ಕೋಲ್ಕತಾ(ಮಾ.21): ಭಾರತದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಪ್ರದೀಪ್‌ ಕುಮಾರ್‌ ಬ್ಯಾನರ್ಜಿ(ಪಿ.ಕೆ.ಬ್ಯಾನರ್ಜಿ) ಶುಕ್ರವಾರ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ಅವರು ಮಾ.2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಮಧ್ಯಾಹ್ನ 12.40ಕ್ಕೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಜೂ.23, 1936ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮೊಯ್ನಾಗುರಿಯಲ್ಲಿ ಜನಿಸಿದ್ದ ಬ್ಯಾನರ್ಜಿ, ವಿಭಜನೆಗೂ ಮುನ್ನ ಕುಟುಂಬದೊಂದಿಗೆ ಜಮ್ಶೆಡ್‌ಪುರಕ್ಕೆ ಸ್ಥಳಾಂತರಗೊಂಡು ನೆಲೆಸಿದ್ದರು.

ಸ್ಪೇನ್‌ನ 21ರ ಫುಟ್ಬಾಲ್‌ ಕೋಚ್‌ ಬಲಿ ಪಡೆದ ಕೊರೋನಾ ವೈರಸ್..!

ಒಲಿಂಪಿಕ್ಸ್‌ನಲ್ಲೂ ಆಡಿದ್ದರು: 1952ರಲ್ಲಿ ಬಿಹಾರ ಪರ ಸಂತೋಷ್‌ ಟ್ರೋಫಿಗೆ ಪಾದಾರ್ಪಣೆ ಮಾಡಿದ 16 ವರ್ಷದ ಬ್ಯಾನರ್ಜಿ, 1955ರಲ್ಲಿ ಭಾರತ ತಂಡಕ್ಕೆ ಕಾಲಿಟ್ಟರು. 3 ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ ಆಡಿದ್ದ ಬ್ಯಾನರ್ಜಿ, 1962ರಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ದ.ಕೊರಿಯಾ ವಿರುದ್ಧ ನಡೆದ ಫೈನಲ್‌ನಲ್ಲಿ ಆಕರ್ಷಕ ಗೋಲು ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ಸಹ ವಹಿಸಿದ್ದರು. 1956ರ ಮೆಲ್ಬರ್ನ್‌ ಒಲಿಂಪಿಕ್ಸ್‌ನಲ್ಲಿ ಆಡಿದ ತಂಡದಲ್ಲಿದ್ದ ಬ್ಯಾನರ್ಜಿ, 1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕರಾಗಿದ್ದರು. ರಾಷ್ಟ್ರೀಯ ತಂಡದ ಪರ 84 ಪಂದ್ಯಗಳಲ್ಲಿ 65 ಗೋಲುಗಳನ್ನು ಬಾರಿಸಿದ್ದರು. 1967ರಲ್ಲಿ ನಿವೃತ್ತಿ ಪಡೆದ ಅವರು, ಬಳಿಕ ಕೋಚಿಂಗ್‌ನತ್ತ ಗಮನ ಹರಿಸಿದರು. ಮೋಹನ್‌ ಬಗಾನ್‌ ತಂಡದ ಕೋಚ್‌ ಆಗಿ ತಂಡ ಒಂದೇ ಋುತುವಿನಲ್ಲಿ 3 ಟ್ರೋಫಿ ಗೆಲ್ಲಲು ನೆರವಾಗಿದ್ದರು. 1972ರಿಂದ 1986ರ ವರೆಗೂ ಭಾರತ ತಂಡದ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದರು.

Fact Check: ತಮ್ಮ ಹೋಟೆಲ್‌ಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಿದ ಕ್ರಿಸ್ಟಿಯಾನೋ ರೊನಾಲ್ಡೋ..!

ಪಿ.ಕೆ.ಬ್ಯಾನರ್ಜಿ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಫುಟ್ಬಾಲಿಗ ಸುನಿಲ್ ಚೆಟ್ರಿ ಕಂಬನಿ ಮಿಡಿದಿದ್ದಾರೆ.

ಫಿಫಾದಿಂದ ಗೌರವ: ಕ್ರೀಡೆಗೆ ಅವರ ಕೊಡುಗೆಯನ್ನು ಪರಿಗಣಿಸಿದ ಫಿಫಾ 20ನೇ ಶತಮಾನದ ಭಾರತದ ಶ್ರೇಷ್ಠ ಫುಟ್ಬಾಲಿಗ ಎಂದು ಘೋಷಿಸಿ 2004ರಲ್ಲಿ ಸೆನ್ಟೇನಿಯಲ್‌ ಆರ್ಡರ್‌ ಆಫ್‌ ಮೆರಿಟ್‌ ಗೌರವವನ್ನು ನೀಡಿತ್ತು. ಒಲಿಂಪಿಕ್‌ ಸಮಿತಿಯಿಂದ ಕ್ರೀಡಾಸ್ಫೂರ್ತಿ ಪ್ರಶಸ್ತಿ ಪಡೆದ ಏಷ್ಯಾದ ಏಕೈಕ ಫುಟ್ಬಾಲಿಗ ಎನ್ನುವ ಹಿರಿಮೆಗೂ ಅವರು ಪಾತ್ರರಾಗಿದ್ದರು.

1961ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ಬ್ಯಾನರ್ಜಿ, 1990ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು. 51 ವರ್ಷಗಳ ಕಾಲ ಫುಟ್ಬಾಲ್‌ ಕ್ರೀಡೆ ಜತೆ ಒಡನಾಟ ಇಟ್ಟುಕೊಂಡಿದ್ದರು. ಅವರ ನಿಧನಕ್ಕೆ ಅಖಿಲ ಭಾರತೀಯ ಫುಟ್ಬಾ ಲ್‌ ಫೆಡರೇಷನ್‌ (ಎಎಫ್‌ಎಫ್‌ಐ) ಸಂತಾಪ ಸೂಚಿಸಿದೆ.