ಕ್ರಿಕೆಟ್ ಆಗಿರಲಿ, ಫುಟ್ಬಾಲ್ ಆಗಿರಲಿ ಅಥವಾ ಅಥ್ಲೆಟಿಕ್ಸ್ ಆಗಿರಲಿ, ಈ ಕ್ರೀಡೆಗಳಲ್ಲಿ ಪುರುಷ ಆಟಗಾರರು ಸಹ ಆಡುವಾಗ ಸ್ಪೋರ್ಟ್ಸ್ ಬ್ರಾ ಧರಿಸುತ್ತಾರೆ. ಇದು ವಿಚಿತ್ರ ಎನಿಸಬಹುದು. ಆದರೆ ಇದನ್ನು ಯಾಕೆ ಧರಿಸುತ್ತಾರೆ? ಇದು ನಿಜವಾಗಿಯೂ ಸ್ಪೋರ್ಟ್ಸ್ ಬ್ರಾನ ಅಥವಾ ಅದರ ಹಿಂದೆ ವಿಜ್ಞಾನ ಇದೆಯೇ ತಿಳಿಯಿರಿ.
ಆಟಗಾರರು ಸ್ಪೋರ್ಟ್ಸ್ ಬ್ರಾ ಧರಿಸೋದು ಯಾಕೆ?
ಮೈದಾನದಲ್ಲಿ, ಕ್ರೀಡಾಪಟುಗಳು ವಿಶೇಷ ಎದೆಯ ಉಡುಪು ಧರಿಸಿ ತರಬೇತಿ ಪಡೆಯುವುದನ್ನು ಹೆಚ್ಚಾಗಿ ಕಾಣಬಹುದು. ಇದು ಸ್ವಲ್ಪಮಟ್ಟಿಗೆ ಸ್ಪೋರ್ಟ್ಸ್ ಬ್ರಾದಂತೆ ಕಾಣುತ್ತದೆ. ಮುಖ್ಯವಾಗಿ ಕ್ರಿಕೆಟ್‌ನಲ್ಲಿ, ಫುಟ್‌ಬಾಲ್ ಆಟಗಾರರು ಮತ್ತು ವೇಗದ ಬೌಲರ್‌ಗಳು ಮತ್ತು ಅಥ್ಲೇಟ್ ಗಳು ಇದನ್ನು ಧರಿಸುತ್ತಾರೆ. ಯಾಕೆ ಪುರುಷರು ಈ ರೀತಿಯ ಸ್ಪೋರ್ಟ್ಸ್ ಬ್ರಾ ಧರಿಸುತ್ತಾರೆ? ಮತ್ತು ಅದರ ಹಿಂದಿನ ವಿಜ್ಞಾನವೇನು ಎನ್ನುವ ಮಾಹಿತಿ ಇಲ್ಲಿದೆ.
ಇಂದಿನ ಕ್ರೀಡೆಗಳು ಕೇವಲ ಮೈದಾನಕ್ಕೆ ಸೀಮಿತವಾಗಿಲ್ಲ. ಆಟಗಾರರು ಮೈದಾನದಲ್ಲಿ ಆಡುವಾಗ, ತರಬೇತುದಾರರು ಹೊರಗೆ ಕುಳಿತು ಪ್ರತಿ ಸೆಕೆಂಡ್ ಅವರನ್ನು ವಿಶ್ಲೇಷಿಸುತ್ತಾರೆ. ಅವರ ಕಾರ್ಯಕ್ಷಮತೆ ಕುಸಿಯದಂತೆ ಅವರು ಅವರ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಾರೆ. ಅದಕ್ಕಾಗಿಯೇ, ಕ್ರೀಡಾ ವಿಜ್ಞಾನದ ಸಹಾಯದಿಂದ, ಆಟಗಾರರ ಸಾಮರ್ಥ್ಯಗಳನ್ನು ಹೆಚ್ಚಿಸಲು ವಿವಿಧ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಂತಹ ಒಂದು ಸಾಧನವೆಂದರೆ ಸ್ಪೋರ್ಟ್ಸ್ ಬ್ರಾ ಅಥವಾ ಚೆಸ್ಟ್ ವೆಸ್ಟ್.
ಆಟಗಾರರು ಸ್ಪೋರ್ಟ್ಸ್ ಬ್ರಾಗಳನ್ನು ಏಕೆ ಧರಿಸುತ್ತಾರೆ?
