ಮಸ್ಕಟ್‌(ನ.20) : 2022ರ ಫಿಫಾ ವಿಶ್ವ​ಕಪ್‌ಗೆ ಪ್ರವೇ​ಶಿಸುವ ಭಾರತ ಫುಟ್ಬಾಲ್‌ ತಂಡದ ಕನಸು ಭಗ್ನ​ಗೊಂಡಿದೆ. 2ನೇ ಹಂತದ ಅರ್ಹ​ತಾ​ ಸುತ್ತಿನ ಪಂದ್ಯ​ದಲ್ಲಿ ಮಂಗ​ಳ​ವಾರ ಒಮಾನ್‌ ವಿರುದ್ಧ 0-1 ಗೋಲಿನ ಅಂತ​ರ​ದಲ್ಲಿ ಭಾರತ ಸೋಲುಂಡಿತು. 

‘ಇ’ ಗುಂಪಿನಲ್ಲಿ ತಾನಾ​ಡಿ​ರುವ 5 ಪಂದ್ಯ​ಗ​ಳಲ್ಲಿ ಭಾರತ 2ರಲ್ಲಿ ಸೋಲು ಕಂಡಿದ್ದು, 3 ಪಂದ್ಯ​ಗ​ಳನ್ನು ಡ್ರಾ ಮಾಡಿ​ಕೊಂಡಿದೆ. ಒಮಾನ್‌ ವಿರುದ್ಧ ನಡೆ​ದಿದ್ದ ಮೊದಲ ಪಂದ್ಯ​ದಲ್ಲೂ ಭಾರತ ಸೋಲು ಕಂಡಿ​ತ್ತು.

ಮಂಗ​ಳ​ವಾರದ ಪಂದ್ಯ ಭಾರ​ತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ​ವಾ​ಗಿತ್ತು. ಆರಂಭ​ದಿಂದಲೂ ಆಕ್ರ​ಮ​ಣ​ಕಾರಿ ಆಟ​ಕ್ಕಿ​ಳಿದ ಆತಿ​ಥೇಯ ತಂಡ​ವನ್ನು ನಿಯಂತ್ರಿ​ಸಲು ಭಾರ​ತೀ​ಯರು ಹೆಚ್ಚಿನ ಪರಿ​ಶ್ರಮ ವಹಿ​ಸ​ಬೇ​ಕಾ​ಯಿ​ತು. 

33ನೇ ನಿಮಿಷದಲ್ಲಿ ಅಲ್‌ ಖಾಲ್ದಿ ನೀಡಿದ ಪಾಸ್‌ ಅನ್ನು ಮೊಹ್ಸೆ​ನ್‌ ಗೋಲು ಪೆಟ್ಟಿ​ಗೆಗೆ ಸೇರಿಸಿ, ಒಮಾನ್‌ಗೆ ಮುನ್ನಡೆ ನೀಡಿ​ದರು. ಮೊದ​ಲಾ​ರ್ಧದ ಮುಕ್ತಾ​ಯಕ್ಕೆ 1-0 ಮುನ್ನಡೆ ಪಡೆದ ಒಮಾನ್‌, ದ್ವಿತೀ​ಯಾರ್ಧದಲ್ಲೂ ಭಾರ​ತದ ಮೇಲೆ ಒತ್ತಡ ಹೇರಿತು. ಎಷ್ಟೇ ಪ್ರಯ​ತ್ನಿಸಿದರೂ ಭಾರ​ತೀಯ ಆಟ​ಗಾ​ರ​ರಿಗೆ ಗೋಲು ಗಳಿ​ಸಲು ಸಾಧ್ಯ​ವಾ​ಗ​ಲಿಲ್ಲ.