Asianet Suvarna News Asianet Suvarna News

ಯಾವ ವಾರ, ಯಾವ ದೇವರಿಗೆ ಹೇಗೆ ಪೂಜೆ ಸಲ್ಲಿಸಬೇಕು?

ಪ್ರತಿವಾರಕ್ಕೂ ಮೀಸಲಾದ ಒಬ್ಬ ದೇವರಿರುತ್ತಾರೆ. ಅವರನ್ನು ಆರಾಧಿಸುವ ರೀತಿಯೂ ವಿಭಿನ್ನ. ಯಾವ ದೇವರಿಗೆ ಯಾವಾಗ, ಹೇಗೆ ಪೂಜೆ? ತಿಳಿಯೋಣ.

Which week we have to worship which god
Author
Bengaluru, First Published Jul 29, 2021, 4:29 PM IST
  • Facebook
  • Twitter
  • Whatsapp

ಯಾವ ದೇವರಿಗೆ ಯಾವಾಗ ಪೂಜೆ ಮಾಡಿದರೂ ಒಳ್ಳೆಯದೇ. ಯಾವ ದೇವರೂ ಪೂಜೆಯನ್ನು ನಿರಾಕರಿಸುವುದಿಲ್ಲ. ಆದರೆ ಆಯಾ ದೇವರಿಗೇ ಮೀಸಲಾದ ಕೆಲವು ವಾರಗಳಿರುತ್ತವೆ. ಅಂದು ಆಯಾ ದೇವರಿಗೇ ಪೂಜೆ ಸಲ್ಲಿಸುವುದರಿಂದ ಹೆಚ್ಚು ಪ್ರಯೋಜನ; ಯಾಕೆಂದರೆ ಆಯಾ ದಿನವು ಆಯಾ ದೇವರಿಗೆ ಅರ್ಚನೆ ಸಲ್ಲಿಸಲು ಪವಿತ್ರ ಎಂದು ಪರಿಗಣಿಸಲ್ಪಡುತ್ತದೆ. ಯಾವ ದೇವರಿಗೆ ಪೂಜೆ ಮಾಡಿದರೂ ಸಲ್ಲುವುದು ಒಬ್ಬನಿ(ಳಿ)ಗೇ ಎಂಬುದು ನಮ್ಮ ಧರ್ಮದ ನಂಬಿಕೆಯ ತಳಹದಿ. ಆದರೂ ಆತನನ್ನು ವಿವಿಧ ನಾಮ ರೂಪಗಳಲ್ಲಿ ಆರಾಧಿಸಿದಾಗಲೇ ಹಲವರಿಗೆ ನೆಮ್ಮದಿಯಾಗುವುದು. ಪುರಾಣಗಳಲ್ಲಿ ವಾರದ ಪ್ರತಿದಿನವೂ ವಿಭಿನ್ನ ದೇವರುಗಳಿಗೆ ಸಮರ್ಪಿಸಲಾಗಿದೆ. ಮಾತ್ರವಲ್ಲ, ಪ್ರತಿದಿನ ತನ್ನದೇ ಆದ ಆಚರಣೆಗಳು, ಆರಾಧನೆ ಮತ್ತು ಅವರನ್ನು ಸಂತೋಷಪಡಿಸುವ ಸಂಪ್ರದಾಯವಿದೆ. ಹಾಗಿದ್ದರೆ ಯಾವ ದಿನ, ಯಾವ ದೇವರಿಗೆ ಪೂಜೆ ಮಾಡಬೇಕು, ಹೇಗೆ ಮಾಡಬೇಕು? 

