ಗದಗ[ನ.12]: ಇದೊಂದು ಕೆಡಿಪಿಯೇ? ಜಿಲ್ಲಾಧಿಕಾರಿಗಳೇ ಏನ್ರೀ ಇದೆಲ್ಲಾ? ಒಬ್ಬ ಅಧಿಕಾರಿಗೂ ತಮ್ಮ ಇಲಾಖೆ ಬಗ್ಗೆ ಮಾಹಿತಿನೇ ಇಲ್ವರ್ರಿ.. ಐ ಎಂ ಸಾರಿ.. ನಿಮ್ಮಂತಹ ಹಿರಿಯ ಅಧಿಕಾರಿಗಳಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಸಭೆಯಲ್ಲಿ ನೇರವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಸಿಇಒ ಡಾ. ಆನಂದ ಅವರನ್ನು ತರಾಟೆಗೆ ತೆಗೆದುಕೊಂಡ ಗಣಿ ಮತ್ತು ಭೂವಿಜ್ಞಾನ, ಅರಣ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

ಅವರು ಗದಗ ಜಿಪಂ ಸಭಾಂಗಣದಲ್ಲಿ ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯಲ್ಲಿ ಮಾತನಾಡಿದರು. ನಿಮಗೆ ಕಿರಿಯ ಅಧಿಕಾರಿಗಳ ಮೇಲೆ ಹಿಡಿತವಿಲ್ಲ, ಯಾವುದೇ ಅಧಿಕಾರಿಗಳನ್ನು ಮಾಹಿತಿ ಕೇಳಿದರೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅದಕ್ಕೆ ನೀವು ಕೂಡಾ ಮಧ್ಯಪ್ರವೇಶಿಸಿ ಮತ್ತಷ್ಟು ಗೊಂದಲ ಸೃಷ್ಟಿಸುತ್ತಿದ್ದೀರಿ, ಡಿಸಿ ಮತ್ತು ಸಿಇಒ ಅವರಿಗೆ ಅನುಭವದ ಕೊರತೆ ಕಾಡುತ್ತಿದೆ. ಹೀಗಾದರೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ ಹೇಳಿ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಒಂದು ವರ್ಷದ ನಂತರ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆಗೆ ಒಳಪಡುವ ಇಲಾಖೆಗಳ ಜಿಲ್ಲಾಮುಖ್ಯಸ್ಥರು ತಮ್ಮ ಇಲಾಖೆಗೆ ಕಾರ್ಯಚಟುವಟಿಕೆ ಕುರಿತು ಸಮಗ್ರ ಮಾಹಿತಿಯನ್ನು ಹೊಂದಿರದಿದ್ದರೆ ಸಭೆಯ ಉದ್ದೇಶವೇ ವಿಫಲವಾಗುತ್ತದೆ.ಆದುದರಿಂದ ಮುಂದಿನ ಪ್ರಗತಿ ಪರಿಶೀಲನಾ ಸಭೆಗೆ ನೀಡುವ ಮಾಹಿತಿ ಸದ್ಯದ ವಿಧಾನ ಬದಲಿಸಿ ವಾಸ್ತವಾಂಶಗಳನ್ನು ಆಧರಿಸಿ ಇಲಾಖೆಯ ಸಮಗ್ರ ಚಿತ್ರಣ ನೀಡುವಂತೆ ಮಾಹಿತಿ ಪುಸ್ತಕ ರೂಪಿಸಿ ಎಂದು ಸೂಚಿಸಿದರು.

