ಕೋಲ್ಕತಾ(ಡಿ.24):  ಇಂಡಿಯನ್ ಸೂಪರ್ ಲೀಗ್ ನಲ್ಲಿ ಬುಧವಾರ ಎರಡು ಬಲಿಷ್ಠ ತಂಡಗಳ ನಡುವೆ ಕೋಲ್ಕೊತಾದಲ್ಲಿ ಹೋರಾಟ ನಡೆಯಲಿದೆ. ಮುಂಬೈ ಸಿಟಿ ಎಫ್ ಸಿ ವಿರುದ್ಧ ಸೋಲು ಅನುಭವಿಸಿದ ನಂತರ ಬೆಂಗಳೂರು FC ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಜಯ ಗಳಿಸಿ ಅಗ್ರ ಸ್ಥಾನಕ್ಕೇರಿತು. ಈಗ ಎಟಿಕೆ ವಿರುದ್ಧ ಜಯ ಗಳಿಸಿ ಮತ್ತೊಮ್ಮೆ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.

ISL 2019: ತವರಿನಲ್ಲಿ ಗೆದ್ದ ಗೋವಾ ಮೊದಲ ಸ್ಥಾನಕ್ಕೆ ಎಂಟ್ರಿ!

ನಿರಂತರ ಜಯ ಕಾಣುತ್ತಿದ್ದ ಎಟಿಕೆ ತಂಡ ಗೋವಾ ವಿರುದ್ಧ ಸೋತ ನಂತರ ಹೈದರಾಬಾದ್ ವಿರುದ್ಧ  ಡ್ರಾ ಮಾಡಿಕೊಂಡಿತ್ತು. ಇದರಿಂದಾಗಿ ತಂಡ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು, ಈಗ ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ಬಲಿಷ್ಠ ತಂಡಗಳ ನಡುವೆ ಹೋರಾಟ ನಡೆಯಲಿದೆ. ಸುನಿಲ್ ಛೆಟ್ರಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಂಡದ ಡಿಫೆನ್ಸ್ ವಿಭಾಗ ಮುಂಬೈ ಸಿಟಿ ವಿರುದ್ಧ ಸೊರಗಿದ್ದರೂ ನಂತರ ಚೇತರಿಸಿಕೊಂಡು ಜಯದ ಲಯಕ್ಕೆ ಮರಳಿತ್ತು. ಲೀಗ್ ಈಗ ಮಧ್ಯಂತರ ಹಂತ ಬಂದು ಸೇರಿದ್ದು ಈ ಪಂದ್ಯ ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಇದನ್ನೂ ಓದಿ: ರಿಯಲ್‌ ಮ್ಯಾಡ್ರಿಡ್‌ಗೆ ರೋಹಿತ್‌ ಶರ್ಮಾ ರಾಯಭಾರಿ!.

ಬಲಿಷ್ಠ ಬೆಂಗಳೂರು ವಿರುದ್ಧ ಅಂಟೋನಿಯೋ ಅಬ್ಬಾಸ್ ಪಡೆ ಮನೆಯಂಗಣದ ಪ್ರೇಕ್ಷಕರ ಸಂಪೂರ್ಣ ಬೆಂಬಲ ಪಡೆದು ಜಯ ಗಳಿಸುವ ಗುರಿ ಹೊಂದಿದೆ. ಈ ಋತುವಿನಲ್ಲಿ ಮನೆಯಂಗಣದಲ್ಲಿ ಸೋಲು ಕಾಣದ ಏಕೈಕ ತಂಡ ಎಂಬ ಹೆಗ್ಗಳಿಕೆಯನ್ನು ಎಟಿಕೆ ಸಧ್ಯಕ್ಕೆ ಕಾಯ್ದುಕೊಂಡಿದೆ, ಅಲ್ಲದೆ ಮನೆಯಂಗಣದಲ್ಲಿ ಅತಿ ಹೆಚ್ಚು ಗೋಲು (10) ಗಳಿಸಿದ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮನೆಯಂಗದಲ್ಲಿ ಉತ್ತಮ ಡಿಫೆನ್ಸ್ ದಾಖಲೆಯನ್ನೂ ಎಟಿಕೆ ಹೊಂದಿದೆ. ಕೇವಲ ಮೂರು ಗೋಲು ನೀಡುವ ಮೂಲಕ ತನ್ನ ಡಿಫೆನ್ಸ್ ವಿಭಾಗ ಯಾವ ರೀತಿಯಲ್ಲಿದೆ ಎಂಬುದನ್ನು ಇತರ ತಂಡಗಳಿಗೆ ತೋರಿಸಿದೆ. 

ಇದನ್ನೂ ಓದಿ: ISL 2019: ಚೆನ್ನೈನಲ್ಲಿ ಚೆನ್ನೈಯನ್ FCಗೆ ಗೆಲುವು!