ಸೋಮವಾರ- ಶಿವ
ಸೋಮವಾರ ಶಿವನಿಗೆ ಮೀಸಲಾದ ದಿನ. ಶಿವ ಮತ್ತು ಪಾರ್ವತಿ ದೇವಿ ಬ್ರಹ್ಮಾಂಡದ ಸೃಷ್ಟಿಯನ್ನು ಪ್ರತಿನಿಧಿಸುತ್ತಾರೆ. ಶಿವನನ್ನು ಅಲಂಕರಿಸುವ ಚಂದ್ರನಿಗೆ ಈ ದಿನವನ್ನು ಅರ್ಪಿಸಲಾಗಿದೆ ಎಂದು ನಂಬಲಾಗಿದೆ. ಶಿವನನ್ನು ಮೆಚ್ಚಿಸಲು ಸೋಮವಾರದಂದು ಭಕ್ತರು ಉಪವಾಸ ಆಚರಿಸುತ್ತಾರೆ. ಶಿವನು ತನ್ನ ಭಕ್ತರಿಗೆ ಶಾಶ್ವತ ಶಾಂತಿ, ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಭಗವಾನ್ ಶಿವ ಮಗುವಿನಂತೆ ಮುಗ್ಧ ಮತ್ತು ಸರ್ವೋತ್ತಮ. ಸೋಮವಾರದಂದು ಶಿವನ ಪೂಜೆಗೆ ಮುನ್ನ, ಮುಂಜಾನೆ ಸ್ನಾನ ಮಾಡಿ ಮತ್ತು ಮಡಿಯಾದ ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸಿ. ಶಿವನ ಪೂಜೆಗೆ ಗಂಗಾಜಲ, ಹಾಲಿನ ಮೂಲಕ ಶಿವಲಿಂಗಕ್ಕೆ ಅಭಿಷೇಕ ಮಾಡಿ. 'ಓಂ ನಮಃ ಶಿವಾಯ'' ಎಂದು ಜಪಿಸುವಾಗ ಶ್ರೀಗಂಧ, ಬಿಳಿ ಹೂವುಗಳು ಮತ್ತು ಬಿಲ್ವಪತ್ರೆ ಎಲೆಗಳನ್ನು ಶಿವಲಿಂಗಕ್ಕೆ ಅರ್ಪಿಸಿ. ಶಿವನು ಬಿಳಿ ಬಣ್ಣವನ್ನು ಇಷ್ಟಪಡುತ್ತಾನೆ. ಆದ್ದರಿಂದ ಸೋಮವಾರ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ.

ಮಂಗಳವಾರ- ಹನುಮಂತ
ಮಂಗಳವಾರ ಆಂಜನೇಯನಿಗೆ ಪ್ರೀತಿಯ ದಿನ. ಪುರಾಣಗಳಲ್ಲಿ ಹನುಮನನ್ನು ಶಿವನ ಅವತಾರ ಎಂದು ಪರಿಗಣಿಸಲಾಗಿದೆ. ಭಗವಾನ್ ಹನುಮ ಶಕ್ತಿ , ಧೈರ್ಯದ ಸಂಕೇತ. ಆಂಜನೇಯ ಭಕ್ತರ ಜೀವನದ ಅಡೆತಡೆಗಳು ಮತ್ತು ಭಯಗಳನ್ನು ನಿವಾರಿಸುತ್ತಾನೆ ಎಂದು ನಂಬುತ್ತಾರೆ. ಆದ್ದರಿಂದ ಧೈರ್ಯ ಸ್ವರೂಪಿ ಹನುಮನನ್ನು ಈ ದಿನ ಭಕ್ತರು ಪೂಜಿಸುತ್ತಾರೆ ಮತ್ತು ಕೆಲವರು ಉಪವಾಸವನ್ನು ಸಹ ಆಚರಿಸುತ್ತಾರೆ. ಮುಂಜಾನೆಯೇ ಎದ್ದು ಸ್ನಾನ ಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು. ಸೂರ್ಯ ಭಗವಂತನಿಗೆ ಅರ್ಘ್ಯವನ್ನು ಅರ್ಪಿಸಿ ಹನುಮಾನ್ ಚಾಲಿಸ್ ಜಪ ಮಾಡಬೇಕು. ನೀವು ಹನುಮಾನ್ ಚಾಲಿಸ್ ಜಪಿಸುತ್ತಿರುವಾಗ, ಕೆಂಪು ಮತ್ತು ಕಿತ್ತಳೆ ಬಣ್ಣದ ಹೂವುಗಳನ್ನು ಅರ್ಪಿಸಿ ದೀಪ ಹಚ್ಚಿ.