ಒಳ ಉಡುಪುಗಳಂತೆ ಕಾಣುವ ಚೆಸ್ಟ್ ವೆಸ್ಟ್ ಅಥವಾ ಸ್ಪೋರ್ಟ್ಸ್ ಬ್ರಾ ಹಿಂದೆ ಆಳವಾದ ಕ್ರೀಡಾ ವಿಜ್ಞಾನವಿದೆ. ಈ ಸ್ಪೋರ್ಟ್ಸ್ ಬ್ರಾಗಳು ಕ್ರೀಡಾಪಟುಗಳ ಪ್ರತಿಯೊಂದು ಚಲನವಲನದ ಡೇಟಾವನ್ನು ಸಂಗ್ರಹಿಸುವ ಸುಧಾರಿತ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹೊಂದಿವೆ. ಈ ತಂತ್ರಜ್ಞಾನವು ಕ್ರೀಡಾಪಟುಗಳು ಎಷ್ಟು ವೇಗವಾಗಿ ಓಡುತ್ತಾರೆ, ಎಷ್ಟು ವೇಗವಾಗಿ ತಿರುಗುತ್ತಾರೆ ಎನ್ನುವ ಬಗ್ಗೆ ಮಾಹಿತಿಯನ್ನು ಒದಗಿಸುವ ಎಕ್ಸೆಲೆರೋ ಮೀಟರ್ ಮತ್ತು ಗೈರೊಸ್ಕೋಪ್‌ಗಳಂತಹ ಮೈಕ್ರೋ-ಡೇಟಾ ಟ್ರ್ಯಾಕಿಂಗ್ ಸಾಧನಗಳನ್ನು ಒಳಗೊಂಡಿದೆ. ಈ ಸಾಧನವು ಆಟಗಾರರ ಕೆಲಸದ ಹೊರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಕ್ರಿಕೆಟ್ ಮತ್ತು ಫುಟ್‌ಬಾಲ್‌ಗಳಲ್ಲಿ ಗಾಯಗೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ, ಈ ಸಾಧನವು ಆಟಗಾರನು ಅತಿಯಾದ ತರಬೇತಿ ಪಡೆಯುತ್ತಿದ್ದಾನೆಯೇ ಅಥವಾ ಇದ್ದಕ್ಕಿದ್ದಂತೆ ಅತಿಯಾದ ಒತ್ತಡವನ್ನು ಅನುಭವಿಸುತ್ತಿದ್ದಾನೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಇದು ಅವರ ಗರಿಷ್ಠ ವೇಗ ಮತ್ತು ಹೆಚ್ಚಿನ ವೇಗದ ರನ್‌ಗಳ ಸಂಖ್ಯೆಯನ್ನು ಟ್ರ್ಯಾಕ್ ಮಾಡುತ್ತದೆ. ಈ ಡೇಟಾವನ್ನು ಬಳಸಿಕೊಂಡು, ತರಬೇತುದಾರರು ಯಾರಿಗೆ ವಿಶ್ರಾಂತಿ ಬೇಕು ಮತ್ತು ಯಾರಿಗೆ ಬೇಕಾಗಿಲ್ಲ ಎಂಬುದನ್ನು ನಿರ್ಧರಿಸಬಹುದು.
ಇದು ಚೇತರಿಕೆಗೂ ಸಹಾಯ ಮಾಡುತ್ತದೆ
ಇದು ಕ್ರೀಡಾಪಟುಗಳಿಗೆ ಡಿಜಿಟಲ್ ರಿಪೋರ್ಟ್ ಕಾರ್ಡ್‌ನಂತೆ ಕೆಲಸ ಮಾಡುತ್ತದೆ. ಇದು ಕೋಚ್ ಮತ್ತು ಟ್ರೈನರ್ ಗಳಿಗೆ ತಮ್ಮ ಆಟಗಾರರಲ್ಲಿ ಯಾರು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಒಬ್ಬ ಆಟಗಾರನು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರೆ, ದೈನಂದಿನ ಟ್ರ್ಯಾಕಿಂಗ್ ಅವರ ಫಿಟ್‌ನೆಸ್ ಮತ್ತು ಅವರ ಚೇತರಿಕೆ ಹೇಗೆ ಪ್ರಗತಿಯಲ್ಲಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಅದಕ್ಕಾಗಿಯೇ ಈ ರೀತಿಯ ಸ್ಪೋರ್ಟ್ಸ್ ಬ್ರಾ ತರಹದ ಒಳ ಉಡುಪುಗಳು ಆಧುನಿಕ ಕ್ರೀಡೆಗಳಲ್ಲಿ ಬಹಳ ಮುಖ್ಯವಾಗಿವೆ.


