ಗುಡ್‌ಬೈ ಹೇಳ್ತಿದೆ ಬೆಂಗಳೂರಿನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್, ರುಚಿಕರ ತಿನಿಸು ಸವಿಯೋಕೆ ಇನ್ನೆರಡೇ ದಿನ ಬಾಕಿ
Bengaluruನ ಹೃದಯಭಾಗ Malleshwaramನಲ್ಲಿರುವ ಖ್ಯಾತ Hotel New Krishna Bhavan ಡಿಸೆಂಬರ್ 6ಕ್ಕೆ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ. 7 ದಶಕಗಳ ಕಾಲ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸರ್ವ್ ಮಾಡಿದ ಹೊಟೇಲ್ ಇದು.
ಮಲ್ಲೇಶ್ವರಂ ಅಂದ್ರೆ ಸಾಕು ಬೆಂಗಳೂರಿನ ಕೆಲವು ಹಳೆಯ ಹೆಸರಾಂತ ಹೊಟೇಲ್‌ಗಳು ಕಣ್ಮುಂದೆ ಬರುತ್ತವೆ. ಸೆಂಟ್ರಲ್ ಟಿಫಿನ್ ರೂಂ, ಮಾವಳ್ಳಿ ಟಿಫಿನ್ ರೂಂ, ಜನತಾ ಹೊಟೇಲ್ ಹೀಗೆ ಹಲವು ಹೊಟೇಲ್‌ಗಳು ಹಲವು ವರ್ಷಗಳಿಂದ ಗ್ರಾಹಕರಿಂದ ರುಚಿಕರವಾದ ಸಾಂಪ್ರದಾಯಿಕ ಆಹಾರವನ್ನು ಉಣಬಡಿಸುತ್ತಿದೆ. ಇಂಥಾ ಹೊಟೇಲ್‌ಗಳಲ್ಲೊಂದು ಬೆಂಗಳೂರಿನ ಮಲ್ಲೇಶ್ವಂನಲ್ಲಿರುವ ಹೆಸರಾಂತ ಹೊಟೇಲ್ ನ್ಯೂ ಕೃಷ್ಣ ಭವನ. ಸಂಪಿಗೆ ರಸ್ತೆಯಲ್ಲಿರುವ ನ್ಯೂ ಕೃಷ್ಣ ಭವನವು ಬೆಂಗಳೂರಿಗರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.
ಬಾಯಲ್ಲಿ ನೀರೂರಿಸುವ ಇಡ್ಲಿ-ಸಾಂಬಾರ್, ಬಟನ್ ಇಡ್ಲಿ, ನೀರ್ ದೋಸೆ, ಕೊಟ್ಟೆ ಕಡುಬು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ ಮತ್ತು ರಾಗಿ ಮುದ್ದೆ-ಸಾರು, ಗ್ರೀನ್ ಮಸಾಲಾ ಇಡ್ಲಿ, ಓಪನ್ ಬಟರ್ ಮಸಾಲಾ ದೋಸೆ ಮೊದಲಾದ ತಿನಿಸುಗಳಿಗೆ ಈ ಹಳೆಯ ಹೊಟೇಲ್ ಹೆಸರುವಾಸಿಯಾಗಿದೆ. ಹೀಗಾಗಿ ಇಲ್ಲಿ ದಿನವಿಡೀ ಗ್ರಾಹಕರು (Customers) ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ. ಒಂದು ಕಾಲದಲ್ಲಿ, ರೆಸ್ಟೋರೆಂಟ್ ದಿನಕ್ಕೆ ಕನಿಷ್ಠ 3,000 ಊಟಗಳನ್ನು ಗ್ರಾಹಕರಿಗೆ ಉಣಬಡಿಸುತ್ತಿತ್ತು.
