ಮುಂಬೈ ಚಾಲೆಂಜ್ ಸ್ವೀಕರಿಸಲು ಬೆಂಗಳೂರು FC ರೆಡಿ!

ಇಂಡಿಯನ್‌ ಸೂಪರ್‌ ಲೀಗ್‌ 6ನೇ ಆವೃತ್ತಿಯಲ್ಲಿ ಸೋಲರಿಯದ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ, ಭಾನುವಾರ ತವರಿನ ಅಂಗಣವಾದ ಕಂಠೀರವ ಕ್ರೀಡಾಂಗಣದಲ್ಲಿ ಮುಂಬೈ ಸಿಟಿ ಎಫ್‌ಸಿ ಸವಾಲನ್ನು ಎದುರಿಸಲಿದೆ. 2019ರಲ್ಲಿ ಬಿಎಫ್‌ಸಿ ತನ್ನ ತವರಲ್ಲಿ ಆಡಲಿರುವ ಕೊನೆ ಪಂದ್ಯವಾಗಿದ್ದು, ಭರ್ಜರಿ ಜಯ ಸಾಧಿಸುವ ವಿಶ್ವಾಸದಲ್ಲಿದೆ.

ISL 2019 Bengaluru fc confident against mumbai city fc in Sree Kanteerava Stadium

ಬೆಂಗಳೂರು(ಡಿ14): ಭಾನುವಾರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೀಲಿ ಸೈನ್ಯಗಳ ಹೋರಾಟವೆನಿಸರುವ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ಹಾಗೂ ಮುಂಬೈ ಸಿಟಿ ಎಫ್ ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಖಾಮುಖಿ ಆಗಲಿವೆ. ತನ್ನ ಸಾಮರ್ಥ್ಯಕ್ಕೆ ಸಮನಲ್ಲದ ರೀತಿಯಲ್ಲಿ ಆರಂಭ ಕಂಡ ಬೆಂಗಳೂರು ಎಫ್ ಸಿ ಕೊನೆಗೂ ಜಯದ ಲಯ ಕಂಡುಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿದೆ. ಆಡಿರುವ ಏಳು ಪಂದ್ಯಗಳಲ್ಲಿ  13  ಅಂಕಗಳನ್ನು ಕಲೆಹಾಕಿದೆ. ಕಾರ್ಲೆಸ್ ಕ್ವಾಡ್ರಟ್ ಪಡೆ ಲೀಗ್ ನಲ್ಲಿ ಇದುವರೆಗೂ ಅಜೇಯವಾಗಿ ಸಾಗಿದ್ದು, ಉತ್ತಮ ರಕ್ಷಣಾ ವಿಭಾಗವನ್ನು ಹೊಂದಿದೆ.

ಇದನ್ನೂ ಓದಿ: ಪೌರತ್ವ ಮಸೂದೆ ಪ್ರತಿಭಟನೆ; ರಣಜಿ, ಐಎಸ್ಎಲ್ ಪಂದ್ಯ ರದ್ದು!

ಬೆಂಗಳೂರು ತಂಡ ಇದುವರೆಗೂ ಎದುರಾಳಿ ತಂಡಕ್ಕೆ ಕೇವಲ ಎರಡು ಗೋಲುಗಳನ್ನು ಗಳಿಸಲು ಮಾತ್ರ ಅವಕಾಶ ನೀಡಿದೆ. ಅದರಲ್ಲಿ ಒಂದು ಗೋಲು ಪೆನಾಲ್ಟಿಯಿಂದ ದಾಖಲಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡದ ವಿರುದ್ಧ ಗೋಲು ಗಳಿಸುವುದು ಮುಂಬೈ ಗೆ ಅಷ್ಟು ಸುಲಭವಲ್ಲ. ಬೆಂಗಳೂರು ತಂಡ ಎರಡು ಗೋಲುಗಳನ್ನು ನೀಡಿದ್ದು ಹೊರಗಡೆ ನಡೆದ ಪಂದ್ಯದಲ್ಲಿ ಎಂಬುದು ಗಮನಾರ್ಹ.

ಇದನ್ನೂ ಓದಿ: ISL 2019: ಒಡಿಶಾ ಪ್ಲೇ ಆಫ್ ಆಸೆ ಜೀವಂತ!

ಜುವನನ್ ಹಾಗೂ ಆಲ್ಬರ್ಟ್ ಸೆರ್ರಾನ್ ಜತೆಯಲ್ಲಿ ಗೋಲ್ ಕೀಪಿಂಗ್ ನಲ್ಲಿ ಗುರ್ಪ್ರೀತ್ ಸಿಂಗ್ ಸಂಧೂ ಅವರನ್ನು ಹೊಂದಿರುವ ಬೆಂಗಳೂರು ವಿರುದ್ಧ ಗೋಲು ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಲೀಗ್ ನಲ್ಲಿ ಬೆಂಗಳೂರು ಮನೆಯಂಗಣದಲ್ಲಿ ಅತಿ ಕೆಡಿಮೆ ಶಾಟ್ ಗಳನ್ನು ಎದುರಿಸಿದೆ. 

ಒಂದು ವೇಳೆ ಬೆಂಗಳೂರು ತಂಡದ ಡಿಫೆನ್ಸ್ ವಿಭಾಗ ಒತ್ತಡಕ್ಕೆ ಸಿಲುಕಿದರೆ ಸ್ವತಃ ಗುರ್ಪ್ರೀತ್ ಅವರೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಒಡಿಶಾ ವಿರುದ್ಧ  1-0 ಅಂತರದಲ್ಲಿ ಗೆದ್ದ ಪಂದ್ಯದಲ್ಲಿ ಗುರ್ಪ್ರೀತ್ ಆರು ಬಾರಿ ಗೋಲಾಗುತ್ತಿದ್ದ ಚೆಂಡನ್ನು ತಡೆದಿದ್ದಾರೆ.

