ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ರೆಫ್ರಿಗಳ ತೀರ್ಪುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಅರ್ಜೆಂಟೀನಾ-ಈಜಿಪ್ಟ್ ಪಂದ್ಯದಲ್ಲಿನ ತಾರತಮ್ಯದ ಆರೋಪಗಳ ಬೆನ್ನಲ್ಲೇ, ಫ್ರಾನ್ಸ್-ಮೊರಾಕ್ಕೊ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಐವರು ಅರ್ಜೆಂಟೀನಾದ ರೆಫ್ರಿಗಳನ್ನೇ ನೇಮಿಸಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.
ಜಾರ್ಜಿಯಾ(ಅಮೆರಿಕ): ಈ ಬಾರಿ ಫಿಫಾ ಫುಟ್ಬಾಲ್ ವಿಶ್ವಕಪ್ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಅದರಲ್ಲೂ ರೆಫ್ರಿಗಳ ವಿಚಾರದಲ್ಲಿ ವಿವಾದ ಜೋರಾಗಿದೆ.
ಟೂರ್ನಿಗೂ ಮುನ್ನವೇ ಸೊಮಾಲಿಯಾದ ಪ್ರಶಸ್ತಿ ಪುರಸ್ಕೃತ ರೆಫ್ರಿ ಒಮರ್ ಆರ್ತನ್ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿತ್ತು. ಇತ್ತೀಚೆಗೆ ಅಮೆರಿಕ ಆಟಗಾರ ಫೊಲಾರಿನ ಬಾಲೋಗನ್‌ಗೆ ಬೋಸ್ನಿಯಾ ವಿರುದ್ಧ ಪಂದ್ಯದಲ್ಲಿ ರೆಫ್ರಿ ನೀಡಿದ್ದ ರೆಡ್ ಕಾರ್ಡ್‌ಅನ್ನು ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಮಣಿದು ಫಿಫಾ ಹಿಂಪಡೆದಿದ್ದು ಜಾಗತಿಕ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಇನ್ನು, ಹಲವು ಪಂದ್ಯಗಳಲ್ಲಿ ರೆಫ್ರಿಗಳ ತೀರ್ಪು ವಿವಾದಾತ್ಮಕವಾಗಿದ್ದು, ಆಟಗಾರರ ಜೊತೆ ಅಭಿಮಾನಿಗಳನ್ನು ಕೆರಳಿಸಿವೆ. ಮಂಗಳವಾರ ಅರ್ಜೆಂಟೀನಾ-ಈಜಿಪ್ಟ್ ಪಂದ್ಯದಲ್ಲಿ ಅರ್ಜೆಂಟೀನಾಗೆ ಪೆನಾಲ್ಟಿ ನೀಡಿದ್ದು, ಈಜಿಪ್ಟ್ ಗಳಿಸಿದ್ದ ಗೋಲು ನಿರಾಕರಣೆ ಹಾಗೂ ಕೆಲ ತೀರ್ಪುಗಳು ವಿವಾದಕ್ಕೆ ಎಡೆಮಾಡಿಕೊಟ್ಟಿವೆ. ಫಿಫಾ ಹಾಗೂ ರೆಫ್ರಿಗಳು ಅರ್ಜೆಂಟೀನಾ ಪರವಾಗಿದ್ದಾರೆ ಮತ್ತು ಇತರ ತಂಡಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಹಲವರು ಆರೋಪಿಸಿದ್ದಾರೆ. ಅಲ್ಲದೆ, ರೆಫ್ರಿ ತೀರ್ಪಿನ ವಿರುದ್ಧ ಈಜಿಪ್ಟ್ ಆಟಗಾರರು, ಕೋಚ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫಿಫಾಗೆ ಈಜಿಪ್ಟ್ ಫುಟ್ಬಾಲ್ ಫೆಡರೇಷನ್ ದೂರನ್ನು ಕೂಡಾ ಸಲ್ಲಿಸಿದೆ ಎಂದು ವರದಿಯಾಗಿದೆ.
ಫ್ರಾನ್ಸ್-ಮೊರಾಕ್ಕೊ ಪಂದ್ಯ: 5 ರೆಫ್ರಿಗಳೂ ಅರ್ಜೆಂಟೀನಾದವರು!
ಫ್ರಾನ್ಸ್-ಮೊರಾಕ್ಕೊ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಫಿಫಾ ರೆಫ್ರಿಗಳನ್ನು ಆಯ್ಕೆ ಮಾಡಿದೆ. ಪಂದ್ಯದ ಐವರು ರೆಫ್ರಿಗಳೂ ಅರ್ಜೆಂಟೀನಾದವರು ಎಂಬುದು ಗಮನಾರ್ಹ. ಪಂದ್ಯವೊಂದಕ್ಕೆ ಒಂದೇ ದೇಶದ ರೆಫ್ರಿಗಳನ್ನು ನೇಮಿಸಿದ್ದು ಈ ವಿಶ್ವಕಪ್‌ನಲ್ಲಿ ಇದೇ ಮೊದಲು. ಈ ಬಗ್ಗೆ ಫ್ರಾನ್ಸ್ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದು, ಅಲ್ಲಿನ ಮಾಧ್ಯಮ ಸಂಸ್ಥೆಗಳೂ ಇದರ ಬಗ್ಗೆ ಅಸಮಾಧಾನ ಹೊರಹಾಕಿವೆ.
ರೆಡ್ ಕಾರ್ಡ್ ನೀಡಿದ್ದ ರೆಫ್ರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಟ್ರಂಪ್‌ಗೆ ಫಿಫಾ ತಿರುಗೇಟು
ಫ್ಲೋರಿಡಾ: ಬೋಸ್ನಿಯಾ ವಿರುದ್ಧ ಪಂದ್ಯದಲ್ಲಿ ಅಮೆರಿಕ ಆಟಗಾರ ಫೊಲಾರಿನ್ ಬಾಲೋಗನ್‌ಗೆ ರೆಡ್ ಕಾರ್ಡ್ ನೀಡಿದ್ದ ರೆಫ್ರಿ ರಫೇಲ್ ಕ್ಲಾಸ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮಾನ ವ್ಯಕ್ತಪಡಿಸಿದ್ದರು. ‘ಅವರ ಹಿನ್ನೆಲೆ ಗಮನಿಸಿದರೆ ಸ್ವಲ್ಪ ಅನುಮಾನ ಬರುತ್ತದೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ, ‘ಅವರು ಫಿಫಾ ರೆಫ್ರಿಗಳಲ್ಲಿ ಪ್ರಮುಖರು ಮತ್ತು ನಮ್ಮ ತಂಡದ ಮೌಲ್ಯಯುತ ಸದಸ್ಯ. ತಮ್ಮ ಫುಟ್ಬಾಲ್ ಬದುಕಿನುದ್ದಕ್ಕೂ ಅವರು ವೃತ್ತಿಪರತೆ ಮತ್ತು ಸಮಗ್ರತೆಯ ಅತ್ಯುನ್ನತ ಮಾನದಂಡಗಳನ್ನು ಪ್ರದರ್ಶಿಸಿದ್ದಾರೆ’ ಎಂದಿದೆ.