ಕಾಡು ಮಲ್ಲೇಶ್ವರ ಕಡಲೆಕಾಯಿ ಪರಿಷೆ ಅದ್ಧೂರಿ ಆರಂಭ: ಬಸವಣ್ಣಗೆ 800 ಕೆಜಿ ಕಡಲೆ ಶೃಂಗಾರ
ಏಳು ದಶಕಗಳ ನಂತರ ವಿದಾಯ ಹೇಳಿದ ಬೆಂಗಳೂರಿನ ನ್ಯೂ ಕೃಷ್ಣ ಭವನ್
ಆದರೆ, ಬೇಸರದ ವಿಚಾರವೆಂದರೆ ಬರೋಬ್ಬರಿ 70 ವರ್ಷಗಳ ಇತಿಹಾಸವಿರುವ, ಬೆಂಗಳೂರಿಗರ ನೆಚ್ಚಿನ ನ್ಯೂ ಕೃಷ್ಣ ಭವನ ಶಾಶ್ವತವಾಗಿ ಮುಚ್ಚುತ್ತಿದೆ. ಈ ಬಗ್ಗೆ ಡಿಸೆಂಬರ್ 6ರಿಂದ ಹೊಟೇಲ್ ಮುಚ್ಚಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 'ಆತ್ಮೀಯ ಗ್ರಾಹಕರೇ, ಹೊಸ ಕೃಷ್ಣ ಭವನವನ್ನು ಡಿಸೆಂಬರ್ 6ರಿಂದ ಮುಚ್ಚಲಾಗುವುದು (Closing). ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು' ಎಂದು ನ್ಯೂ ಕೃಷ್ಣ ಭವನ ಹೊಟೇಲ್ ಮುಂದೆ ಬ್ಯಾನರ್ ಹಾಕಲಾಗಿದೆ.
1944ರಲ್ಲಿ ರಾಮಕೃಷ್ಣ ಪ್ರಭು ಅವರಿಂದ ಸ್ಥಾಪಿಸಲ್ಪಟ್ಟ ನ್ಯೂ ಕೃಷ್ಣ ಭವನವು ಬೆಳಗ್ಗಿನ ವಾಕಿಂಗ್ ಮಾಡುವವರು ಮತ್ತು ಮಲ್ಲೇಶ್ವರಕ್ಕೆ ಭೇಟಿ ನೀಡುವವರ ನೆಚ್ಚಿನ ಸ್ಥಳವಾಗಿದೆ. ಈ ಪ್ರದೇಶದ ವಿವಿಧ ಕಾರ್ಯಗಳಿಗೆ ಹಾಜರಾಗುವವರು ಆಗಾಗ ಈ ಹೆಸರಾಂತ ಹೊಟೇಲ್‌ಗೆ ಭೇಟಿ ನೀಡುತ್ತಾರೆ. ನ್ಯೂ ಕೃಷ್ಣ ಭವನದ ಯಶಸ್ಸಿಗೆ ಅದರ ಮೆನು ಸಹ ಕಾರಣವೆಂದೇ ಹೇಳಬಹುದು. ಹಲವು ರುಚಿಕರವಾದ ದೇಸೀ ತಿಂಡಿಯನ್ನು ಈ ಹೊಟೇಲ್ ಸರ್ವ್ ಮಾಡುತ್ತದೆ.
