ನಾಗದೋಷ, ಸರ್ಪದೋಷ ಎಂಬ ಪದಗಳನ್ನು ನೀವು ಕೇಳಿರಬಹುದು. ನಿಮಗೆ ನಾಗದೋಷವಿದೆ ಎಂದು ಜ್ಯೋತಿಷ್ಯರು ಹೇಳಿದರೆ ಎಲ್ಲರೂ ಭಯಪಡುತ್ತಾರೆ. ನಾಗ ಎಂಬ ಹೆಸರಿಗೇ ಅಂಥ ಒಂದು ಭಯಭೀತಿಯ ಭಾವನೆ ಸುತ್ತಿಕೊಂಡಿದೆ. ನಾಗದೋಷದಿಂದ ಅನೇಕ ಸಮಸ್ಯೆಗಳು ಉಂಟಾಗುವುದು ನಿಜ. ಆದರೆ ಅದಕ್ಕೆ ನೀವೇ ಕಾರಣ ಇರಲಿಕ್ಕಿಲ್ಲ. ನಿಮ್ಮ ಕುಟುಂಬದ ಹಿರಿಯರಿಂದ ಆದ ಸಮಸ್ಯೆ ಇದ್ದರೂ ಇರಬಹುದು. ಹಾಗೇ ಅದಕ್ಕೆ ಪರಿಹಾರವೂ ಇದೆ.

ನಾನು ಯಾವುದೇ ಹಾವನ್ನು ಹೊಡೆದಿಲ್ಲ, ತೊಂದರೆ ಕೊಟ್ಟಿಲ್ಲ. ಆದರೂ ನನ್ನ ಜಾತಕದಲ್ಲಿ ಸರ್ಪದೋಷ ಬಂದಿದೆಯಲ್ಲಾ ಏಕೆ ಎಂದು ಕೆಲವರು ಕೇಳುತ್ತಾರೆ. ಇಹ ಜನ್ಮನಿ, ಅನ್ಯ ಜನ್ಮನಿ ಎಂದು ಶಾಸ್ತ್ರ ಹೇಳುತ್ತದೆ. ಹಾಗೆಂದರೆ ಈ ಜನ್ಮದಲ್ಲಿ ಅಥವಾ ಕಳೆದ ಜನ್ಮದಲ್ಲಿ ಮಾಡಿದ ಕೃತ್ಯದ ಫಲ ಈಗ ಅನುಭವಿಸಬೇಕಾಗುತ್ತದೆ. ಒಂದು ವೇಳೆ ಮುತ್ತಾತ, ತಾತ-ಚಿಕ್ಕಪ್ಪ, ತಂದೆ ಅಥವಾ ದೊಡ್ಡಪ್ಪ ಹಾವಿಗೆ ತೊಂದರೆ ಕೊಟ್ಟಿದ್ದರೆ ಈ ರೀತಿ ದೋಷ ಬರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಾವು ಹೇಗೆ ಹಕ್ಕು ಸಾಧಿಸುತ್ತೇವೆಯೋ ಅದೇ ರೀತಿ ಪಾಪ- ಪುಣ್ಯಗಳು ಸಹ ಪಿತ್ರಾರ್ಜಿತವಾಗಿ ಬರುತ್ತವೆ.

ನಾಗದೋಷಗಳಲ್ಲಿ ಹಲವು ವಿಧ. ಸರ್ಪವಧಾ (ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾವನ್ನು ಹೊಡೆದು ಹಾಕುವುದು), ಸರ್ಪಾಂಡ (ಹಾವಿನ ಮೊಟ್ಟೆ ನಾಶ ಮಾಡುವುದು) ವಧಾ, ಸರ್ಪ ಕೇಲಿ ದರ್ಶನ (ಮಿಲನ ಕ್ರಿಯೆಯಲ್ಲಿ ತೊಡಗಿದ ಹಾವುಗಳನ್ನು ನೋಡುವುದು), ಸರ್ಪಗಳ ವಾಸಸ್ಥಾನವನ್ನು ನಾಶ ಮಾಡುವುದು...ಇತರ ಕೃತ್ಯಗಳು ದೋಷಗಳು ಎನಿಸಿಕೊಳ್ಳುತ್ತವೆ. ನಾಗನ ದಾರಿಗೆ ಅಡ್ಡ ಮಾಡಬಾರದು ಎಂದು ಕೆಲವರು ಹೇಳುತ್ತಾರೆ. ಪದೇ ಪದೇ ನಮ್ಮ ಮನೆಗೆ ಹಾವುಗಳು ಬರುತ್ತವೆ. ಎಷ್ಟೋ ಸಲ ಹಿಡಿಸಿ, ದೂರ ಬಿಡಿಸಿದ್ದೇವೆ. ಆದರೂ ಬರುತ್ತಿದೆ ಎಂದರೆ ಅದಕ್ಕೆ ಕಾರಣ ನಾಗವೀಥಿನಿರೋದನ, ಮಲಿನೀಕರಣ ದೋಷ, ಗೃಹಗೋಷ್ಠ ನಿರ್ಮಾಣ. ಅಂದರೆ ಸರ್ಪಗಳು ಸಂಚರಿಸುವ ದಾರಿಗೆ ಅಡ್ಡ ಮಾಡಿದರೆ, ಮಲಿನ ಮಾಡಿದರೆ, ಆ ದಾರಿಯ ಶುದ್ಧತೆ ಹಾಳು ಮಾಡಿದರೆ ಅದು ದೋಷ.

