ISL 2019: ಕೇರಳ FCಗೆ ಶಾಕ್ ನೀಡಲು ಬೆಂಗಳೂರು ರೆಡಿ!
ಅಂತಾರಾಷ್ಟ್ರೀಯ ಪಂದ್ಯಗಳ ಬ್ರೇಕ್ ಬಳಿಕ ಐಎಸ್ಎಲ್ ಫುಟ್ಬಾಲ್ ಮತ್ತೆ ಆರಂಭಗೊಳ್ಳುತ್ತಿದೆ. ತವರಿನಲ್ಲಿ ಕೇರಳ ವಿರುದ್ಧ ಹೋರಾಟಕ್ಕೆ ಬೆಂಗಳೂರು ಎಫ್‌ಸಿ ರೆಡಿಯಾಗಿದೆ. ಈಗಾಗಲೇ ಗೆಲುವಿನ ಲಯಕ್ಕೆ ಮರಳಿರುವ ಬೆಂಗಳೂರು, ವೆಸ್ಟ್ ಬ್ಲಾಕ್ ಬ್ಲೂಸ್ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್ ನೀಡುವ ಎಲ್ಲಾ ಸಾಧ್ಯತೆಗಳಿವೆ.
ಬೆಂಗಳೂರು(ನ.22): ಪ್ರಸಕ್ತ ಆವೃತ್ತಿ ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಸತತ ಡ್ರಾ ಮೂಲಕ ನಿರಾಸೆಗೊಂಡಿದ್ದ ಬೆಂಗಳೂರು ಎಫ್‌ಸಿ, ಚೆನ್ನೈಯನ್ ಎಫ್‌ಸಿ ವಿರುದ್ದ ಗೆಲುವು ಸಾಧಿಸಿತು. ಮೂಲಕ ತವರಿನಲ್ಲಿ ಮೊದಲ ಗೆಲುವು ಕಂಡಿತ್ತು. ಇದೀಗ , ಕೇರಳ ತಂಡಕ್ಕೆ ಶಾಕ್ ನೀಡಲು ಸಜ್ಜಾಗಿದೆ. ತವರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಗೆಲುವಿನ ಓಟ ಮುಂದುವರಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ.
ಇದನ್ನೂ ಓದಿ: ISL 2019: ತವರಿನಲ್ಲಿ ಗೆಲವಿನ ಖಾತೆ ತೆರೆದ ಬೆಂಗಳೂರು FC.
ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಬಿಡುವಿನ ನಂತರ ಇಂಡಿಯನ್ ಸೂಪರ್ ಲೀಗ್ ಮತ್ತೆ ಆರಂಭಗೊಳ್ಳುತ್ತಿದೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಕೇರಳ ಎಫ್ ಸಿ ತಂಡದಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ(ನ.23) ಮುಖಾಮುಖಿಯಾಗಲಿವೆ.
ದಕ್ಷಿಣ ಭಾರತದ ಬದ್ಧ ಎದುರಾಳಿಗಳಾದ ಬೆಂಗಳೂರು ಹಾಗೂ ಕೇರಳ ತಂಡಗಳು ತಮ್ಮ ಹೋರಾಟಕ್ಕೆ ಮತ್ತೊಮ್ಮೆ ಚಾಲನೆ ನೀಡಲಿವೆ. ಇದುವರೆಗೂ ಇತ್ತಂಡಗಳು ತಮ್ಮ ನೈಜ ಪ್ರದರ್ಶನ ತೋರುವಲ್ಲಿ ವಿಫಲವಾಗಿವೆ. ಹಾಲಿ ಚಾಂಪಿಯನ್ ಬೆಂಗಳೂರು ನಾಲ್ಕು ಪಂದ್ಯಗಳನ್ನಾಡಿ ಆರು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ, ನಾಲ್ಕು ಅಂಕಗಳನ್ನು ಗಳಿಸಿರುವ ಕೊಚ್ಚಿ ಮೂಲದ ತಂಡ ಏಳನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ISL 2019; ಜೆಮ್‌ಶೆಡ್‌ಪುರ ಮಣಿಸಿ ಅಗ್ರಸ್ಥಾನಕ್ಕೇರಿದ ATK
''ನಾವು ಋತುವಿನ ಸರಂಭದಿಂದಲೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮೊದಲ ಮೂರೂ ಪಂದ್ಯಗಳನ್ನು ನಾವು ಗೆಲ್ಲಬಹುದಾಗಿತ್ತು. ಕೇರಳದಲ್ಲಿ ಆಡಿದ ನೆನಪು ಹಸಿರಾಗಿಯೇ ಇದೆ. ಟಿಕೆಟ್ ಗಳು ಸಂಪೂರ್ಣ ಮಾರಾಟಗೊಂಡಿದೆ ಎಂದು ತಿಳಿದುಬಂದಿದೆ. ಇದು ಭಾರತದ ಫುಟ್ಬಾಲ್ ಗೆ ಉತ್ತಮವಾದುದು. ಕೇರಳ ಉತ್ತಮವಾದ ತಂಡ ಉತ್ತಮ ಹೋರಾಟದಿಂದ ಕೂಡಿದ ಪಂದ್ಯವನ್ನು ನಿರೀಕ್ಷಿಸಬಹುದು,'' ಎಂದು ಬೆಂಗಳೂರು ತಂಡದ ಕೋಚ್ ಕಾರ್ಲೆಸ್ ಕ್ವಾಡ್ರಟ್ಸ್ ಹೇಳಿದ್ದಾರೆ.