ಐಪಿಎಲ್ ಬ್ಯುಸಿ ನಡುವೆಯೂ ಬೆಂಗಳೂರಿನ CTRಗೆ ಭೇಟಿ ನೀಡಿದ ವಿರುಷ್ಕಾ ಜೋಡಿ
ಹೊಟೇಲ್ ಮುಚ್ಚುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇತ್ತೀಚಿನ ವರದಿಗಳ ಪ್ರಕಾರ, ನ್ಯೂ ಕೃಷ್ಣ ಭವನ್‌ನ ಕಟ್ಟಡವನ್ನು ಭೀಮಾ ಜ್ಯುವೆಲ್ಲರ್ಸ್ ಕಂಪೆನಿಗೆ ಮಾರಾಟ ಮಾಡಲಾಗಿದೆ. ಹೀಗಾಗಿ ಆಡಳಿತ ಮಂಡಳಿ ಹೊಟೇಲ್‌ವನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. 'ಸಾಂಕ್ರಾಮಿಕ ರೋಗದ ಮೊದಲು ಹೊಟೇಲ್‌ನಲ್ಲಿ ಸಿಬ್ಬಂದಿ ಸಂಖ್ಯೆ 120ಕ್ಕಿಂತ ಹೆಚ್ಚಿತ್ತು. ಆದರೆ ಕೋವಿಡ್ ಬಿಕ್ಕಟ್ಟಿನ ನಂತರ ಸಹಜವಾಗಿಯೇ ಆರ್ಥಿಕ ಸಮಸ್ಯೆ ಎದುರಾದ ಕಾರಣ ಹಲವು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಅವರಲ್ಲಿ ಕೆಲವರು ಸುಮಾರು 45 ವರ್ಷಗಳ ಕಾಲ ಹೊಟೇಲ್‌ನಲ್ಲಿ ಕೆಲಸ ಮಾಡಿದ್ದರು' ಎಂದು ನ್ಯೂ ಕೃಷ್ಣ ಭವನದ ಸಿಬ್ಬಂದಿಯೊಬ್ಬರು ಹೇಳಿದರು.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಅತೀ ಹಳೆಯ ಹೊಟೇಲ್ ಮುಚ್ಚುತ್ತಿರೋ ವಿಚಾರ ವೈರಲ್ ಆಗ್ತಿದೆ. ಟ್ವೀಟ್‌ಗಳು ವೈರಲ್ ಆಗ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹೊಟೇಲ್ ಜೊತೆಗೆ ತಮಗಿರುವ ಬಾಂಧವ್ಯವನ್ನು ವಿವರಿಸುತ್ತಿದ್ದಾರೆ. ಹೊಟೇಲ್ ಮುಚ್ಚುತ್ತಿರುವ ಬಗ್ಗೆ ಹಲವಾರು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, 'ಒಂದು ಸುಂದರ ಯುಗವು ಅಂತ್ಯವಾಗುತ್ತಿದೆ. ಬೆಂಗಳೂರಿನ ಐಕಾನಿಕ್ ನ್ಯೂ ಕೃಷ್ಣ ಭವನ ರೆಸ್ಟೋರೆಂಟ್ ಮುಚ್ಚುತ್ತಿದೆ. ನಾವು ಅದರೊಂದಿಗೆ ಬೆಳೆದಿದ್ದೇವೆ. ಅದರ ನೆನಪು ಯಾವಾಗಲೂ ಮನಸ್ಸಿನಲ್ಲಿರುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಹೊಟೇಲ್, ಹಲವಾರು ರುಚಿಕರ ತಿಂಡಿಗಳನ್ನು ಹೊಂದಿದ್ದು, ಇದನ್ನು ಮುಚ್ಚುತ್ತಿರುವುದು ನಿಜಕ್ಕೂ ಬೇಸರ ತರುವ ವಿಷಯ' ಎಂದು ತಿಳಿಸಿದ್ದಾರೆ.
ನ್ಯೂ ಕೃಷ್ಣ ಭವನ್ ಬೇರೆ ಸ್ಥಳದಲ್ಲಿ ಮತ್ತೆ ಆರಂಭವಾಗುತ್ತಾ?
ಈ ಬಗ್ಗೆ ಹೋಟೆಲ್ ಮಾಲೀಕರು ಯಾವುದೇ ಖಚಿತ ನಿರ್ಧಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಬೇರೆ ಸ್ಥಳ ಆಯ್ಕೆ ಮಾಡಿ ಜನರಿಗೆ ಮತ್ತೆ ಕರಾವಳಿ ಸವಿ ಉಣಿಸುವ ಉದ್ದೇಶ ಇದೆ ಎಂದು ಕೆಲವು ಮೂಲಗಳು ತಿಳಿಸಿವೆ.