''ನನ್ನ ಪ್ರಕಾರ ಮುಂಬೈ ತಂಡದಲ್ಲಿ ಕೆಲವು ಹೊಸ ಆಟಗಾರರಿದ್ದಾರೆ. ಆದರೆ ತಂಡದ ಆತ್ಮ ಒಂದೇ ಆಗಿದೆ. ನನ್ನ ತಂಡ ಉತ್ತಮ ರೀತಿಯಲ್ಲಿ ಕೆಲಸ ನಿರವಹಿಸುತ್ತದೆ ಎಂಬ ನಂಬಿಕೆ ನನಗಿದೆ. ನಮ್ಮ ವಿರುದ್ಧ ಗೋಲು ಗಳಿಸಲು ತಂಡಗಳಿಗೆ ಕಠಿಣವಾಗುವಂಥ ಪರಿಸ್ಥಿತಿಯನ್ನು ನಾವು ನಿರ್ಮಾಣ ಮಾಡುತ್ತೇವೆ. ನಾವು ಆಡಲು ಉತ್ತಮ ಎದುರಾಳಿಗಳಲ್ಲ ಎಂಬುದನ್ನು ತೋರಿಸುತ್ತೇವೆ,'' ಎಂದು ಬೆಂಗಳೂರು ಕೋಚ್ ಕಾರ್ಲೊಸ್ ಕ್ವಾಡ್ರಟ್ ಹೇಳಿದ್ದಾರೆ.

ಡಿಫೆನ್ಸ್ ವಿಭಾಗ ಉತ್ತಮವಾಗಿದ್ದರೂ ಬೆಂಗಳೂರು ಅಟ್ಯಾಕ್ ವಿಭಾಗದಲ್ಲಿ ಕಷ್ಟ ಎದುರಿಸುತ್ತಿರುವುದು ಸ್ಪಷ್ಟ. ತಂಡದ ಫಾರ್ವಾರ್ಡ್ ವಿಭಾಗ ಗೋಲು ಗಳಿಸಲು ಹರಸಾಹಸ ಪಟ್ಟಿರುವುದು ಸಹಜ. ಇದುವರೆಗೂ ತಂಡ ಗಳಿಸಿದ್ದು ಕೇವಲ ಏಳು ಗೋಲುಗಳು. ಚೆನ್ನೈಯಿನ್ ಎಫ್ ಸಿ ವಿರುದ್ಧ   3-0  ಅಂತರದಲ್ಲಿ ಗೆದ್ದಿರುವುದನ್ನು ಹೊರತುಪಡಿಸಿದರೆ ಉಳಿದೆಲ್ಲ ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ಒಂದು ಗೋಲು. 

ಬೆಂಗಳೂರು ಬ್ಯಾಕ್ ಲೈನ್ ಗೆ ನಿಯಂತ್ರಣ ಹೇರಲು ಅಮೈನ್ ಚೆರ್ಮಿತಿ ಉತ್ತಮ ಆಟಗಾರ. ಈಗಾಗಲೇ ನಾಲ್ಕು ಗೋಲು ಗಳಿಸಿ ತಾನು ಮುಂಬೈ ಪಾಲಿನ ಭರವಸೆ ಎನಿಸಿದ್ದಾರೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದ ಬಳಿಕ ಮುಂಬೈ ಸತತ ಆರು ಪಂದ್ಯಗಳಲ್ಲಿ  ಕಂಡಿರಲಿಲ್ಲ. ಆದ್ದರಿಂದ ಜಯದ ಅಗತ್ಯ ತಂಡಕ್ಕಿದೆ.  ''ಹಿಂದಿನ ಪಂದ್ಯದಲ್ಲಿ ನಾವು ಸೋತಿಲ್ಲ ಎಂಬುದು ನಿಜ, ಅದೇ ರೀತಿ ನಾವು ಸೋತಿಲ್ಲ. ನಾವು ಪಂದ್ಯಗಳನ್ನು ಗೆಲ್ಲಲು ಎಲ್ಲಾ ರೀತಿಯ ಹೋರಾಟ ನಡೆಸುತ್ತೇವೆ. ಅದೇ ರೀತಿ ನಾಳೆಯ ಪಂದ್ಯದಲ್ಲೂ ನಮ್ಮ ಹೋರಾಟ ಮುಂದುವರಿಯಲಿದೆ. ಜತೆಯಲ್ಲಿ ಅದೃಷ್ಟವೂ ಬೇಕಾಗಿದೆ,'' ಎಂದು ಮುಂಬೈ ಕೋಚ್ ಕೋಸ್ಟಾ ಹೇಳಿದ್ದಾರೆ. 

ಮನೆಯಂಗಣದಿಂದ ಹೊರಗಡೆ ತಂಡದ ಪ್ರದರ್ಶನದ ಬಗ್ಗೆ ಪೋರ್ಚುಗೀಸ್ ಕೋಚ್ ತೃಪ್ತಿಪಟ್ಟಿದ್ದಾರೆ. ತಂಡ ಮನೆಯಂಗಣದ ಹೊರಗಡೆ ಅಜೇಯವಾಗಿದೆ, ಗಳಿಸಿರುವ ಏಳು ಅಂಕಗಳಲ್ಲಿ ಆರು ಅಂಕಗಳು ಹೊರಗಡೆ ನಡೆದ ಪಂದ್ಯದಿಂದ ಬಂದಿದೆ. 

Latest Videos
Follow Us:
Download App:
  • android
  • ios