ಶಿರಹಟ್ಟಿ[ನ.13]: ಕಳೆದ 12 ದಿನಗಳಿಂದ ತಾಲೂಕಿನ ಕಡಕೋಳ ಗ್ರಾಮದ ಎಸ್ಸಿ, ಎಸ್ಟಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮಕ್ಕಳಿಗೆ ಬೆಳಗಿನ ಉಪಾಹಾರ ನೀಡಿಲ್ಲ. ಪ್ರತಿ ನಿತ್ಯದ ಊಟದ ವಿವರ (ಪಟ್ಟಿಯಂತೆ) ಊಟ ನೀಡದೇ ಬರೀ ಅರೆ ಬರೆ ಬೆಂದ ಅನ್ನ ನೀಡಿದ್ದು, ಮಕ್ಕಳು ಹಸಿವಿನಿಂದ ನರಳುತ್ತಿವೆ ಎಂದು ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಅವರು ಆರೋಪಿಸಿದ್ದಾರೆ.

ಮಂಗಳವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ವಿರೂಪಾಕ್ಷ ಬೂದಿಹಾಳ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ತೋರಿದ್ದು, ಮಕ್ಕಳ ಆರೋಗ್ಯದಲ್ಲಿ ಏರುಪೇರಾದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ವಸತಿ ನಿಲಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪೌಷ್ಟಿಕ ಆಹಾರ, ಮೂಲಭೂತ ಸೌಲಭ್ಯಕ್ಕಾಗಿ ಕೋಟಿಗಟ್ಟಲೆ ಅನುದಾನ ನೀಡುತ್ತಿದ್ದು, ಸರಿಯಾಗಿ ಬಳಕೆಯಾಗದೇ ಪೋಲಾಗುತ್ತಿದೆ. ವಸತಿ ನಿಲಯದ ಮಕ್ಕಳು ಉಪಾಹಾರ, ಊಟಕ್ಕಾಗಿ ಪರಿತಪಿಸುತ್ತಿವೆ. ಇದು ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶೌಚಾಲಯ ಮತ್ತು ವಸತಿ ನಿಲಯದ ಸ್ವಚ್ಛತೆಗಾಗಿ ಪ್ರತ್ಯೇಕ ಕೆಲಸಗಾರರನ್ನು ನೇಮಕ ಮಾಡಿಕೊಂಡಿರುವುದಾಗಿ ಹೇಳಿ ಹಣ ಖರ್ಚು ಹಾಕುತ್ತಿದ್ದು, ಈ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿಯೇ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದಾರೆ. ಅದೇ ಕೈಯಿಂದಲೇ ಮಕ್ಕಳಿಗೆ ಅಡುಗೆ ಮಾಡಿ ಉಣಬಡಿಸುತ್ತಿದ್ದು, ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ದೂರಿದರು. 

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ತಿಂಗಳು ವಸತಿ ನಿಲಯಗಳಿಗೆ ಪೂರೈಸುವ ಆಹಾರ ಪದಾರ್ಥಗಳ ಪರಿಶೀಲನೆ ನಡೆಸಿದ ನಂತರ ಹಂಚಿಕೆ ಮಾಡಬೇಕು. ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ ಅವರು ಕೂಡ ಪಟ್ಟಣದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ್ದು ಅಲ್ಲಿಯೂ ಅವ್ಯವಸ್ಥೆ ಕಂಡು ಬಂದಿದ್ದು, ಅಧಿಕಾರಿಗಳಿಗೆ ನೋಟಿಸ್ ನೀಡಲು ತಾಪಂ ಇಒ ನಿಂಗಪ್ಪ ಓಲೇಕಾರ ಸಭೆಯಲ್ಲಿ ಸೂಚನೆ ನೀಡಿದರು. 

ಲಕ್ಷ್ಮೇಶ್ವರದಿಂದ ಬಸಾಪುರ, 3 ಕಿಮೀ, ಲಕ್ಷ್ಮೇಶ್ವರ ಪಟ್ಟಣದಲ್ಲಿ 3 ಕಿಮೀ, ಸೂರಣಗಿ ಗ್ರಾಮದಿಂದ ಬೂದಿಹಾಳ ಗ್ರಾಮದ ರಸ್ತೆ ಪಕ್ಕ, ಕೆರಳ್ಳಿ, ಛಬ್ಬಿ ಗ್ರಾಮಗಳು ಸೇರಿ ಒಟ್ಟು 50 ಹೆಕ್ಟೇರ್ ಪ್ರದೇಶದಲ್ಲಿ 11 ಲಕ್ಷ 78 ಸಾವಿರ ವೆಚ್ಚದಲ್ಲಿ ಸಸಿ ನೆಟ್ಟಿರುವುದಾಗಿ ವಲಯ ಅರಣ್ಯ ಇಲಾಖೆ ಮಾಹಿತಿ ನೀಡಿದ್ದು, ಯಾರ ಗಮನಕ್ಕೂ ಬಂದಿಲ್ಲ. ಸಸಿ ನೆಟ್ಟಿರುವ ಸ್ಥಳ ಪರಿಶೀಲನೆಗೆ ದಿನಾಂಕ ನಿಗದಿಪಡಿಸುವಂತೆ ತಿಪ್ಪಣ್ಣ ಕೊಂಚಿಗೇರಿ ಸೂಚನೆ ನೀಡಿದರು. 

ಶಿರಹಟ್ಟಿ ಪಟ್ಟಣದಲ್ಲಿ ನೂರು ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದು, ರೈತರು ಜಮೀನು ಕೊಡಲು ಮುಂದೆ ಬಂದಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿಯೇ ರೈತರು ಒಪ್ಪಿಗೆ ನೀಡಿದ್ದು, ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ಸರಿಯಾದ ಕ್ರಮವಲ್ಲ. ಈ ಕೂಡಲೇ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸುವಂತೆ ತಿಪ್ಪಣ್ಣ ತಾಕೀತು ಮಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಶೀಲವ್ವ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಇಒ ನಿಂಗಪ್ಪ ಓಲೇಕಾರ ಇದ್ದರು.