ಬುಧವಾರ- ಗಣೇಶ
ಬುಧವಾರ ಗಣಪನಿಗೆ ಮುಡಿಪಾಗಿಡಲಾದ ದಿನ. ಗಣೇಶ ಬುದ್ಧಿಶಕ್ತಿ, ಕಲಿಕೆ ಮತ್ತು ಕಲೆಗಳ ದೇವರು. ಭಕ್ತರ ಜೀವನದಿಂದ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ನಿವಾರಿಸುವವನು ವಿನಾಯಕ ಎಂದು ನಂಬಲಾಗಿದೆ. ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಹಿಂದೂಗಳು ಗಣೇಶನನ್ನು ಪೂಜಿಸುವುದು ವಾಡಿಕೆ. ಗಣೇಶನನ್ನು ಪೂಜಿಸುವುದರ ಜೊತೆಗೆ ಜನರು ಶ್ರೀಕೃಷ್ಣನ ಅವತಾರವೆಂದು ನಂಬಲಾದ ವಿಠ್ಠಲನನ್ನು ಸಹ ಪೂಜಿಸುತ್ತಾರೆ. ಬುಧವಾರ ಗಣೇಶನನ್ನು ಪೂಜಿಸುವ ವೇಳೆ ಹಸಿರು ಹುಲ್ಲು (ಗರಿಕೆ), ಹಳದಿ ಮತ್ತು ಬಿಳಿ ಹೂವುಗಳು, ಬಾಳೆಹಣ್ಣು, ಮೋದಕ ಮತ್ತು ಸಿಹಿತಿಂಡಿಗಳನ್ನು ಅರ್ಪಿಸುವ ಮೂಲಕ ಅವನನ್ನು ಮೆಚ್ಚಿಸಬಹುದು. ಗಣೇಶನನ್ನು ಪ್ರಾರ್ಥಿಸುವ ವೇಳೆ 'ಓಂ ಗಣೇಶಾಯ ನಮಃ' ಎಂದು ಜಪಿಸಿ.

ನಿಮಗೆ ಗೊತ್ತೇ, ಶ್ರೀಕೃಷ್ಣನ ಮೈಬಣ್ಣವೇಕೆ ನೀಲಿ?

ರುವಾರ- ವಿಷ್ಣು
ಗುರುವಾರ ವಿಷ್ಣು ಮತ್ತು ಗುರು ಬೃಹಸ್ಪತಿಯನ್ನು ಪೂಜಿಸಿದರೆ ಪೂರ್ಣ ಫಲ ಎಂದು ನಂಬಲಾಗುತ್ತದೆ. ಅಲ್ಲದೇ, ಗುರುವಾರದಂದು ಸಾಯಿಬಾಬಾನ ಭಕ್ತರು ಸಾಯಿಬಾಬಾನನ್ನು ಪೂಜಿಸುತ್ತಾರೆ ಮತ್ತು ಸಾಯಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಸಹ ವಾಡಿಕೆಯಲ್ಲಿದೆ. ಗುರು ಎಂದರೆ ಬೃಹಸ್ಪತಿ ಗುರುವೇ. ಆತ ಈ ದಿನವನ್ನು ಆಳುತ್ತಾನೆ ಎಂದು ಭಕ್ತರು ನಂಬುತ್ತಾರೆ. ಈ ದಿನ ವಿಷ್ಣುವನ್ನು ಪೂಜಿಸುವುದರಿಂದ ವೈವಾಹಿಕವಾಗಿ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ, ಕುಟುಂಬದೊಳಗಿನ ಘರ್ಷಣೆ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ವಿಷ್ಣು ಮತ್ತು ಬೃಹಸ್ಪತಿಯನ್ನು ಮೆಚ್ಚಿಸಲು ತುಪ್ಪ, ಹಾಲು, ಹಳದಿ ಹೂವು ಮತ್ತು ಬೆಲ್ಲವನ್ನು ಅರ್ಪಿಸಿ. ವಿಷ್ಣು ಮತ್ತು ಬೃಹಸ್ಪತಿ ಹೆಚ್ಚಾಗಿ ಹಳದಿ ಬಟ್ಟೆಗಳನ್ನು ಧರಿಸುವುದರಿಂದ ನೀವು ಅದೇ ಬಣ್ಣದ ಬಟ್ಟೆಗಳನ್ನು ಧರಿಸಬಹುದು. ಯಾವುದೇ ಕಾರಣಕ್ಕೂ ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.
 