ಎರಿಕ್ ಪಾರ್ಥಲು ಮತ್ತು ರಫೆಲ್ ಅಗಸ್ಟೊ ಅವರು ಗಾಯದಿಂದ ಚೇತರಿಸಿಕೊಂಡು ಉತ್ತಮ ಪ್ರದರ್ಶನ ತೋರಿದ್ದು, ಬೆಂಗಳೂರು ತಂಡಕ್ಕೆ ಎಲ್ಲಿಲ್ಲದ ಶಕ್ತಿ ಬಂದಂತಾಗಿದೆ.
''ಕೇರಳದಿಂದ ಬಂದಿರುವ ಅನೇಕ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದು ಇತ್ತಂಡಗಳ ನಡುವಿನ ವೈರುತ್ವಕ್ಕೆ ಕಾರಣವಾಗಿದೆ. ಉತ್ತಮ ರೀತಿಯ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿದೆ. ನಾವು ಉತ್ತಮ ಪ್ರದರ್ಶನ ತೋರಿ ಈ ಅಭಿಮಾನಿಗಳು ಮತ್ತೆ ಮತ್ತೆ ಪಂದ್ಯ ನೋಡುವಂತಾಗಬೇಕು. ಅದೇ ನಮಗೆ ಮುಖ್ಯವಾದುದು,'' ಎಂದು ಬೆಂಗಳೂರು ತಂಡದ ಕೀ ಪ್ಲೇಯರ್ ಎರಿಕ್ ಪಾರ್ತುಲು ಹೇಳಿದ್ದಾರೆ.
ಕೇರಳದ ಅಭಿಮಾನಿಗಳ ಬೆಂಬಲವನ್ನೇ ಹೆಚ್ಚು ಅವಲಂಬಿಸಿರುವ ಎಲ್ಕೋ ಶೆಟ್ಟೋರಿ ಪಡೆ ಉತ್ತಮ ಬ್ಯಾಕ್ ಲೈನ್ ಪಡೆಯನ್ನು ಹೊಂದಿದೆ ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ಕೇರಳ ಬ್ಲಾಸ್ಟರ್ಸ್ ಸತತ ಮೂರು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿತ್ತು. ಮಾರಿಯೋ ಆರ್ಕ್ಯೂಸ್, ರಫೆಲ್ ಮೆಸ್ಸಿ ಬೌಲಿ ಮತ್ತು ಜೈರೋ ರೋಡ್ರಿಗಸ್ ಗಾಯಗೊಂಡಿದ್ದು ಅವರ ಅನುಭವ ತಂಡಕ್ಕೆ ನೆರವಾಗಲಿಲ್ಲ. '' ನಮ್ಮ ಕ್ಲಬ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವು ಉತ್ತಮ ರೀತಿಯಲ್ಲಿ ಜಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೆ ನಮ್ಮ ಎಲ್ಲ ಸೆಂಟರ್ ಬ್ಯಾಕ್ ಆಟಗಾರರು ಗಾಯಗೊಂಡಿದ್ದಾರೆ. ಮಿಡ್ ಫೀಲ್ಡ್ ಆಟಗಾರ ಮಾರಿಯೋ ಆರ್ಕ್ಯೂಸ್ ಕೂಡ ಗಾಯಗೊಂಡಿದ್ದಾರೆ. ನಾನು ಕೂಡ ವಾಸ್ತವಕ್ಕೆ ಹೆಚ್ಚು ಬೆಲೆ ನೀಡುವವ. ನಮ್ಮಲ್ಲಿ ಏನಿದೆಯೋ ಅದರಲ್ಲಿಯೇ ಹೋರಾಟ ಮಾಡುವೆವು,'' ಎಂದು ಶೆಟ್ಟೊರಿ ಹೇಳಿದ್ದಾರೆ.