ಗೋವಾ(ನ.26):  ಸರ್ಗಿಯೊ ಕ್ಯಾಸ್ಟಲ್ ಮಾರ್ಟಿನೆಜ್  17ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ  ಜೆಮ್‌ಶೆಡ್‌ಪುರ ಎಫ್ ಸಿ,  ಬಲಿಷ್ಠ ಎಫ್ ಸಿ ಗೋವಾ ವಿರುದ್ಧ  1-0 ಗೋಲಿನ ಅಂತರದಲ್ಲಿ ಜಯ ಗಳಿಸಿ ಅಚ್ಚರಿ  ಮೂಡಿಸಿದೆ.  ಈ ಜಯದಿಂದಾಗಿ  ಟಾಟಾ ಪಡೆ ಇಂಡಿಯನ್ ಸೂಪರ್ ಲೀಗ್ ಅಂಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. 

ಮೊದಲ ಸ್ಥಾನದ ಗುರಿ ಹೊಂದಿದ್ದ ಗೋವಾ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.  72ನೇ ನಿಮಿಷದ ನಂತರ ಜೆಮ್‌ಶೆಡ್‌ಪುರದ ಅಹಮದ್ ಜಹು  ರೆಡ್ ಕಾರ್ಡ್ ಪಡೆದು ಹೊರನಡೆದರು. ಆ ನಂತರವೂ ಗೋವಾ ಪಂದ್ಯದ ಮೇಲೆ ಪ್ರಭುತ್ವ ಸಾಧಿಸುವಲ್ಲಿ ವಿಫಲವಾಯಿತು.

ಇದನ್ನೂ ಓದಿ: ISL 2019: ಚೆನ್ನೈಯನ್ FCಗೆ ಸೂಪರ್ ಗೆಲುವು!

ಪ್ರಥಮಾರ್ಧದಲ್ಲಿ ಗೋವಾಕ್ಕೆ ಶಾಕ್!
17ನೇ ನಿಮಿಷದಲ್ಲಿ ಸರ್ಗಿಯೊ ಕ್ಯಾಸ್ಟಲ್ ಮಾರ್ಟಿನೇಜ್ ಗಳಿಸಿದ ಗೋಲಿನ ನೆರವಿನಿಂದ ಅಚ್ಚರಿಯ ಮುನ್ನಡೆ ಕಾಣುವುದರೊಂದಿಗೆ ಗೋವಾದ ಪ್ರೇಕ್ಷಕರು ಮೌನಕ್ಕೆ ಶರಣಾದರು. ಸಾಮಾನ್ಯವಾಗಿ ಗೋವಾ ತಂಡ ಆರಂಭದಲ್ಲಿ ಮುನ್ನಡೆ ಕಾಣುತ್ತದೆ ಎಂಬುದು ಸಾಮಾನ್ಯ ಫುಟ್ಬಾಲ್ ಪ್ರೇಕ್ಷಕನ ನಿರೀಕ್ಷೆಯಾಗಿರುತ್ತದೆ. ಆದರೆ   ಈ ಬಾರಿ ಟಾಟಾ ಪಡೆ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. 

ಇದನ್ನೂ ಓದಿ: ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!

ಋತುವಿನಲ್ಲಿ ಮೊದಲ ಬಾರಿಗೆ ಗೋಲ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದ ಸುಬ್ರತಾ ಪಾಲ್ ಪಂದ್ಯ ಆರಂಭಗೊಂಡ ಏಳನೇ ನಿಮಿಷದಲ್ಲಿ ಗೋವಾದ ಮುನ್ನಡೆಗೆ ತಡೆಯೊಡ್ಡಿದರು. ಜಾಕಿಚಾಂದ್ ಸಿಂಗ್ ಇಟ್ಟ ಗುರಿ ಪಾಲ್ ಅವರ ಕೈ ಸೇರಿತ್ತು. 43ನೇ ನಿಮಿಷದಲ್ಲೂ ಜಾಕಿಚಾಂದ್ ಸಿಂಗ್ ಗುರಿಗೆ ಸುಬ್ರತಾ ಪಾಲ್ ಅಡ್ಡಿಯಾದರು.

ಆರಂಭದಿಂದಲೂ ಗೋವಾ ತನ್ನ ನೈಜ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಗೋಲ್ ಬಾಕ್ಸ್ ಗೆ ಗುರಿ ಇಟ್ಟರೂ ಉತ್ತಮ ರೀತಿಯಲ್ಲಿ ಫಿನಿಷ್ ಮಾಡಲು ವಿಫಲವಾಯಿತು. ಕ್ಯಾಸ್ಟಲ್ ಗೋಲು ಗಳಿಸಿದ ಮೇಲೂ ಗೋವಾ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು. ಆದರೆ ಸುಬ್ರತಾ ಪಾಲ್  ಸೂಪರ್ ಮ್ಯಾನ್ ರೀತಿಯಲ್ಲಿ ತಂಡಕ್ಕೆ ನೆರವಾದರು.