ಟ್ರಂಪ್‌ನಿಂದಾಗಿ ಭಾರತದ 4 ಅಗ್ರ ಶ್ರೀಮಂತರಿಗೆ 85 ಸಾವಿರ ಕೋಟಿ ರು. ನಷ್ಟ
ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯಿಂದ ಜಾಗತಿಕ ಷೇರು ಮಾರುಕಟ್ಟೆ ಕುಸಿದಿದೆ. ಭಾರತದ ಅಗ್ರ 4 ಶ್ರೀಮಂತರ ಆಸ್ತಿಯಲ್ಲಿ 10 ಬಿಲಿಯನ್ ಡಾಲರ್ ನಷ್ಟವಾಗಿದೆ, ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಆಸ್ತಿ ಗಣನೀಯವಾಗಿ ಕುಸಿದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ದೇಶಗಳ ವಿರುದ್ಧ ಪ್ರತಿತೆರಿಗೆ ವಿಧಿಸಿದರ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯು ಕುಸಿತ ಕಂಡಿದ್ದು, ಇದರ ಭಾಗವಾಗಿ ಭಾರತದಲ್ಲಿನ ಅಗ್ರ 4 ಶ್ರೀಮಂತರ ಆಸ್ತಿಯು 10 ಬಿಲಿಯನ್ ಡಾಲರ್‌ನಷ್ಟು (85,000 ಕೋಟಿ ರು.) ಕರಗಿದೆ.
ಈ ಪೈಕಿ ರಿಲಯನ್ಸ್ ಮುಖ್ಯಸ್ಥ, ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಆಸ್ತಿಯು ಅತಿ ಹೆಚ್ಚು 3.6 ಬಿಲಿಯನ್ ಡಾಲರ್ (30,600 ಕೋಟಿ ರು.) ಕರಗಿ 7.4 ಲಕ್ಷ ಕೋಟಿ ರು.ಗೆ ತಲುಪಿದೆ. ಇವರ ನಂತರದಲ್ಲಿ ಅದಾನಿ ಸಂಸ್ಥೆಯ ಮುಖ್ಯಸ್ಥ ಗೌತಮ್ ಅದಾನಿ ಅವರ ಆಸ್ತಿಯು 3 ಬಿಲಿಯನ್ ಡಾಲರ್ (25,500 ಕೋಟಿ ರು.) ಕರಗಿ 4.87 ಲಕ್ಷ ಕೋಟಿ ರು.ಗೆ ತಲುಪಿದೆ.
ದೇಶದ ಮೂರನೇ ಶ್ರೀಮಂತ ಉದ್ಯಮಿ ಸಾವಿತ್ರಿ ಜಿಂದಾಲ್ ಮತ್ತು ಕುಟುಂಬದ ಆಸ್ತಿಯು 2.2 ಬಿಲಿಯನ್ ಡಾಲರ್ (18,700 ಕೋಟಿ ರು.) ನಷ್ಟವಾಗಿದೆ. ಎಚ್‌ಸಿಎಲ್ ಸ್ಥಾಪಕ ಶಿವ್ ನಾಡಾರ್ ಅವರು 1.5 ಬಿಲಿಯನ್ ಡಾಲರ್ (12,750 ಕೋಟಿ ರು.)ಗಳನ್ನು ಕಳೆದುಕೊಂಡಿದ್ದಾರೆ.
ಈ ನಡುವೆ ಅಮೆರಿಕ ಷೇರುಪೇಟೆಗಳಾದ ಡೌ ಜೋನ್ಸ್ ಆರಂಭದಲ್ಲಿ 1,212.98 ಅಂಕ, ಎಸ್ ಆ್ಯಂಡ್ ಪಿ 181.37 ಅಂಕ ಹಾಗೂ ನಾಸ್ಡಾಕ್ 623.23 ಅಂಕ ಕುಸಿದರೂ ನಂತರ ಚೇತರಿಸಿಕೊಂಡವು.
ಭಾರತ ಮಾತ್ರವಲ್ಲ, ಏಷ್ಯಾ ಹಾಗೂ ಯುರೋಪ್ ಮಾರುಕಟ್ಟೆಗಳು ಸೋಮವಾರ ಭಾರಿ ಕುಸಿತ ಕಂಡಿವೆ. ಖುದ್ದು ಅಮೆರಿಕ ಷೇರುಪೇಟೆಗಳೂ ಏರಿಳಿತ ಕಂಡಿವೆ.ಜರ್ಮನಿ ಷೇರುಪೇಟೆ ಶೇ.6.5ರಷ್ಟು ಭಾರಿ ಕುಸಿತ ಕಂಡಿದ್ದು, 19,803 ಅಂಕಕ್ಕೆ ಇಳಿದಿದೆ. ಫ್ರಾನ್ಸ್ ಷೇರುಪೇಟೆ ಶೇ.5.7ರಷ್ಟು ಕುಸಿದು 6,988.74ಕ್ಕೆ ಬಂದು ನಿಂತಿದೆ. ಬ್ರಿಟನ್ ಷೇರುಪೇಟೆ ಶೇ.4.5ರಷ್ಟು ಇಳಿದಿದ್ದು, 7,723.84ಅಂಕಕ್ಕೆ ಸ್ಥಿರವಾಗಿದೆ.