ಹೊಳೆಆಲೂರ[ನ.3]: ಪ್ರವಾಹ ಬಂದು 3 ತಿಂಗಳೂ ಕಳೆದರೂ ಹೊಳೆಆಲೂರ ಹೋಬಳಿಯ ಗ್ರಾಮಗಳ ರಸ್ತೆ, ಪ್ರವಾಹ ಸಂದರ್ಭದಲ್ಲಿ ಹೇಗೆ ಕೆಟ್ಟು ಹೋಗಿದ್ದವೋ ಹಾಗೆ ಇವೆ. ಅಧಿಕಾರಿಗಳು ಪ್ರವಾಹ ಸಂದರ್ಭದಲ್ಲಿ ಬಂದು ಇಲ್ಲಿಗೆ ಮೂಲ ಸೌಲಭ್ಯ ಕೊಡುತ್ತೇವೆ ಎಂದು ಜನಪ್ರತಿನಿಧಿಗಳ ಮುಂದೆ ಹೇಳಿದ್ದೆ ಹೇಳಿದ್ದು. ಆದರೆ ಇಲ್ಲಿ ಯಾವ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ ಎಂಬುದಕ್ಕೆ ಈ ದಾರಿಯೇ ಸಾಕ್ಷಿ.

ಹೊಳೆಆಲೂರಿನಿಂದ ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್‌. ಬೇಲೆರಿ ಗ್ರಾಮಕ್ಕೆ ಮುಖ್ಯ ರಸ್ತೆ ಕೆಟ್ಟು ಹೋಗಿದ್ದು, ಅದನ್ನು ಸರಿಪಡಿಸಲು ಬಹಳ ದಿವಸ ಬೇಕಾಗುವುದು ಸರಿ. ಆದರೆ ಇಲ್ಲಿಯ ಹೊಳೆಹಡಗಲಿಯಿಂದ ಬೆನಹಾಳ ಮಾರ್ಗವಾಗಿ ಹೊಳೆಆಲೂರಿಗೆ, ರೋಣ, ಗದಗ ಮುಂತಾದ ಗ್ರಾಮಗಳಿಗೆ ಈ ಗ್ರಾಮಗಳ ಜನರು ಕಾಲ್ನಡಿಗೆಯ ಮೂಲಕ ಹೋಗುತ್ತಾರೆ. ಹಡಗಲಿ ಗ್ರಾಮದಿಂದ ಬೆನಹಾಳ ಹತ್ತಿರ ಬಸವಣ್ಣ ದೇವರ ಗುಡಿಯ ಹತ್ತಿರ ರಸ್ತೆ ಮೊಣಕಾಲುದ್ದ ತಗ್ಗು ಬಿದ್ದು ಸಂಪೂರ್ಣ ವಾಹನಗಳು, ಸಂಚರಿಸದಂತೆ, ಇಲ್ಲಿಯ ಜನರು ಹಾಗು ವಿದ್ಯಾರ್ಥಿಗಳು ನಡೆಯಲು ಬಾರದ ಸ್ಥಿತಿ ತಲುಪಿದೆ.

ದಿನಾಲೂ ಈ ರಸ್ತೆಯಲ್ಲಿ ವಾಹನಗಳು ಸಿಲುಕಿ ಪರದಾಡುವ ಕಷ್ಟ ನೋಡಲಾರದ ಸ್ಥಿತಿ ಇದೆ. ಆದರೂ ರಸ್ತೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ನೋಡದೆ ಸಂತ್ರಸ್ತರನ್ನು ಮರಮರ ಮರುಗಿಸುತ್ತಿದ್ದಾರೆ. ಇಲ್ಲಿಯ ಸ್ಥಿತಿ ಕಂಡು ಇಲ್ಲಿಯ ಜನಪ್ರತಿನಿಧಿಗಳು, ಪತ್ರಿಕೆಗಳು ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದನೆ ನೀಡುತ್ತಿಲ್ಲ. ಇವರಿಗೆ ಹೇಳೋರು ಯಾರು ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ರಸ್ತೆ ಕೆಟ್ಟರೂ ಒಂದು ಪುಟ್ಟಿಮಣ್ಣು ತಂದು ಸರಿಪಡಿಸುವಲ್ಲಿ ಯಾರು ಮುಂದಾಗುತ್ತಿಲ್ಲ.

ಬೇಗನೆ ರಸ್ತೆ ಸರಿಪಡಿಸಿ

ಬೆನಹಾಳದಿಂದ ಹೊಳೆಹಡಗಲಿ ಮುಂದಿನ ಗ್ರಾಮಗಳಿಗೆ ತೆರಳುವ ಜನರ ವಾಹನಗಳು ಇಲ್ಲಿ ಸಿಲುಕಿಕೊಂಡು ಮುಂದೆ ಸಾಗದೆ ವಾಹನದಲ್ಲಿದ್ದ ಸಾಮಗ್ರಿಗಳನ್ನು ನಾವು ನಮ್ಮ ವಾಹನದಲ್ಲಿ ಸುತ್ತುವರಿದು ತಲುಪಿಸಿ ಬಂದಿದ್ದೇವೆ, ಇವರ ಸಂಕಟ ನೋಡಲಾಗುತ್ತಿಲ್ಲ, ಬೇಗನೆ ಈ ರಸ್ತೆ ಸರಿಪಡಿಸಿ, ವಾಹನ ಮುಂದೆ ಹೋಗಲು ವ್ಯವಸ್ಥೆ ಮಾಡಿ ಎಂದು ಬೆನಹಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.