ಇದಕ್ಕೆ ಸಂವಾದಿಯಾಗಿ ಕಾರ್ಲೆಸ್ ಕ್ವಾಡ್ರಟ್ ಪಡೆ ಹೊರಗಡೆ ನಡೆದ ಪಂದ್ಯಗಳಲ್ಲಿ ಇದುವರೆಗೂ ಸೋತಿರಲಿಲ್ಲ ಎಂಬುದು ವಿಶೇಷ. ''ನಾವು ಬೆಂಗಳೂರು ತಂಡವನ್ನು ಋತುವಿನ ಉತ್ತಮ ತಂಡವೆಂದು ಪರಿಗಣಿಸುತ್ತೇವೆ. ನಮ್ಮ ಪಾಲಿಗೆ ಇದು ಅತ್ಯಂತ ಪ್ರಮುಖ ಪಂದ್ಯ.ಕಳೆದ ಬಾರಿಯ ಚಾಂಪಿಯನ್ ವಿರುದ್ಧ ನಾವು ಉತ್ತಮ ರೀತಿಯಲ್ಲಿ ಆಡಬೇಕಾಗಿದೆ. ಇದು ನನಗೂ ನನ್ನ ಆಟಗಾರರಿಗೂ ಪ್ರಮುಖ ಪಂದ್ಯವಾಗಿದೆ,'' ಎಂದು ಹಬ್ಬಾಸ್ ಹೇಳಿದ್ದಾರೆ. 

ಇದುವರೆಗೂ ಎಂಟು ಗೋಲುಗಳನ್ನು ಗಳಿಸಿರುವ ರಾಯ್ ಕೃಷ್ಣ ಎಟಿಕೆ ತಂಡದ ಪ್ರಮುಖ ಅಸ್ತ್ರ ಎನಿಸಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಕೃಷ್ಣ ಅಂತಿಮ ಕ್ಷಣದಲ್ಲಿ ಗೋಲು ಗಳಿಸಿ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಡೇವಿಡ್ ವಿಲಿಯಮ್ಸ್,ಜಾವಿ ಹೆರ್ನಾಂಡೀಸ್, ಮಂಡಿ ಸೊಸಾ  ಹಾಗೂ ಎಡು ಗಾರ್ಸಿಯಾ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಎಟಿಕೆ ವಿರುದ್ಧ ಆಡಿರುವ ಎಲ್ಲ ಪಂದ್ಯಗಳಲ್ಲೂ ಬೆಂಗಳೂರು ಜಯ ಗಳಿಸಿರುವುದು ಗಮನಾರ್ಹ, ಈ ಪಂದ್ಯಗಳಲ್ಲಿ ಎಟಿಕೆ ಗಳಿಸಿದ್ದು ಕೇವಲ ಒಂದು ಗೋಲು. 

ಆಡಿರುವ ಒಂಬತ್ತು ಪಂದ್ಯಗಳಲ್ಲಿ ಬೆಂಗಳೂರು ಎದುರಾಳಿ ತಂಡಕ್ಕೆ ನೀಡಿದ್ದು ಕೇವಲ ಐದು ಗೋಲುಗಳು. ಇದು ತಂಡದ ಡಿಫೆನ್ಸ್ ವಿಭಾಗವನ್ನು ಪರಿಚಯಿಸುತ್ತದೆ. ಅಲ್ಲದೆ ಆರು ಕ್ಲೀನ್ ಶೀಟ್ ಸಾಧನೆ ಮಾಡಿದೆ. 

ಅಟ್ಟ್ಯಾಕ್ ವಿಭಾಗದಲ್ಲಿ ಬೆಂಗಳೂರು ಇನ್ನೂ ಸುಧಾರಣೆ ಕಂಡುಕೊಳ್ಳಬೇಕಾಗಿದೆ, ಇದುವರೆಗೂ ಹನ್ನೊಂದು ಗೋಲುಗಳನ್ನು ಗಳಿಸಿರುವದು ಬೆಂಗಳೂರಿನ ಸಾಮರ್ಥ್ಯಕ್ಕೆ ತಕ್ಕುದಾದುದಲ್ಲ. ಸುನಿಲ್ ಛೆಟ್ರಿ ಅವರನ್ನು ಹೊರತುಪಡಿಸಿದರೆ ಇತರ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ಗುರಿ ತಲುಪಿಲ್ಲ. 

16 ಅಂಕಗಳನ್ನು ಗಳಿಸಿರುವ ಬೆಂಗಳೂರು ಎಟಿಕೆ ವಿರುದ್ಧ ಜಯ ಗಳಿಸಿ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ. ''ಖಂಡಿತವಾಗಿಯೂ ನಾವು ಈ ಪಂದ್ಯಕ್ಕೆ ಯೋಜನೆ ಹಾಕಿಕೊಂಡಿದ್ದೇವೆ.ಅವರಲ್ಲಿ ಇಬ್ಬರು ಸಹಜ ಫಾರ್ವಾರ್ಡ್ ಆಟಗಾರರಿದ್ದಾರೆ (ಕೃಷ್ಣ ಮತ್ತು ವಿಲಿಯಮ್ಸ್),ಒಟ್ಟಿಗೆ ಆಡುತ್ತಿರುವ ಆಟರಗಾರರನ್ನು ಒಂದೇ ವಿಭಾಗದಲ್ಲಿ ಆಡಿಸುತ್ತಿರುವುದು ಎಟಿಕೆಯ ಜಾಣ್ಮೆ,'' ಎಂದು ಕ್ವಾಡ್ರಟ್ ಹೇಳಿದ್ದಾರೆ. .