Which week we have to worship which god

ಶುಕ್ರವಾರ- ಲಕ್ಷ್ಮೀ
ಶುಕ್ರವಾರ ಸಿರಿಯ ಅಧಿದೇವತೆ ಲಕ್ಷ್ಮೀದೇವಿಗೆ ಮುಡಿಪಾದ ದಿನ. ಇದು ಮಹಾಲಕ್ಷ್ಮಿ, ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಯನ್ನು ಸಂಕೇತಿಸುವ ದಿನವಾಗಿದೆ. ಈ ಮೂವರು ದೇವತೆಗಳು ಹಿಂದೂ ಪುರಾಣಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದ್ದಾರೆ. ಈ ದಿನ ಉಪವಾಸವನ್ನು ಆಚರಿಸುವುದು ಮತ್ತು ಮೂರು ದೇವತೆಗಳನ್ನು ಪೂಜಿಸುವುದರಿಂದ ಅವರ ಜೀವನದಲ್ಲಿ ಸಮೃದ್ಧಿ, ಸಂಪತ್ತು, ಸಕಾರಾತ್ಮಕತೆ ಮತ್ತು ಸಂತೃಪ್ತಿ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ. ಈ ದಿನ ದೇವತೆಗಳಿಗೆ ಪೂಜೆ ಮಾಡುವ ಮುನ್ನ ಭಕ್ತರು ಮುಂಜಾನೆ ಸ್ನಾನ ಮಾಡಿ, ಬಿಳಿ ಹೂವುಗಳು ಅರ್ಪಿಸಿ ಪೂಜೆ ಸಲ್ಲಿಸಬೇಕು. ಬೆಲ್ಲ, ಕಡಲೆ, ತುಪ್ಪ ಮತ್ತು ಹಾಲಿನ ಉತ್ಪನ್ನಗಳನ್ನು (ಮೊಸರು ಹೊರತುಪಡಿಸಿ) ಈ ದೇವತೆಗಳಿಗೆ ಅರ್ಪಿಸಿದರೆ ಅವರ ಕೃಪಾಶೀರ್ವಾದಕ್ಕೆ ಕಾರಣರಾಗಬಹುದು. ಇಂದು ಉಪ್ಪು, ಬೆಳ್ಳುಳ್ಳಿ ಮತ್ತು ಈರುಳ್ಳಿ ಇಲ್ಲದೆ ತಯಾರಿಸಿದ ಆಹಾರವನ್ನು ಹೊರತುಪಡಿಸಿ ಬೇರೇನನ್ನೂ ತಿನ್ನಬಾರದು. ಸೂರ್ಯಾಸ್ತದ ನಂತರವೇ ಆಹಾರ ಸೇವಿಸಬೇಕು. ಈ ದಿನ ನೀವು ಬಿಳಿ ಮತ್ತು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು.

ಕೌರವನ ಪತ್ನಿ ಭಾನುಮತಿಗೂ ಕರ್ಣನಿಗೂ ಇದ್ದ ಸಂಬಂಧವೇನು?

ಶನಿವಾರ- ಶನಿ
ಶನಿವಾರ ಹೆಸರೇ ಹೇಳುವಂತೆ ಶನಿ ದೇವರಿಗೆ ಮೀಸಲು. ಶನೀಶ್ವರ ನಮ್ಮ ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲ ನೀಡುವನು ಅಥವಾ ಶಿಕ್ಷಿಸುವವನು ಎಂಬ ಬಲವಾದ ನಂಬಿಕೆ ಜನರಲ್ಲಿದೆ. ಅವನನ್ನು ಕರ್ಮದ ಪ್ರತಿಪಾದಕ ಎಂದೂ ಕರೆಯಬಹುದು. ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಹೆಚ್ಚಾಗಿ ಶನಿವಾರವನ್ನು ಆರಾಧಿಸುತ್ತಾರೆ ಮತ್ತು ಅದು ತಪ್ಪದೇ ಶನಿ ದೇವರ ದರ್ಶನ ಪಡೆಯುತ್ತಾರೆ. ಈ ದಿನ ಶನಿಯನ್ನು ಪೂಜಿಸುವುದರಿಂದ ಸಂತೋಷ, ಸಂಪತ್ತು ಮತ್ತು ಅದೃಷ್ಟ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಶನಿಯ ಕೃಪೆಗೆ ಒಳಗಾಗಲು ಬಡವರಿಗೆ ಭಿಕ್ಷೆ ನೀಡಿ ಮತ್ತು ಅಗತ್ಯವಿರುವವರಿಗೆ ಸಹಯಾ ಮಾಡಿದರೆ ಶೀಘ್ರ ಉತ್ತಮ ಪ್ರತಿಫಲ ಪಡೆಯುವಿರಿ. ಅಲ್ಲದೇ ಈ ದಿನ ಶನಿಗೆ ಕಪ್ಪು ಸಾಸಿವೆ, ಧೂಪ, ದೀಪ, ಪಂಚಾಮೃತ ಮತ್ತು ಹೂವುಗಳನ್ನು ಅರ್ಪಿಸಿ. ಶನಿಗೆ ಕಪ್ಪು ಬಣ್ಣ ಶ್ರೇಷ್ಠ ಅಥವಾ ಅವನ ಇಷ್ಟದ ಬಣ್ಣ ಎಂದು ನಂಬಲಾಗಿದೆ. ಆದ್ದರಿಂದ, ಈ ದಿನದಂದು ಕಪ್ಪು ಬಣ್ಣದ ಉಡುಪನ್ನು ಧರಿಸುವುದರಿಂದ ಒಳ್ಳೆಯದಾಗುತ್ತದೆ.