ಈ ಹಿಂದೆ 20 ಅಂಶಗಳ ಹಾಗೂ ನಂತರದ ಐದಂಶಗಳು ಸೇರಿದ ಮಾಹಿತಿ ವಿಧಾನ ಈಗ ಅಪ್ರಸ್ತುತ. ಜನರಿಗೆ ಸೌಲಭ್ಯ, ಅನುಕೂಲ ಕಲ್ಪಿಸುವ ಲೋಕೋಪಯೋಗಿ, ಸಾರಿಗೆ ಇಲಾಖೆ, ಕಂದಾಯ ಮುಂತಾದ ಇಲಾಖೆಗಳು ಇದರಲ್ಲಿ ಒಳಗೊಳ್ಳಬೇಕು. ಈಗಾಗಲೇ (ಡಿಬಿಒಟಿ) ಬಹುಗ್ರಾಮ ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ನದಿ ನೀರು ಪೂರೈಕೆ ಈ ಹಿಂದೆಯೇ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. 20 ಬಹುಗ್ರಾಮ ಯೋಜನೆಗಳು ಇನ್ನು ಚಾಲ್ತಿಯಲ್ಲಿರುವುದು ಏನು ಎಂದು ಪ್ರಶ್ನಿಸಿದ ಸಚಿವ ಸಿ.ಸಿ. ಪಾಟೀಲ ಈ ಕುರಿತು ತಕ್ಷಣ ಪರಿಶೀಲನಾ ಸಭೆ ಜರುಗಿಸಿ ವರದಿ ನೀಡಲು ಜಿಪಂ ಸಿಇಒ ಅವರಿಗೆ ಸೂಚಿಸಿದರು. ಜಿಲ್ಲೆಯಲ್ಲಿನ ಶುದ್ಧ ನೀರಿನ ಘಟಕಗಳ ನಿರ್ವಹಣೆ ಕುರಿತು ಹಿಂದಿನ ಸಭೆಯಲ್ಲಿಯೇ ತಿಳಿಸಿದ್ದರೂ ದುರಸ್ತಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕ ಎಚ್.ಕೆ.ಪಾಟೀಲ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಘಟಕಗಳ ಕುರಿತು ನಿಗದಿತವಾಗಿ ಪರಿಶೀಲಿಸಿ ನಿರ್ವಹಣೆ ನಡೆಯಬೇಕು. ಇದು ಗದಗ ಕಲ್ಪನೆ, ರಾಜ್ಯಕ್ಕೆ ಮಾದರಿಯಾಗಿದೆ ಎಂದರು. 

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಈ ಘಟಕಗಳ ನಿರ್ವಹಣೆಯನ್ನು ಇಲಾಖೆ ಬದಲಾಗಿ ಅರ್ಹ ಏಜೆನ್ಸಿಗೆ ವಹಿಸುವುದು ಸೂಕ್ತ ಎಂದರು. ತೋಟಗಾರಿಕೆ ಇಲಾಖೆ ಪಾಲಿ ಹೌಸ್ ನೀಡಿಕೆಯಲ್ಲಿ ತಾರತಮ್ಯ ಕುರಿತು ಹಿಂದಿನ ಕೆಡಿಪಿಯಲ್ಲಿಯೇ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರೂ ಅಧಿಕಾರಿಗಳುಈ ಬಗ್ಗೆ ಗಮನ ನೀಡುತ್ತಿಲ್ಲ. ಜನಪ್ರತಿನಿಧಿಗಳು ಎತ್ತಿರುವ ಸಮಸ್ಯೆಗೆ ಸೂಕ್ತ ಕ್ರಮ ಜರುಗಿಸಿ ಅದರ ಮಾಹಿತಿ ನೀಡದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅರಣ್ಯ ಇಲಾಖೆಯಲ್ಲಿನ ಜಮೀನು ವಿಷಯವಾಗಿ ದಾಖಲಾಗಿರುವ 676 ಪ್ರಕರಣಗಳ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಕೃಷಿ ಇಲಾಖೆಯ ಪರಿಶೀಲನೆ ಸಂದರ್ಭದಲ್ಲಿ ನೆರೆ ಹಾಗೂ ಮಳೆ ಹಾನಿ ಪ್ರದೇಶದಲ್ಲಿ ಭೂಮಿ ಇರುವ ಎಲ್ಲ ರೈತ ಕುಟುಂಬಗಳಿಗೆ ತಾಡಪತ್ರೆ ವಿತರಣೆಗೆ ಸೂಚಿಸಿದ ಸಚಿವರು ಕೃಷಿ ಹೊಂಡ ನಿರ್ಮಾಣ ಕುರಿತಂತೆ ರೈತರಿಗೆ ಬರಬೇಕಿರುವ ಬಾಕಿ ಹಣದ ಕುರಿತು ಕೃಷಿ ಜಂಟಿ ನಿರ್ದೇಶಕ ರುದ್ರೇಶ ಸಭೆಗೆ ಮಾಹಿತಿ ನೀಡಿದರು.

ಪಾಲಿ ಹೌಸ್ ಜಾಗೃತಿ ಮೂಡಲಿ...

ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಎಲ್ಲ ಪಾಲಿಹೌಸ್‌ಗಳ ಕುರಿತು ಮೂರನೇ ವ್ಯಕ್ತಿಗಳಿಂದ ಪರಿಶೀಲನೆ ನಡೆಸಬೇಕು ಹಾಗೂ ಅರ್ಹ ರೈತರಿಗೆ ಪಾಲಿಹೌಸ್‌ ಅನುಕೂಲ ಕುರಿತು ಜಾಗೃತಿ ಶಿಬಿರಗಳನ್ನು ಜಿಲ್ಲಾ ಪಂಚಾಯಿತಿಯಿಂದ ವಿಶೇಷ ಆದ್ಯತೆ ಮೇರೆಗೆ ನಡೆಸಬೇಕು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದಾಗ ರೋಣ ಶಾಸಕ ಕಳಕಪ್ಪ ಬಂಡಿ ಎಲ್ಲ ಪಾಲಿಹೌಸ್‌ಗಳು ಬೋಗಸ್. ರೈತರನ್ನು ಸಾಲಗಾರರನ್ನಾಗಿ ಮಾಡಲು ಇರುವ ಯೋಜನೆ ಇದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಶಾಸಕ ರಾಮಣ್ಣ ಲಮಾಣಿ, ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಎಸ್‌ಪಿ ಶ್ರೀನಾಥ ಜೋಶಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಜರಿದ್ದರು. 

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಗದಗ ಜಿಲ್ಲೆ ಮೊದಲ 10 ಸ್ಥಾನಗಳನ್ನು ಪಡೆಯುವಂತೆ ಮಾಡಲು ವಿಶೇಷ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಅವರಿಗೆ ಸೂಚನೆ ನೀಡಿದ ಗದಗ ಶಾಸಕ ಎಚ್.ಕೆ. ಪಾಟೀಲ ಇದಕ್ಕಾಗಿ ವಿಷಯ ತಜ್ಞರ ತಂಡವನ್ನು ಜಿಲ್ಲೆಗೆ ಕೆರೆಯಿಸಿ ಮುಂದಿನ 5 ವರ್ಷಗಳನ್ನು ಗುರಿಯಾಗಿಟ್ಟುಕೊಂಡು ಯೋಜನೆ ರೂಪಿಸಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು, ಇದರ ಸಂಪೂರ್ಣ ಜವಾಬ್ದಾರಿಯನ್ನು ಜಿಪಂ ಸಿಇಒ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ವಹಿಸಿಕೊಳ್ಳಬೇಕು ಎಂದು ಆದೇಶಿಸಿದರು.

ಕಲಿಕಾ ಮಟ್ಟ ಸುಧಾರಣೆಗೆ ಗಮನಹರಿಸಿ

ಸಭೆಯಲ್ಲಿ ಶಾಲೆಯಿಂದ ಹೊರಗುಳಿದ ಮತ್ತು ಕಡಿಮೆ ಕಲಿಕಾ ಮಟ್ಟವನ್ನು ಹೊಂದಿರುವ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಡಿಡಿಪಿಐ ಅವರಿಗೆ ವಿಶೇಷ ಗಮನ ನೀಡುವಂತೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿ ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಅಂಗನವಾಡಿ ಹಾಗೂ ಶಾಲೆಗಳಿಗೆಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಂಪೌಂಡ್‌ ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿದರು.

ಪ್ರಸ್ತಾವನೆ ಸಲ್ಲಿಸಲು ತೀರ್ಮಾನ

ಜಿಲ್ಲೆಯಲ್ಲಿ ಪ್ರವಾಹ ಮತ್ತು ಅತಿಯಾದ ಮಳೆಯಿಂದಾಗಿ ಜಾನುವಾರುಗಳು ಮತ್ತು ಪ್ರಾಣಿಗಳಿಗೆ ತೀವ್ರ ಕಾಯಿಲೆ ಸಮಸ್ಯೆ ಕಾಡುತ್ತಿದೆ. ಆದರೆ ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎನ್ನುವ ವಿಷಯ ಸಭೆಯಲ್ಲಿ ಚರ್ಚಿತವಾಗುತ್ತಿದ್ದಂತೆ  ಖಾಲಿ ಇರುವ ಹುದ್ದೆ ತುಂಬಲು ಹೊರಗುತ್ತಿಗೆಯ ಮೇಲೆ ಕ್ರಮ ಜರುಗಿಸಲು ಅವಕಾಶ ನೀಡುವಂತೆ ಸಭೆಯಲ್ಲಿ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಈ ಎಲ್ಲ ಮಾಹಿತಿ ನೀಡಿ!