ಮನೆ ನಿರ್ಮಿಸುವಾಗ ಎಲ್ಲರೂ ನಾಗನ ದಾರಿಗೆ ಒಂದಲ್ಲ ಒಂದು ಬಾರಿ ಅಡ್ಡ ಮಾಡಿಯೇ ಮಾಡಿರುತ್ತಾರೆ. ಹೀಗಾಗಿ ಗೃಹಪ್ರವೇಶದ ನಂತರ ಒಮ್ಮೆ ಸರ್ಪಶಾಂತಿ, ಆಶ್ಲೇಷ ಬಲಿ ಮಾಡಿಸಿಕೊಳ್ಳುವುದು ಒಳ್ಳೆಯದು. ನಾಗಗಳ ಬಗ್ಗೆ ಇರುವ ನಂಬಿಕೆ ಹೀಗಿದೆ- ಎರಡು ಹಾವುಗಳು ಕಚ್ಚಾಡುವುದನ್ನು ನೋಡಿದರೆ ಹತ್ತಿರದವರು ಹಾಗೂ ಸಂಬಂಧಿಕರ ಮಧ್ಯೆ ಜಗಳಗಳಾಗುತ್ತವೆ. ಒಂದು ಹಾವು ಮತ್ತೊಂದು ಹಾವನ್ನು ನುಂಗುತ್ತಿರುವುದು ನೋಡಿದರೆ ಬೆಳೆ ನಾಶದ ಸೂಚನೆ. ಮನೆಯೊಳಗೆ ಹಾವು ಬಂದರೆ ಅದು ಆಸ್ತಿ ಬರುತ್ತದೆ ಎಂಬ ಸಂಕೇತ. ಅದೇ ಮನೆಯಿಂದ ಆಚೆ ಹೋಗುತ್ತಿರುವುದು ನೋಡಿದರೆ ಸಂಪತ್ತು ನಾಶವಾಗುವ ಸೂಚನೆ. ಹೆಡೆ ಎತ್ತಿಕೊಂಡು ಹಾವು ಎಡದಿಂದ ಬಲಕ್ಕೆ ಹೋದರೆ ಶುಭ, ಬಲಗಡೆಯಿಂದ ವ್ಯಕ್ತಿ ಹತ್ತಿರ ಹಾವು ಬಂದರೆ ಅದು ಯಶಸ್ಸನ್ನು ತೋರಿಸುವ ಸಂಕೇತ, ಎಡಗಡೆಯಿಂದ ಬಂದರೆ ಅಶುಭ. ಹೆಡೆ ಎತ್ತಿ ವ್ಯಕ್ತಿಯ ಕಡೆ ದಿಟ್ಟಿಸಿ ನೋಡಿದರೆ ಸಂಪತ್ತು ದೊರೆಯುತ್ತದೆ ಎಂದರ್ಥ. ಬಿಲ ಸೇರುವ ವೇಳೆ ನೋಡಿದರೆ ಬಡವರಿಗೆ ಶ್ರೀಮಂತಿಕೆಯೂ ಶ್ರೀಮಂತರಿಗೆ ಬಡತನ- ಹೀಗೆ. ಇವುಗಳು ನಿಜವಾದ ನಿದರ್ಶನಗಳು ದೊರೆಯುತ್ತವೆ.

