. ತನ್ನ ಉತ್ತಮ ಹಣಕಾಸು ಮತ್ತು ಕಾರ್ಯಾಚರಣಾ ಸಾಧನೆಗಳಿಂದ ಕಂಪನಿಯು ಈ ಬೆಳವಣಿಗೆ ಕಂಡಿದೆ ಎಂದಿದ್ದಾರೆ.
ಜಿಯೋ ಕಂಪನಿಯು ಸಾಟಿಯಿಲ್ಲದ ತಂತ್ರಜ್ಞಾನ ಮೂಲಸೌಕರ್ಯ ಸೃಷ್ಟಿಸುವುದನ್ನು ಮುಂದುವರಿಸಲಿದೆ ಹಾಗೂ 5ಜಿ ಮತ್ತು ಫಿಕ್ಸೆಡ್ ಬ್ರ್ಯಾಡ್‌ಬ್ಯಾಂಡ್ ಸೇವೆಯಲ್ಲಿ ಮುಂಚೂಣಿಯಲ್ಲಿಯೇ ಸಾಗಲಿದೆ. ದೇಶದಲ್ಲಿ ಎಐ ಅಳವಡಿಕೆ ಹೆಚ್ಚಿಸಲು ಇದು ನಿರ್ಣಾಯಕವಾಗಲಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅಭಿಪ್ರಾಯಪಟ್ಟರು.
ರಿಲಯನ್ಸ್ ಜಿಯೋ 5ಜಿ ಸೇವೆಯಲ್ಲಿ ದೇಶದಲ್ಲೇ ಕ್ರಾಂತಿ ಮಾಡಿದೆ. 200 ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ ಹೊಂದಿರುವ ಜಿಯೋ 5ಜಿ ಪ್ರತಿ ದಿನ ಹೊಸ ಹೊಸ ಆಫರ್ ನೀಡುತ್ತಿದೆ. ತ್ರೈಮಾಸಿಕದಲ್ಲಿ ಜಿಯೋ ಬರೋಬ್ಬರಿ 9.9 ಮಿಲಿಯನ್ ಹೊಸ ಗ್ರಾಹಕರನ್ನು ಪಡೆದಿದೆ. ಇದು ಇತರ ಟೆಲಿಕಾಂಗಳಿಗೆ ಹೋಲಿಸಿದರೆ ಗರಿಷ್ಠವಾಗಿದೆ.