ಗಜೇಂದ್ರಗಡ(ಅ.27): ಪಟ್ಟಣದ ಜೋಡು ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಪೊಲೀಸ್‌ ಅಧಿಕಾರಿಗಳು ರಸ್ತೆಯ ಇನ್ನೊಂದು ಬದಿ ಸ್ಥಳಾಂತರಿಸಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ಪಿಎಸ್‌ಐ ಗುರುಶಾಂತ ದಾಶ್ಯಾಳ ಹಾಗೂ ಸಿಬ್ಬಂದಿ ಮುಂದೆ ಹೋಗುತ್ತಿದ್ದಂತೆ ಮತ್ತೆ ಬೀದಿ ಬದಿ ವ್ಯಾಪಾರಸ್ಥರು ರಸ್ತೆಯಲ್ಲಿ ವ್ಯಾಪಾರ ಮುಂದುವರೆಸಿದ್ದು, ವಾಹನ ಸಂಚಾರ ಮತ್ತಷ್ಟು ದುಸ್ತರವಾಗಿದೆ.

ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ಇಲ್ಲದ ಪರಿಣಾಮ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಜೋಡು ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಹಾಗೂ ತರಕಾರಿ ಮಾರಾಟಗಾರರು ಪ್ರತಿ ಮಂಗಳವಾರ ಜೋಡು ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಪರಿಣಾಮ ಒಂದು ರಸ್ತೆಯು ಸಂಪೂರ್ಣವಾಗಿ ಮಾರಾಟಗಾರರಿಂದ ಆಕ್ರಮಣವಾದರೆ ಇನ್ನೊಂದು ಬದಿ ರಸ್ತೆಯಲ್ಲಿ ವ್ಯಾಪಾರಕ್ಕಾಗಿ ಬರುವ ಜನರ ವಾಹನ ನಿಲುಗಡೆ ಹಾಗೂ ಜನದಟ್ಟಣೆಯಿಂದ ಈ ಮಾರ್ಗದಲ್ಲಿ ವಾಹನ ಚಲಾಯಿಸುವುದು ಹಾಗೂ ಸಾರ್ವಜನಿಕರ ಸಂಚರಿಸುವುದು ಒಂದು ದೊಡ್ಡ ಸಾಹಸವಾಗಿದೆ. ಹೀಗಾಗಿ ತರಕಾರಿ ಮಾರುಕಟ್ಟೆಸಮಸ್ಯೆಗೆ ಮುಕ್ತಿ ಯಾವಾಗ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲದಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬೆಳಗ್ಗೆಯಿಂದಲೇ ಸ್ವಲ್ಪಮಟ್ಟಿಗೆ ಚುರುಕುಗೊಂಡಿತ್ತು. ಹೀಗಾಗಿ ಜೋಡು ರಸ್ತೆಯಲ್ಲಿ ತರಕಾರಿ, ಹೂ, ಹಣ್ಣು ಹಾಗೂ ಅಲಂಕಾರಿಕ ಸೇರಿ ಇತರ ಸಣ್ಣಪುಟ್ಟ ವ್ಯಾಪಾರಸ್ಥರು ವ್ಯಾಪಾರ ವಹಿವಾಟಿಗೆ ಮುಂದಾಗಿದ್ದರು. ಪರಿಣಾಮ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಬೀದಿ ಬದಿ ವ್ಯಾಪಾರಸ್ಥರಿಗೆ ಮಂಗಳವಾರ ಮಾತ್ರ ರಸ್ತೆಯ ಒಂದು ಬದಿಯಲ್ಲಿ ಮಾತ್ರ ವ್ಯಾಪಾರ ಮಾಡುವಂತೆ ಎಚ್ಚರಿಕೆ ನೀಡಿ ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರಿಸಿದ್ದರು. ಆದರೆ ಪಿಎಸ್‌ಐ ಹಾಗೂ ಸಿಬ್ಬಂದಿ ಮುಂದೆ ಹೋಗುತ್ತಲ್ಲೆ ಮತ್ತೆ ವ್ಯಾಪಾರಸ್ಥರು ಸಂಪೂರ್ಣವಾಗಿ ರಸ್ತೆಯ ಮಧ್ಯದಲ್ಲಿ ಬಂದಿದ್ದರಿಂದ ಸುಗಮ ಸಂಚಾರಕ್ಕೆ ಕಲ್ಪಿಸಿದ್ದ ವ್ಯವಸ್ಥೆ ಹಳ್ಳಹಿಡಿಯಿತು.

ಸೂಕ್ತ ಮಾರುಕಟ್ಟೆ ಇಲ್ಲ

ಹಲವಾರು ವರ್ಷಗಳಿಂದ ಬೀದಿ ಬದಿ ಹಾಗೂ ತರಕಾರಿ ವ್ಯಾಪಾರಸ್ಥರಿಗೆ ಸೂಕ್ತ ಮಾರುಕಟ್ಟೆ ಇಲ್ಲದ್ದರಿಂದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟವನ್ನು ಪ್ರತಿದಿನ ಎದುರಿಸುತ್ತಿದ್ದಾರೆ. ಹೀಗಾಗಿ ಪುರಸಭೆ ಹಾಗೂ ಪೊಲೀಸ್‌ ಅಧಿಕಾರಿಗಳು ಪಟ್ಟಣದಲ್ಲಿ ಮಾರುಕಟ್ಟೆ ನಿರ್ಮಾಣ ಆಗುವವರೆಗೆ ಈ ಹಿಂದೆ ಪಟ್ಟಣದಲ್ಲಿ ಪಿಎಸ್‌ಐ ಹನಮಂತ ನಡಗಡ್ಡಿ ಕೈಗೊಂಡಿದ್ದ ಅಥವಾ ವೈಜ್ಞಾನಿಕ ಮಾದರಿಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಮುಂದಾದರೆ ಸಮಸ್ಯೆಗೆ ಪರಿಹಾರ ಸಿಗುವುದರ ಜೊತೆಗೆ ಸುಗಮ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎನ್ನುವುದು ನಾಗರಿಕರ ಅಭಿಪ್ರಾಯವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನ ನೀಡುವ ಮೂಲಕ ಜೋಡು ರಸ್ತೆಯಲ್ಲಿ ಸಂಚಾರ ಹಾಗೂ ಮಾರುಕಟ್ಟೆಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.