ಭಾನುವಾರ- ಸೂರ್ಯ
ಭಾನುವಾರ ಸೂರ್ಯನ ವಾರ. ಪುರಾಣಗಳಲ್ಲಿ ಭಗವಾನ್ ಸೂರ್ಯನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಭಗವಾನ್ ಸೂರ್ಯ ದೇವ ಭೂಮಿ ಮೇಲಿರುವ ಸಕಲ ಜೀವ ರಾಶಿಗಳಿಗೂ ಜೀವನ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತಾನೆ. ತನ್ನ ಭಕ್ತರಿಗೆ ಉತ್ತಮ ಆರೋಗ್ಯ, ಸಕಾರಾತ್ಮಕತೆ ಮತ್ತು ಚರ್ಮದ ಕಾಯಿಲೆಗಳು ಬರದಂತೆ ಅಥವಾ ಶೀಘ್ರ ಗುಣಮುಖವಾಗುವಂತೆ ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಭಾನುವಾರ ಸೂರ್ಯನನ್ನು ಪೂಜಿಸುವ ಮೊದಲು ಮನೆಯನ್ನು ಸ್ವಚ್ಛಗೊಳಿಸಿ, ನೀವು ಸಹ ಮುಂಜಾನೆಯೇ ಶುದ್ಧವಾಗಿ ಸ್ನಾನ ಮಾಡಿ ಗಾಯತ್ರಿ ಮಂತ್ರವನ್ನು ಜಪಿಸುವಾಗ ಅರ್ಘ್ಯವನ್ನು ಅರ್ಪಿಸಬೇಕು. ಭಗವಾನ್ ಸೂರ್ಯನನ್ನು ಪೂಜಿಸುವಾಗ ಕುಂಕುಮ ಮಿಶ್ರಿತ ಶ್ರೀಗಂಧವನ್ನು ಹಣೆಗೆ ಹಚ್ಚಿಕೊಳ್ಳಿ. ಉಪವಾಸವನ್ನು ಆಚರಿಸಿ ಸೂರ್ಯನನ್ನು ಪೂಜಿಸಿದರೆ ಒಳ್ಳೆಯದು. ಅಥವಾ ಆಚರಣೆಯ ಭಾಗವಾಗಿ ದಿನಕ್ಕೆ ಒಂದು ಬಾರಿ ಮಾತ್ರ ತಿನ್ನಬಹುದು, ಅದೂ ಸೂರ್ಯಾಸ್ತದ ಮೊದಲು. ನೀವು ಸೇವಿಸುವ ಆಹಾರದಲ್ಲಿ ಬೆಳ್ಳುಳ್ಳಿ, ಈರುಳ್ಳಿ ಮತ್ತು ಉಪ್ಪು ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಸೂರ್ಯನಿಗೆ ಕೆಂಪು ಬಣ್ಣ ಎಂದರೆ ಇಷ್ಟ. ಆದ್ದರಿಂದ ಕೆಂಪು ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಕೆಂಪು ಬಣ್ಣದ ಹೂವುಗಳನ್ನು ಸೂರ್ಯನಿಗೆ ಅರ್ಪಿಸಿದರೆ ಶ್ರೇಷ್ಠ.

ಈ ಜನ್ಮರಾಶಿಯವರು ಈ ವಾಸ್ತು ಟಿಪ್ಸ್ ಅನುಸರಿಸಿದರೆ ಅದೃಷ್ಟ ಲಕ್ಷ್ಮಿ ನಿಮ್ಮವಳೇ!

Follow Us:
Download App:
  • android
  • ios