ಗದಗ [ನ.06]:  ಒಂದು ದಿನ ಹಿಂದೆಯಷ್ಟೇ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 2000ದಿಂದ 3000 ರು.ಗೆ ಖರೀದಿಯಾಗುತ್ತಿದ್ದ ಈರುಳ್ಳಿಯ ಬೆಲೆ ಏಕಾಏಕಿ 100ರಿಂದ 500 ರು.ಗೆ ಕುಸಿದಿದೆ. ಇದರಿಂದ ಕುಪಿತರಾದ ರೈತರು, ಈರುಳ್ಳಿ ಖರೀದಿದಾರರ (ದಲ್ಲಾಳಿ) ಅಂಗಡಿಗಳ ಕಿಟಕಿ, ಪೀಠೋಪಕರಣ ಮತ್ತಿತರ ವಸ್ತುಗಳನ್ನು ಪುಡಿಗುಟ್ಟಿದ ಘಟನೆ ಮಂಗಳವಾರ ಸಂಭವಿಸಿದೆ.

ಬಳಿಕ, ದಲ್ಲಾಳಿಗಳ ವಿರುದ್ಧ ಪ್ರತಿಭಟನೆ ಮುಂದುವರಿಸಿದ ರೈತರು ಗದಗ ನಗರದ ಹೃದಯ ಭಾಗದ ಜನರಲ್‌ ಕಾರ್ಯಪ್ಪ ವೃತ್ತದಲ್ಲಿ ಈರುಳ್ಳಿ ತುಂಬಿದ ಟ್ರ್ಯಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿ, ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರು. ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಶ್ರೀನಾಥ ಜೋಶಿ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾನಿರತ ರೈತರ ಮನವೊಲಿಸಲು ಸಾಕಷ್ಟುಪ್ರಯತ್ನಿಸಿದರು. ನಂತರ ಎಪಿಎಂಸಿ ಆವರಣದಲ್ಲೇ ಅಧಿಕಾರಿಗಳು-ಖರೀದಿದಾರರ ಸಭೆ ನಡೆಸಿದರು. ಈ ವೇಳೆ, ಬೆಂಗಳೂರು ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೂ ನಮ್ಮಲ್ಲಿ ಮಾತ್ರ ಯಾಕೆ ಭಾರೀ ಪ್ರಮಾಣದಲ್ಲಿ ದರ ಕುಸಿತವಾಗಿದೆ ಎಂದು ರೈತರು ಪ್ರಶ್ನಿಸಿದರು. ಆಗ ಮಧ್ಯಪ್ರವೇಶಿಸಿದ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಬೆಳಗ್ಗೆ ಆಗಿರುವ ಟೆಂಡರ್‌ ರದ್ದುಪಡಿಸಿ, ಮರು ಟೆಂಡರ್‌ ಮಾಡಲು ಸೂಚಿಸಿದರು. ಸುಮಾರು 700 ಟನ್‌ ಈರುಳ್ಳಿ ಒಂದೇ ದಿನ ಎಪಿಎಂಪಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ದಲ್ಲಾಳಿಗಳು ಬೆಲೆ ಇಳಿಸಿದ್ದಾರೆ ಎಂದು ಹೇಳಲಾಗಿದೆ.

ದಿಢೀರ್‌ ದರ ಕುಸಿತ:  ಸೋಮವಾರ ಇಲ್ಲಿಯ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್‌ಗೆ 2000ರಿಂದ 3 ಸಾವಿರ ರುಪಾಯಿವರೆಗೂ ಮಾರಾಟವಾಗಿದ್ದ ಈರುಳ್ಳಿ ಮಂಗಳವಾರ ಮಾರುಕಟ್ಟೆಪ್ರಾರಂಭವಾಗುತ್ತಿದ್ದಂತೆ ಕ್ವಿಂಟಲ್‌ಗೆ 100ದಿಂದ 500 ರು.ವರೆಗೆ ಮಾರಾಟವಾಯಿತು. ಇದಕ್ಕೆ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅಂಗಡಿಗಳಲ್ಲಿನ ಕೆಲಸಗಾರರು ಅನುಚಿತವಾಗಿ ವರ್ತಿಸಿದ್ದಲ್ಲದೆ, ನಮ್ಮ ಅಂಗಡಿಯಲ್ಲಿ ಇದೇ ರೇಟು, ಬೇಕಿದ್ದರೆ ಮಾರಾಟ ಮಾಡಿ ಇಲ್ಲಾಂದ್ರೆ ಬಿಡಿ, ನಾವೇನು ಬಾ ಎಂದು ಕರೆದಿದ್ದೇವಾ? ಎನ್ನುತ್ತಿದ್ದಂತೆ ರೈತರೆಲ್ಲ ಸೇರಿ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಾಗ ರೈತರೆಲ್ಲ ಸೇರಿ ಈರುಳ್ಳಿ ಅಂಗಡಿಗಳ ಮುಂದಿದ್ದ ಕುರ್ಚಿಗಳನ್ನು ಪುಡಿಪುಡಿ ಮಾಡಿದರು. ಕೆಲ ಅಂಗಡಿಗಳ ಕಿಟಕಿ ಗಾಜುಗಳಿಗೆ ತಾವೇ ತಂದಿದ್ದ ಈರುಳ್ಳಿ ಎಸೆದು ಪುಡಿ-ಪುಡಿ ಮಾಡಿದರು.

ಪ್ರತಿಭಟನೆ ಸ್ವರೂಪ: ರೈತರು ಆಕ್ರೋಶಗೊಂಡರೂ ಖರೀದಿದಾರರು ಮಾತ್ರ ಅದಕ್ಕೆ ಸೊಪ್ಪು ಹಾಕದಿದ್ದಾಗ ಪಕ್ಕದಲ್ಲೇ ಇರುವ ಜನರಲ್‌ ಕಾರ್ಯಪ್ಪ ವೃತ್ತಕ್ಕೆ ತೆರಳಿ, ಈರುಳ್ಳಿ ತುಂಬಿದ್ದ ಟ್ರ್ಯಾಕರ್‌ಗಳನ್ನೇ ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಹೆದ್ದಾರಿ ತಡೆ ನಡೆಸಿದರು. ಇದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡುವಂತಾಯಿತು.