Singataluru Lift Irrigation: ಪರಿಹಾರಕ್ಕೆ ಒತ್ತಾಯಿಸಿ ಮಳೆಯಲ್ಲೇ ರೈತರ ಧರಣಿ
- ಪರಿಹಾರಕ್ಕೆ ಒತ್ತಾಯಿಸಿ ಮಳೆಯಲ್ಲೇ ರೈತರ ಧರಣಿ
- ಸಿಂಗಟಾಲೂರು ಏತ ನೀರಾವರಿ ಯೋಜನೆ ಹಿನ್ನೀರಿಗೆ ಭೂಮಿ ಕಳೆದುಕೊಂಡ ರೈತರ ಪ್ರತಿಭಟನೆ
ಹೂವಿನಹಡಗಲಿ (ಸೆ.16) : ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿಗೆ ಹಾಗೂ ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಸೋಮವಾರ ಮೂರು ದಿನಗಳ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿತ್ತು.
Singatalur Lift Irrigation: ಎರಡು ದಶಕ ಕಳೆದರೂ ಸಿಗದ ಸೌಲಭ್ಯ
ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಕಚೇರಿಯ ಮುಂದೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಎಐಕೆಎಸ್ ಸಂಚಾಲಕ ಹಲಗಿ ಸುರೇಶ ಮಾತನಾಡಿ, ಕಳೆದ 2014ರಿಂದ ಸಿಂಗಟಾಲೂರು ಬ್ಯಾರೇಜ್‌ನಲ್ಲಿ ನೀರು ನಿಂತಿದೆ. ಇದರಿಂದ ಮಾಗಳ, ಹೊಸಹಳ್ಳಿ, ಅಂಗೂರು, ಕೋಟಿಹಾಳ್ ಗ್ರಾಮಗಳ ರೈತರ ನೂರಾರು ಎಕರೆ ಪ್ರದೇಶದಲ್ಲಿ ಹಿನ್ನೀರು ನುಗ್ಗುತ್ತಿದೆ. ಪ್ರತಿ ವರ್ಷ ಬೆಳೆ ನಷ್ಟವಾಗುತ್ತಿದೆ. ಆದರೆ, ಯೋಜನೆಯ ಅಧಿಕಾರಿಗಳು ಮತ್ತು ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಅಧಿಕಾರಿಗಳು ನಿರ್ಲಕ್ಷ್ಯದಿಂದ ರೈತರು ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ರೈತರು ಸಾಕಷ್ಟುಬಾರಿ ಸಂಬಂಧ ಪಟ್ಟಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪರಿಹಾರ ನೀಡುತ್ತಿಲ್ಲ. ಕಚೇರಿಗೆ ಅಲೆದು ಅಲೆದು ಸುಸ್ತಾಗಿದೆ. ಹೀಗಾಗಿ, ರೈತರ ಸಮಸ್ಯೆಯನ್ನು ಆಲಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೂರು ದಿನಗಳ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ ಮಾತನಾಡಿ, ಈ ಭಾಗದ ರೈತರ ಬದುಕನ್ನು ಹಸನು ಮಾಡಬೇಕಿದ್ದ ನೀರಾವರಿ ಯೋಜನೆ ಕಣ್ಣೀರು ತರಿಸುತ್ತಿದೆ. ಭೂಮಿ ಕಳೆದುಕೊಂಡು 15-20 ವರ್ಷ ಕಳೆದರೂ ಆ ಭೂಮಿ ಸ್ವಾಧೀನ ಮಾಡಿಕೊಳ್ಳದೆ ರೈತರ ಜಮೀನಿಗೆ ನೀರು ನುಗ್ಗಿಸುತ್ತಿದ್ದಾರೆ. ಜತೆಗೆ ಅವೈಜ್ಞಾನಿಕ ಕಾಲುವೆ ನಿರ್ಮಾಣದಿಂದ ರೈತರ ಜಮೀನುಗಳಿಗೆ ಇಂದಿಗೂ ಸರಿಯಾಗಿ ನೀರು ಹರಿಯುತ್ತಿಲ್ಲ. ಸಾಕಷ್ಟುಕಡೆಗಳಲ್ಲಿ ಕಾಲುವೆ ಒಡೆದರೂ ಇನ್ನೂ ದುರಸ್ತಿ ಮಾಡಿಲ್ಲ. ಜಮೀನಿಗೆ ನೀರುಣಿಸಬೇಕಾದ ನೀರು ಹಳ್ಳದ ಪಾಲಾಗುತ್ತಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಮತ್ತು ಸರ್ಕಾರ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಲೇಶ ಬೆನ್ನೂರು ಮಾತನಾಡಿ, ರೈತರು ತಮ್ಮ ಭೂಮಿ ಕಳೆದುಕೊಂಡು ಪ್ರತಿಭಟನೆ ಮೂಲಕ ಪರಿಹಾರ ಬೇಡುವಂತಹ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಆದ್ದರಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅಖಿಲ ಭಾರತ ಕಿಸಾನ್ ಸಭಾ, ರಾಜ್ಯ ಈರುಳ್ಳಿ ಬೆಳೆಗಾರರ ಸಂಘ, ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಜೆಡಿಎಸ್ ಮುಖಂಡ ಪುತ್ರೇಶ, ಕಿಸಾನ್ ಸಭಾದ ಮುಕುಂದಗೌಡ, ಬಸವರಾಜ ಸಂಶಿ, ಹೊಸಹಳ್ಳಿ ಶಿವಾನಂದಯ್ಯ, ಶಾಂತರಾಜ್ ಜೈನ್ ಸೇರಿದಂತೆ ಇತರರು ಮಾತನಾಡಿದರು.
ಸಿಂಗಟಾಲೂರು ಏತನೀರಾವರಿಗಾಗಿ ಶೀಘ್ರ ಬೃಹತ್ ಹೋರಾಟ
ಮಳೆ ಲೆಕ್ಕಿಸದ ಧರಣಿ ನಿರತರು:
ಸಿಂಗಟಾಲೂರು ಏತ ನೀರಾವರಿ ಕಚೇರಿ ಮುಂದೆ ರೈತರಿಗೆ ಪರಿಹಾರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೈತರು ಹಾಗೂ ಪ್ರತಿಭಟನಾನಿರತರು ಮಳೆ ಬಂದರೂ ಸ್ಥಳ ಬಿಟ್ಟು ಕದಲಿಲ್ಲ. ಇದಕ್ಕೂ ಮುನ್ನ ಪಟ್ಟಣದ ತೇರು ಹನುಮಪ್ಪ ದೇವಸ್ಥಾನದಿಂದ ಮುಖ್ಯ ರಸ್ತೆಯ ಮೂಲಕ, ಸಿಂಗಟಾಲೂರು ಕಚೇರಿ ವರೆಗೂ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.