ನಾಗರ ಪಂಚಮಿ ಹಬ್ಬದ ಬಗ್ಗೆ ಭಗವಾನ್ ಶ್ರೀಕೃಷ್ಣ ಹೇಳಿದ್ದೇನು..? 

ನಿಮಗೆ ನಾಗದೋಷ ಇದೆಯಾ?

ಇದನ್ನು ತಿಳಿಯುವುದಕ್ಕೆ ನಿಮ್ಮ ಜಾತಕವನ್ನು ಪರಿಶೀಲಿಸಬೇಕು. ನಿಮ್ಮ ಜನ್ಮದೋಷ, ನಿಮ್ಮ ಹಿರಿಯರ ದೋಷದಿಂದ ನಾಗದೋಷವಿದ್ದಲ್ಲಿ ಜಾತಕದಲ್ಲಿ ತಿಳಿಯುತ್ತದೆ. ಕೆಲವೊಮ್ಮೆ ಲೌಕಿಕ ಸಂಗತಿಗಳಲ್ಲೂ ಅದು ಗೊತ್ತಾಗಬಹುದು. ಉದಾಹರಣೆಗೆ ಎಷ್ಟು ಪ್ರಯತ್ನಿಸಿದರೂ ಸಂತಾನಪ್ರಾಪ್ತಿ ಆಗದಿರುವುದು, ಎಷ್ಟು ದುಡಿದರೂ ಫಲ ಬರದೆ ಇರುವುದು, ಕೃಷಿಯಲ್ಲಿ ಎಷ್ಟು ಪ್ರಯತ್ನಿಸಿದರೂ ಸಾಕಷ್ಟು ಬೆಳೆ ಕೈಗೆ ಸಿಗದಿರುವುದು, ಕ್ರಿಮಿಕೀಟಗಳ ಹಾವಳಿ, ಮನೆ ಬಳಿ ಆಗಾಗ ನಾಗ ಕಾಣಿಸಿಕೊಳ್ಳುವುದು, ಕನಸಿನಲ್ಲಿ ಆಗಾಗ ನಾಗ ಕಾಣಿಸಿಕೊಳ್ಳುವುದು, ಮಕ್ಕಳೀಗೆ ವಿದ್ಯೆ ತಲೆಗೆ ಹತ್ತದೆ ಇರುವುದು- ಹೀಗೆ. ಕೆಲವು ಚರ್ಮರೋಗಗಳೂ ಕೂಡ ನಾಗದೋಷದ ಸಂಕೇತ.

ನಾಗಾರಾಧನೆಯೆ ಪ್ರಮುಖ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ!...
ಪರಿಹಾರವೇನು?

ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ, ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ, ಕುಡುಪು ಅನಂತಪದ್ಮನಾಭ ಕ್ಷೇತ್ರ- ಹೀಗೆ ನಾಗ ಕ್ಷೇತ್ರಗಳಿಗೆ ಮುಡಿಪು ಕಟ್ಟಬಹುದು, ಹರಿಕೆ ಹೇಳಿಕೊಂಡು ಅದನ್ನು ತೀರಿಸಿಕೊಳ್ಳಬಹುದು. ಇಲ್ಲಿ ಹುಂಡಿಗೆ ಚಿನ್ನ ಅಥವಾ ಬೆಳ್ಳಿಯ ನಾಗ, ಮೊಟ್ಟೆ ಸಮರ್ಪಿಸಿದರೆ ಸಣ್ಣಪುಟ್ಟ ದೋಷಗಳು ನಿವಾರಣೆ ಆಗುತ್ತವೆ. ಜಾತಕಗಳಲ್ಲಿ ಸರ್ಪದೋಷ, ನಾಗದೋಷ ಮತ್ತು ಕಾಳಸರ್ಪ ದೋಷ ಪರಿಹಾರಕ್ಕಾಗಿ ನಾಗದೇವರ ಅಥವಾ ಸುಬ್ರಮಣ್ಯ ದೇವರ ಸನ್ನಿಧಿಯಲ್ಲಿ ನಡೆಯುವ ವಿಶಿಷ್ಟ ಪೂಜಾ ಪದ್ಧತಿಯೇ ಆಶ್ಲೇಷ ಬಲಿ. ಅನಾರೋಗ್ಯ, ವೈವಾಹಿಕ ಜೀವನದಲ್ಲಿನ ಸಂಕಷ್ಟ, ಗಂಡು ಸಂತಾನ ಇಲ್ಲದಿರುವುದು, ಸಂತಾನಹೀನತೆ ಮುಂತಾದ ದೋಷಗಳ ಪರಿಹಾರಕ್ಕಾಗಿ "ಆಶ್ಲೇಷ ಬಲಿ" ಮಾಡಬಹುದು. ಸುಬ್ರಮಣ್ಯ, ಕಾಳಸರ್ಪ ಮತ್ತು ಕುಜದೋಷ ತೊಂದರೆ ಇರುವವರಿಗೆ ಪರಿಹಾರ ನೀಡುವ ದೇವರು. ಈ ಪೂಜೆಯ ವಿಧಿ ನಿಯಮದಂತೆ ಎಂಟು ಜಾತಿಯ ನಾಗಗಳಾದ ಸರ್ಪ, ಅನಂತ, ಶೇಷ, ಕಪಿಲಾ, ನಾಗ, ಕಾರ್ಕೋಟಕ, ಶಂಖಪಾಲ ಮತ್ತು ಭೂದರ ಇವರುಗಳಿಗೆ ಪ್ರಧಾನ ಹೋಮ, ಕಳಸಪೂಜೆ, ನವಶಕ್ತಿ ಪೂಜೆ, ಮಂಡಲ ಪೂಜೆ ಮುಂತಾದ ಹದಿನಾರು ರೀತಿಯ ಪೂಜೋಪಚಾರಗಳ ಮೂಲಕ ಬಲಿದಾನ ಕೊಡಲಾಗುವುದು. ಈ ಪೂಜೆಯಲ್ಲಿ ಒಟ್ಟು ಎರಡು ಮಂಡಲವನ್ನು ಬರೆಯಲಾಗುವುದು. ಬಲಬದಿಯಲ್ಲಿ ಒಂಬತ್ತು ಚೌಕಗಳು ಮತ್ತು ಎಡಮಂಡಲದ ಸುತ್ತ ನಾಗದೇವರ ಶರೀರದ ರಚನೆ ಮತ್ತು ತುದಿಯಲ್ಲಿ ಹೆಡೆಯ ಚಿತ್ರ ವಿರುತ್ತದೆ.

ಕಾಳ ಸರ್ಪದೋಷಕ್ಕೆ ಪರಿಹಾರ ಮಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ 

ಬಲಬದಿಯ ಮಂಡಲದಲ್ಲಿರುವ ಒಂಬತ್ತು ಚೌಕಗಳಲ್ಲಿ ಒಂಬತ್ತು ಪ್ರಧಾನ ದೇವತೆಗಳನ್ನು ಆಹ್ವಾನಿಸಲಾಗುವುದು. ಮಂಡಲದ ಮಧ್ಯೆ 52 ಚೌಕಗಳಲ್ಲಿ ನಾಗದೇವರ ವಿವಿಧ ಅವತಾರಗಳ ಸ್ಥಾನವಿರುತ್ತದೆ. ಮೊದಲ ಮಂಡಲದ 9 ಮತ್ತು ಎರಡನೇ ಮಂಡಲದ 76 ಸ್ಥಾನಗಳಲ್ಲಿ ಕಲ್ಪೋಕ್ತ ಪೂಜೆ ಮುಂತಾದ ವಿಧಿವಿಧಾನ ನಡೆದು, ಪ್ರತಿಯೊಂದು ಚೌಕದಲ್ಲೂ ದರ್ಭೆಯ ಮೇಲೆ ಪಿಂಡ ಅದರ ಮೇಲೆ ಅಪ್ಪ(ಒಂದು ಬಗೆಯ ಭಕ್ಷ್ಯ) ಮತ್ತು ತುಪ್ಪದ ದೀಪ ಮತ್ತು ಹೂವು ಇಡಲಾಗುವುದು. ಶ್ರದ್ದೆ, ಭಕ್ತಿಯಿಂದ ಯಾರು ಆಶ್ಲೇಷ ಪೂಜೆ ನಡೆಸುತ್ತಾರೋ ಅವರ ಎಲ್ಲಾ ಮನದಾಸೆಯನ್ನು ಸುಬ್ರಮಣ್ಯ ನಾಗದೇವರು ನಡೆಸಿ ಕೊಡುತ್ತಾರೆನ್ನುವುದು ನಂಬಿಕೆ.