ಸದ್ಯ ಕೆಡಿಪಿ ಸಭೆಗೆ ಮಾಹಿತಿ ನೀಡುತ್ತಿರುವ ಈಗಿರುವ ವಿಧಾನದಲ್ಲಿ ಮಾಹಿತಿ ನೀಡುವುದು ಬೇಡ, ಇಲಾಖೆಗಳ ಮಾಹಿತಿ ನೀಡುವ ಸಂದರ್ಭದಲ್ಲಿ ವಿವರವಾಗಿ ತಿಳಿಯುವಂತೆ ಆಗಿರುವ ಪ್ರಗತಿಯ ವಾಸ್ತವ ಸ್ಥಿತಿ ಇರಲಿ, ಕೇವಲ ಕಾಟಾಚಾರಕ್ಕೆ ಮಾಹಿತಿ ನೀಡುವುದು ಬೇಡ, ಮುಂದಿನ ಸಭೆಯಲ್ಲಿ ಗ್ರಾಮವಿಕಾಸ ಯೋಜನೆ ಸೇರಿದಂತೆ ಬಿಟ್ಟು ಹೋಗಿರುವ ಎಲ್ಲ ಇಲಾಖೆಗಳ ಸಮಗ್ರ ಮಾಹಿತಿ ಇರಬೇಕು. ಅದನ್ನು ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಪಾಲಿಸಬೇಕು, ಸೋಮವಾರದ ನಡೆದ ತ್ರೈಮಾಸಿಕ ಕೆಡಿಪಿ ಸಭೆಯನ್ನು 10 ದಿನಗಳ ಕಾಲ ಮುಂದೂಡಲಾಗಿದೆ. ಅಂದಿನ ಸಭೆಯಲ್ಲಿ ಪ್ರತಿಯೊಬ್ಬರೂ ಸರಿಯಾದ ಮಾಹಿತಿಯೊಂದಿಗೆ ಹಾಜರಿರಲು ಸಚಿವರು ಸೂಚನೆ ನೀಡಿದರು.

ಪ್ರಗತಿ ಪರಿಶೀಲನಾ ಸಭೆ ವಿಶೇಷತೆಗಳು 

* ಜಿಲ್ಲೆಯಲ್ಲಿ ಯಾವ ಜನಪ್ರತಿನಿಧಿಗಳಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ ಇಲ್ಲ, ಓರ್ವ ಶಾಸಕರು, ಜಿಪಂ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಕರೆ ಮಾಡಿದರೆ ಯಾರು ಮಾತನಾಡುವುದು ಎನ್ನುತ್ತಾರೆ. ಏನಿದರ ಅರ್ಥ ಜಿಲ್ಲಾಧಿಕಾರಿಗಳೇ ಇದರ ಬಗ್ಗೆ ಗಮನ ಕೊಡಿ ಎಂದು ಎಲ್ಲ ಅಧಿಕಾರಿಗಳಿಗೆ ಸಚಿವ ಪಾಟೀಲ ಎಚ್ಚರಿಕೆ ನೀಡಿದರು.

* ಜಿಲ್ಲೆಯಲ್ಲಿ ಕೆಲ ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ನಿಟ್ಟಿನಲ್ಲಿ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ, ಈ ಬಗ್ಗೆ ಕೇಳಿದರೆ ಅಧಿಕಾರಿಗಳಿಗೆ ಅದರ ಬಗ್ಗೆ ಮಾಹಿತಿಯೇ ಇಲ್ಲ ಈ ಕುರಿತು ಅಧಿಕಾರಿಗಳಿಗೆ ನೀವು ತಿಳವಳಿಕೆ ನೀಡಿ ಎಂದು ಜಿಲ್ಲಾಧಿಕಾರಿಗೆ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು.

