2007ರ ನಂತರ ಮೊದಲ ಬಾರಿಗೆ ಲಾಭ ಗಳಿಸಿದ ಬಿಎಸ್ಎನ್‌ಎಲ್; ಇದಕ್ಕೆಲ್ಲಾ ಕಾರಣ ಜಿಯೋ ಅಂದ್ರು ನೆಟ್ಟಿಗರು
BSNL Profit: 2007ರ ನಂತರ ಮೊದಲ ಬಾರಿಗೆ BSNL ಲಾಭ ಗಳಿಸಿದ್ದು, ಜಿಯೋ ಬೆಲೆ ಏರಿಕೆಯ ಪರಿಣಾಮ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬಳಕೆದಾರರು ಖಾಸಗಿ ನೆಟ್‌ವರ್ಕ್‌ಗಳಿಗೆ ಮರಳುತ್ತಿರುವ ವರದಿಗಳಿವೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್‌ಎಲ್ 2007ರ ನಂತರ ಮೊದಲ ಬಾರಿಗೆ ಲಾಭದ ಲಯಕ್ಕೆ ಮರಳಿದೆ. ಲಾಭದ ವಿಷಯ ತಿಳಿಯುತ್ತಿದ್ದಂತೆ ನೆಟ್ಟಿಗರು ಇದಕ್ಕೆಲ್ಲಾ ಕಾರಣ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಎಂದು ಕಮೆಂಟ್ ಮಾಡಿದ್ದಾರೆ.
ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಖಾಸಗಿ ಟೆಲಿಕಾಂ ಕಂಪನಿಗಳ ನಡುವಿನ ತೀವ್ರ ಸ್ಪರ್ಧೆಯಿಂದಾಗಿ ಬಿಎಸ್‌ಎನ್‌ಎಲ್ ಮೂಲೆಗುಂಪು ಆಗಿತ್ತು. ಈ ಬಾರಿಯ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್ ಲಾಭ ಗಳಿಸಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್‌ಗೆ 6 ಸಾವಿರ ಕೋಟಿ ರೂಪಾಯಿಯ ಆರ್ಥಿಕ ನೆರವು ಒದಗಿಸಿದೆ ಎಂದು ವರದಿಯಾಗಿತ್ತು.
2024ರ ಜುಲೈನಲ್ಲಿ ರಿಲಯನ್ಸ್ ಜಿಯೋ ತನ್ನ ಟ್ಯಾರಿಫ್ ಬೆಲೆಗಳನ್ನು ಹೆಚ್ಚಿಸಿಕೊಂಡಿತ್ತು. ಇದಾದ ನಂತರ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಟ್ಯಾರಿಫ್ ಬೆಲೆಗಳನ್ನು ಏರಿಕೆ ಮಾಡಿದ್ದವು. ಬೆಲೆ ಏರಿಕೆ ಬೆನ್ನಲ್ಲೇ ಬಿಎಸ್‌ಎನ್‌ಎಲ್ ತನ್ನ ನೆಟ್‌ವರ್ಕ್‌ಗೆ ಬರೋ ಬಳಕೆದಾರರಿಗೆ ಆಫರ್ ಘೋಷಣೆ ಮಾಡಿತ್ತು.
ಈ ಎಲ್ಲಾ ಬೆಳವಣಿಗೆಯಿಂದಾಗಿ ಬಳಕೆದಾರರು ಬಿಎಸ್‌ಎನ್‌ಎಲ್ ನತ್ತ ಮುಖ ಮಾಡಿದರು. ಮತ್ತೊಂದೆಡೆ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಅಳವಡಿಕೆಗೆ ಮುಂದಾಗಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹ ಆರಂಭಿಸಿತ್ತು. ಇದರಿಂದಾಗಿ ಬಿಎಸ್‌ಎನ್ಎಲ್ ಬಳಕೆದಾರರ ಸಂಖ್ಯೆ ಏರಿಕೆಯಾಯ್ತು.
ಈ ಬಾರಿಯ ಆರ್ಥಿಕ ವರ್ಷ ಮೂರನೇ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್ 262 ಕೋಟಿ ರೂಪಾಯಿ ಲಾಭ ಗಳಿಸಿದೆ. ಈ ಹಣಕಾಸಿನ ವರ್ಷದ ಅಂತ್ಯಕ್ಕೆ ಲಾಭದ ಪ್ರಮಾಣ ಶೇ.20ಕ್ಕೂ ಅಧಿಕವಾಗಲಿದೆ ಎಂದು ಬಿಎಸ್‌ಎನ್ಎಲ್ ವಿಶ್ವಾಸ ವ್ಯಕ್ತಪಡಿಸಿದೆ.
2024ರಲ್ಲಿ ರಿಲಯನ್ಸ್ ಜಿಯೋ ಬೆಲೆ ಏರಿಕೆ ಮಾಡಿದ್ದರಿಂದಲೇ ಬಿಎಸ್‌ಎನ್‌ಎಲ್ ಲಾಭಕ್ಕೆ ಹಿಂದಿರುಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮುಕೇಶ್ ಅಂಬಾನಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಆದ್ರೆ ಕಳೆದ ಎರಡು ತಿಂಗಳಿನಿಂದ ಬಿಎಸ್‌ಎನ್‌ಎಲ್ ಬಳಕೆದಾರರು ಮತ್ತೆ ಖಾಸಗಿ ಟೆಲಿಕಾಂ ನೆಟ್‌ವರ್ಕ್‌ಗೆ ಹಿಂದಿರುಗುತ್ತಿರುವ ಬಗ್ಗೆ ವರದಿಯಾಗಿದೆ.