* ಜಿಲ್ಲೆಯಲ್ಲಿ ಮಕ್ಕಳ ಶಿಕ್ಷಣ ವ್ಯವಸ್ಥೆ ಸುಧಾರಣೆಯ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿ ಜಿಲ್ಲೆಯ ರೋಣ ತಾಲೂಕು ಅತ್ಯಂತ ಹಿಂದಿದೆ ಎನ್ನುವ ವಿಷಯ ಚರ್ಚೆಗೆ ಬರುತ್ತಿದ್ದಾಗ ರೋಣ ಶಾಸಕ ಕಳಕಪ್ಪ ಬಂಡಿ ಅವರನ್ನು ಕಾಲೆಳೆದ ಶಾಸಕ ಎಚ್.ಕೆ. ಪಾಟೀಲ ನೋಡ್ರಿ ನಿಮ್ಮ ತಾಲೂಕು ಎಂದು ಪದೇ ಪದೇ ಹೇಳಿದ್ದು ವಿಶೇಷವಾಗಿತ್ತು

* ಸಭೆ ಪೂರ್ವದಲ್ಲಿ ನಾಡಗೀತೆ ಚಾಲು ಇದ್ದ ಸಂದರ್ಭದಲ್ಲಿ ಹಾಜರಿದ್ದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಟೇಬಲ್ ಮೇಲಿದ್ದ ಪುಸ್ತಕವನ್ನು ಓದುವ ಮೂಲಕ ನಾಡಗೀತೆಗೆ ಅವಮಾನ ಮಾಡಿದ ಘಟನೆಯೂ ನಡೆಯಿತು.

ಸಭೆಯಲ್ಲಿ ಮೊಬೈಲ್ ಬಳಕೆ: ಆಕ್ರೋಶಗೊಂಡ ಸಚಿವ ಪಾಟೀಲ

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆಯುತ್ತಿದ್ದ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆ ಪ್ರಾರಂಭದಲ್ಲಿಯೇ ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ಮೊಬೈಲ್‌ ಕಡ್ಡಾಯವಾಗಿ ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರೂ ಅದನ್ನು ಪಾಲನೆ ಮಾಡದೇ ಸಚಿವ ಸಿ.ಸಿ. ಪಾಟೀಲರ ಆಕ್ರೋಶಕ್ಕೆ ತುತ್ತಾದ ಘಟನೆ ನಡೆಯಿತು. 

ಸಭೆಯಲ್ಲಿ ಪಾಲ್ಗೊಂಡಿದ್ದ ಶಿರಹಟ್ಟಿ ತಾಲೂಕು ಪಿಆರ್‌ಇಡಿ ಇಲಾಖೆ ಎಇಇ ನಾಗರತ್ನಾ ಸಚಿವರ ಸೂಚನೆಯನ್ನು ಉಲ್ಲಂಘಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಂತೆ ಆಕ್ರೋಶಗೊಂಡ ಸಚಿವ ಪಾಟೀಲ, ಮೊದಲೇ ಮೊಬೈಲ್ ಬಳಸಬೇಡಿ ಅಂದ್ರೂ ಮಾತಾಡ್ತೀಯೇ ನಮ್ಮ.. ನಿಮಗೆಲ್ಲಾ ಸಭೆಯ ಗಂಭೀರತೆಯೇ ಗೊತ್ತಿಲ್ಲವೇ ಸಭೆಯಿಂದ ಹೊರನಡಿಯಿರಿ ಎಂದು ಸೂಚಿಸಿದರು.

ನಂತರ ಮಧ್ಯಪ್ರವೇಶಿಸಿದ ಗದಗ ಶಾಸಕ ಎಚ್.ಕೆ. ಪಾಟೀಲ, ನೋಡ್ರೀ ನೀವೆಲ್ಲಾ ಜವಾಬ್ದಾರಿ ಸ್ಥಾನದಲ್ಲಿ ಇರುವವರು, ಈ ರೀತಿ ಮಾಡಿದರೆ ಹೇಗೆ? ನೀವು ಮಹಿಳಾ ಸಿಬ್ಬಂದಿ ಎನ್ನೋದಕ್ಕೇ ಸುಮ್ಮನಿದ್ದೇವೆ ಕುಳಿತುಕೊಳ್ಳಿ ಎಂದು ಎಚ್ಚರಿಕೆ ನೀಡಿದರು. ಇದು ಇನ್ನುಳಿದವರಿಗೂ ಪಾಠವಾಗಬೇಕು ಎಂದು ಸಚಿವರ ಮಾತಿಗೆ ಧ್ವನಿಗೂಡಿಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.